ದ್ವಿತೀಯ ಟೆಸ್ಟ: ಕಿವೀಸ್ ಆರಂಭಿಕ ಕುಸಿತ

Update: 2019-12-28 05:34 GMT

ಮೆಲ್ಬೋರ್ನ್, ಡಿ.27: ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಟ್ರಾವಿಸ್ ಹೆಡ್ ಅವರ ಆಕರ್ಷಕ ಶತಕದ ಬೆಂಬಲದಿಂದ ಆತಿಥೇಯ ಆಸ್ಟ್ರೇಲಿಯ ತಂಡ ದ್ವಿತೀಯ ಟೆಸ್ಟ್ ನ ಮೊದಲ ಇನಿಂಗ್ಸ್‌ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ 467 ರನ್ ಗಳಿಸಿ ಆಲೌಟಾಗಿದೆ.

ಆಸ್ಟ್ರೇಲಿಯದ ಮೊದಲ ಇನಿಂಗ್ಸ್‌ಗೆ ಉತ್ತರಿಸಹೊರಟಿರುವ ಕಿವೀಸ್ ತಂಡ ಎರಡನೇ ದಿನದಾಟದಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 44 ರನ್ ಗಳಿಸಿದ್ದು, ಟಾಮ್ ಲಥಾಮ್(9) ಹಾಗೂ ರಾಸ್ ಟೇಲರ್(2)ಕ್ರೀಸ್ ಕಾಯ್ದುಕೊಂಡಿದ್ದಾರೆ. ಕಿವೀಸ್‌ನ ಎರಡು ವಿಕೆಟ್‌ಗಳನ್ನು ಉರುಳಿಸಿರುವ ಆಸ್ಟ್ರೇಲಿಯ ಆರಂಭಿಕ ಮೇಲುಗೈ ಸಾಧಿಸಿದೆ. ಕಳಪೆ ಫಾರ್ಮ್‌ನಲ್ಲಿದ್ದ ಜೀತ್ ರಾವಲ್ ಬದಲಿಗೆ ಆರಂಭಿಕ ಆಟಗಾರನಾಗಿ ಕಣಕ್ಕಿಳಿದಿದ್ದ ಟಾಮ್ ಬ್ಲಂಡೆಲ್ 19 ಎಸೆತಗಳಲ್ಲಿ 15 ರನ್ ಗಳಿಸಿ ಪ್ಯಾಟ್ ಕಮಿನ್ಸ್‌ಗೆ ವಿಕೆಟ್ ಒಪ್ಪಿಸಿದರು. ಕೇವಲ 14 ಎಸೆತಗಳನ್ನು ಎದುರಿಸಿದ ನಾಯಕ ಕೇನ್ ವಿಲಿಯಮ್ಸನ್(9)ಜೇಮ್ಸ್ ಪ್ಯಾಟಿನ್ಸನ್ ಎಸೆತವನ್ನು ಕೆಣಕಲು ಹೋಗಿ ವಿಕೆಟ್‌ಕೀಪರ್ ಟಿಮ್ ಪೈನ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು 296 ರನ್‌ಗಳ ಅಂತರದಿಂದ ಸೋತಿರುವ ಪ್ರವಾಸಿ ನ್ಯೂಝಿಲ್ಯಾಂಡ್‌ಗೆ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸಮಬಲ ಸಾಧಿಸಲು ಈ ಪಂದ್ಯವನ್ನು ಗೆಲ್ಲಲೇಬೇಕಾಗಿದೆ.

