ವಾಹನಗಳಿಗೆ ಕನ್ನಡ ಅಂಕಿ ಅಕ್ಷರ ಬರೆಯುವ ಕಾರ್ಯಕ್ಕೆ ಚಾಲನೆ

Update: 2019-12-27 18:15 GMT

ಬೆಂಗಳೂರು, ಡಿ.27: ದ್ವಿಚಕ್ರ ವಾಹನಗಳ ಸಂಖ್ಯಾ ಫಲಕದಲ್ಲಿ ಕನ್ನಡ ಅಂಕಿಗಳನ್ನು ಬರೆಯುವ ಮೂಲಕ ಕನ್ನಡವನ್ನು ಜೀವಂತವಾಗಿಸುವ ಕಾರ್ಯಕ್ಕೆ ಕನ್ನಡ ಅನುಷ್ಠಾನ ಮಂಡಳಿ ಮುಂದಾಗಿದ್ದು, ಶುಕ್ರವಾರ ವಾಹನಗಳಿಗೆ ಕನ್ನಡ ಅಂಕಿ ಅಕ್ಷರ ಬರೆಯುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ನಗರದ ಮಲ್ಲೇಶ್ವರಂ ಆಟದ ಮೈದಾನದಲ್ಲಿ ಕನ್ನಡ ಅನುಷ್ಠಾನ ಮಂಡಳಿ ವತಿಯಿಂದ ಆಯೋಜಿಸಿದ್ದ ಕನ್ನಡ ಅಂಕಿ ಬಳಕೆ ಸಪ್ತಾಹ ಕಾರ್ಯಕ್ರಮದಲ್ಲಿ ಅಧ್ಯಕ್ಷ ಆರ್.ಎ.ಪ್ರಸಾದ್ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಸೋಮಶೇಖರ್ ಅವರು ದ್ವಿಚಕ್ರ ವಾಹನಗಳಿಗೆ ಕನ್ನಡ ಅಂಕಿಗಳನ್ನು ಬರೆದರು. ಕರ್ನಾಟಕವು ಗಣರಾಜ್ಯವಾಗಿ ಸಂವಿಧಾನ ಬದ್ಧ ರಾಜ್ಯ ಭಾಷೆಯಾದ ಕನ್ನಡವನ್ನು ಎಲ್ಲ ಹಂತಗಳಲ್ಲೂ ಅನುಷ್ಠಾನಕ್ಕೆ ತರಲು ಸಾಂವಿಧಾನಿಕವಾಗಿ ಬದ್ಧವಾಗಿದೆ. ಕನ್ನಡ ಅಂಕಿ ಬಳಕೆ ಬಗ್ಗೆ ಯುವಜನತೆ ಆಸಕ್ತಿ ವಹಿಸುತ್ತಿಲ್ಲವಾದ ಕಾರಣ ಕನ್ನಡ ಅಂಕಿಗಳು ಮರೆಯಾಗುವ ಆತಂಕ ನಿರ್ಮಾಣವಾಗಿದೆ ಎಂದು ಸೋಮಶೇಖರ್ ತಿಳಿಸಿದರು.

ಈ ಹಿನ್ನೆಲೆಯಲ್ಲಿ ಕನ್ನಡವನ್ನು ಉಳಿಸಲು ಸಾಮೂಹಿಕವಾಗಿ ವಾಹನಗಳ ಸಂಖ್ಯಾಫಲಕಗಳಿಗೆ ಉಚಿತವಾಗಿ ಕನ್ನಡ ಅಂಕಿ ಬರೆಯುವ ಒಂದು ಪ್ರಯತ್ನ ಇದಾಗಿದೆ. ಎಲ್ಲರೂ ತಮ್ಮ ತಮ್ಮ ವಾಹನಗಳಿಗೆ ಕನ್ನಡ ಅಂಕಿಗಳನ್ನು ಬರೆಸಿ ಕನ್ನಡ ಉಳಿವಿಗೆ ಕಂಕಣಬದ್ಧರಾಗೋಣ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News