ಜೇನು ಕಲಬೆರಕೆ ತಡೆಗಟ್ಟಲು ಕಾಯ್ದೆ ಜಾರಿ: ಸಚಿವ ವಿ.ಸೋಮಣ್ಣ

Update: 2019-12-27 18:05 GMT

ಬೆಂಗಳೂರು, ಡಿ.27: ಜೇನು ಕಲಬೆರಕೆ ಮಾರಾಟಗಾರರಿಂದ ಜೇನು ಕೃಷಿಕರಿಗೆ ಅನ್ಯಾಯವಾಗುತ್ತಿದ್ದು, ಇದನ್ನು ನಿಲ್ಲಿಸದಿದ್ದರೆ ಜೇನು ಕೃಷಿಕರಿಗೆ ಅವರ ಶ್ರಮದ ಫಲ ಸಿಗುವುದಿಲ್ಲ. ಆದುದರಿಂದ, ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಕಲಬೆರಕೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಕಾಯ್ದೆ ಜಾರಿಗೆ ತರಲಿದೆ ಎಂದು ವಸತಿ, ತೋಟಗಾರಿಕೆ ಹಾಗೂ ರೇಷ್ಮೆ ಸಚಿವ ವಿ.ಸೋಮಣ್ಣ ತಿಳಿಸಿದರು.

ಶುಕ್ರವಾರ ನಗರದ ಲಾಲ್‌ಬಾಗ್‌ನಲ್ಲಿರುವ ಡಾ.ಎಂ.ಎಚ್.ಮರಿಗೌಡ ಸ್ಮಾರಕ ಭವನದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಜೇನು ಸಾಕಾಣಿಕೆ ಕಾರ್ಯಾಗಾರ ಹಾಗೂ ‘ಮಧುಮಹೋತ್ಸವ -2019’ರ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಜೇನು ಕೃಷಿಯು ರೈತರ ಬದುಕಿನಲ್ಲಿ ಸುಧಾರಣೆ ತರುವುದರ ಜೊತೆಗೆ, ತೋಟಗಾರಿಕೆ ಹಾಗೂ ಕೃಷಿ ಬೆಳೆಗಳ ಉತ್ಪಾದನೆ ಹೆಚ್ಚಿಸುವಲ್ಲಿ ಗಣನೀಯ ಪಾತ್ರ ವಹಿಸುತ್ತದೆ. ಈ ಬಗ್ಗೆ ಜೇನು ಕೃಷಿ ಉತ್ಪಾದಕರಿಗೆ ಅರಿವು ಮೂಡಿಸಲು ತೋಟಗಾರಿಕೆ ಇಲಾಖೆಯ ನಿರ್ದೇಶಕರು ಈ ಮೂರುದಿನಗಳ ಕಾರ್ಯಾಗಾರ ಆಯೋಜಿಸಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಸರಕಾರವು ರೈತರ ಅಭ್ಯುದಯಕ್ಕಾಗಿ ಜಾರಿಗೊಳಿಸುವ ಯೋಜನೆಗಳನ್ನು ಸಮರ್ಪಕವಾಗಿ ರೈತರಿಗೆ ತಲುಪಿಸಲು ಅಧಿಕಾರಿಗಳು ದಕ್ಷತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಸೋಮಣ್ಣ ಕರೆ ನೀಡಿದರು.

ಜೇನು ಸಂತತಿ ಕ್ಷೀಣಿಸುತ್ತಿರುವ ಸಂದರ್ಭದಲ್ಲಿ ಶಿರಸಿ ತಾಲೂಕಿನ ಮಧುಕೇಶ್ವರ ಜೆ.ಹೆಗಡೆ ಎಂಬ ರೈತ ಕೇವಲ 20 ಸಾವಿರ ರೂ.ಗಳ ಬಂಡವಾಳ ಹೂಡಿ ಈಗ 1.50 ಕೋಟಿ ರೂ.ವ್ಯವಹಾರ ಮಾಡುತ್ತಿದ್ದಾರೆ. ಯಾವುದೇ ವ್ಯಕ್ತಿ ಮನಸ್ಸು ಮಾಡಿದರೆ ಏನನ್ನಾದರೂ ಸಾಧನೆ ಮಾಡಬಹುದು ಎಂಬುದಕ್ಕೆ ಇವರು ಉದಾಹರಣೆ ಎಂದು ಸೋಮಣ್ಣ ಹೇಳಿದರು.

ಇದೇ ಸಂದರ್ಭದಲ್ಲಿ 17 ಜನ ಪ್ರಗತಿಪರ ಜೇನು ಕೃಷಿಕರನ್ನು ಹಾಗೂ 5 ಜೇನು ಕೃಷಿ ಸಹಕಾರ ಸಂಘಗಳನ್ನು ಸನ್ಮಾನಿಸಲಾಯಿತು ಹಾಗೂ ಜೇನು ಕೃಷಿಗೆ ಸಂಬಂಧಿಸಿದ ಕೈಪಿಡಿ ಮತ್ತು 2020ನೇ ಸಾಲಿನ ಕ್ಯಾಲೆಂಡರ್ ಅನ್ನು ಸೋಮಣ್ಣ ಬಿಡುಗಡೆ ಮಾಡಿದರು. ತೋಟಗಾರಿಕೆ ಇಲಾಖೆಯ ನಿರ್ದೇಶಕ ಬಿ.ವೆಂಕಟೇಶ್ ಮಾತನಾಡಿ, ಸರಕಾರವು ಕಳೆದ ವರ್ಷ ಜೇನು ಉತ್ಪಾದನೆಗಾಗಿ 4 ಕೋಟಿ ರೂ.ಅನುದಾನ ನೀಡಿದ್ದು, ಈ ವರ್ಷ ಅದನ್ನು 7 ಕೋಟಿ ರೂ.ಗಳಿಗೆ ಹೆಚ್ಚಿಸಿ ಜೇನು ಉತ್ಪಾದಕರಿಗೆ ಪ್ರೋತ್ಸಾಹ ನೀಡುತ್ತಿದೆ. ಈ ಕಾರ್ಯಾಗಾರದಲ್ಲಿ 25 ಜೇನು ಮಳಿಗೆಗಳನ್ನು ಸ್ಥಾಪಿಸಲಾಗಿದೆ ಎಂದರು.

ಸಮಾರಂಭದಲ್ಲಿ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಉದಯ್ ಗರುಡಾಚಾರ್, ಬಿಬಿಎಂಪಿ ಸದಸ್ಯೆ ವಾಣಿ ವಿ.ರಾವ್, ತೋಟಗಾರಿಕೆ ಇಲಾಖೆಯ ಅಪರ ನಿರ್ದೇಶಕ ಡಾ.ಪ್ರಕಾಶ್ ಎಂ.ಸೊರಬ ಹಾಗೂ ವಿವಿಧ ಜಿಲ್ಲೆಗಳಿಂದ ಆಗಮಿಸಿದ ನೂರಾರು ರೈತರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News