  ಇದಕ್ಕೂ ಮೊದಲು ಟೀ ವಿರಾಮದ ವೇಳೆಗೆ 5 ವಿಕೆಟ್‌ಗಳ ನಷ್ಟಕ್ಕೆ 431 ರನ್ ಗಳಿಸಿ ಪಂದ್ಯದಲ್ಲಿ ಸಂಪೂರ್ಣ ಹಿಡಿತ ಸಾಧಿಸಿದ್ದ ಆಸ್ಟ್ರೇಲಿಯ ದಿಢೀರ್ ಕುಸಿತ ಕಂಡು 467 ರನ್‌ಗೆ ಆಲೌಟಾಯಿತು.ಟೀ ವಿರಾಮದ ಬಳಿಕ ನಾಯಕ ಟಿಮ್ ಪೈನ್ 79 ರನ್ ಗಳಿಸಿ ಔಟಾದರು. ಮಿಚೆಲ್ ಸ್ಟಾರ್ಕ್ ಕೇವಲ 1 ರನ್ ಗಳಿಸಿದರು. ಹೆಡ್, ಪ್ಯಾಟ್ ಕಮಿನ್ಸ್(0) ಹಾಗೂ ನಥಾನ್ ಲಿಯೊನ್(1) ಪೆವಿಲಿಯನ್‌ಗೆ ಪರೇಡ್ ನಡೆಸಿದರು. ನೀಲ್ ವಾಗ್ನರ್(4-83) ಹಾಗೂ ಟಿಮ್ ಸೌಥಿ(3-103)ಆಸ್ಟ್ರೇಲಿಯವನ್ನು ಕಾಡಿದರು. ಆಸ್ಟ್ರೇಲಿಯ 7 ವಿಕೆಟ್ ನಷ್ಟಕ್ಕೆ 257 ರನ್‌ನಿಂದ 2ನೇ ದಿನದಾಟವನ್ನು ಆರಂಭಿಸಿತು. 77 ರನ್ ಗಳಿಸಿದ ಸ್ಟೀವ್ ಸ್ಮಿತ್ ಹಾಗೂ 25 ರನ್ ಗಳಿಸಿದ ಹೆಡ್ ಬ್ಯಾಟಿಂಗ್ ಮುಂದುವರಿಸಿದರು. ಕಳಪೆ ಫಾರ್ಮ್‌ನಲ್ಲಿದ್ದ ಹೆಡ್ ತೀವ್ರ ಒತ್ತಡದೊಂದಿಗೆ ಕಣಕ್ಕಿಳಿದಿದ್ದರು. 222 ಎಸೆತಗಳಲ್ಲಿ 2ನೇ ಶತಕವನ್ನು ಸಿಡಿಸಿದ ಹೆಡ್ ಟೀಕಾಕಾರರ ಬಾಯಿ ಮುಚ್ಚಿ ಸಿದರು. ಈ ಹಿಂದೆ ಕ್ಯಾನ್‌ಬೆರ್ರಾದಲ್ಲಿ ಶ್ರೀಲಂಕಾ ವಿರುದ್ಧ ಶತಕ (161)ಸಿಡಿಸಿದ್ದ 25ರ ಹರೆಯದ ಹೆಡ್ ತಾಳ್ಮೆಯ ಇನಿಂಗ್ಸ್ ಆಡಿದರು.

ಶತಕ ತಲುಪಿದ ತಕ್ಷಣ ಆಕ್ರಮಣಕಾರಿ ಆಟಕ್ಕೆ ಮುಂದಾದ ಹೆಡ್ 114 ರನ್(234 ಎಸೆತ, 12 ಬೌಂಡರಿ)ಗಳಿಸಿ ವಾಗ್ನರ್‌ಗೆ ವಿಕೆಟ್ ಒಪ್ಪಿಸಿದರು.

  

ಹೆಡ್‌ಗೆ ಇಂದು ನಾಯಕ ಪೈನ್ ಸಮರ್ಥ ಸಾಥ್ ನೀಡಿದರು. ಕೇವಲ 72 ಎಸೆತಗಳಲ್ಲಿ ಏಳನೇ ಅರ್ಧಶತಕ ಪೂರೈಸಿದ 35ರ ಹರೆಯದ ಪೈನ್, ವಾಗ್ನರ್ ಬೀಸಿದ ಎಲ್ಬಿಡಬ್ಲು ಬಲೆಗೆ ಬಿದ್ದರು. ಈ ಮೂಲಕ ಚೊಚ್ಚಲ ಶತಕ ಸಿಡಿಸುವ ಅವಕಾಶವನ್ನು ಕಳೆದುಕೊಂಡರು. ಪೈನ್ ಔಟಾದ ಬಳಿಕ ಬಂದ ಸ್ಟಾರ್ಕ್ ಕೇವಲ ಮೂರು ಎಸೆತವನ್ನು ಎದುರಿಸಿ ಸೌಥಿ ಎಸೆತಕ್ಕೆ ಔಟಾದರು. ಕಮಿನ್ಸ್ ಹಾಗೂ ಲಿಯೊನ್ ಕೇವಲ ಒಂದು ರನ್ ಗಳಿಸಲಷ್ಟೇ ಶಕ್ತರಾದರೆ, ಪ್ಯಾಟಿನ್ಸನ್ ಔಟಾಗದೆ 14 ರನ್ ಗಳಿಸಿದರು. ಭೋಜನ ವಿರಾಮಕ್ಕೆ ಮೊದಲು ಸ್ಮಿತ್(85, 242 ಎಸೆತ, 8 ಬೌಂಡರಿ,1 ಸಿಕ್ಸರ್)ವಿಕೆಟನ್ನು ಉರುಳಿಸಿದ್ದ ನ್ಯೂಝಿಲ್ಯಾಂಡ್ ಇದರ ಲಾಭ ಪಡೆಯಲು ವಿಫಲವಾಯಿತು. ಟೆಸ್ಟ್‌ನಲ್ಲಿ 27ನೇ ಹಾಗೂ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಐದನೇ ಶತಕ ಗಳಿಸುವತ್ತ ಚಿತ್ತವಿರಿಸಿದ್ದ ಸ್ಮಿತ್‌ಗೆ ವಾಗ್ನರ್ ಬೌನ್ಸರ್ ಎಸೆತದ ಮೂಲಕ ನಿರಾಸೆವುಂಟು ಮಾಡಿದರು. 242 ಎಸೆತಗಳ ಸ್ಮಿತ್ ಇನಿಂಗ್ ್ಸ ಗೆ ವಾಗ್ನರ್ ತೆರೆ ಎಳೆದರು. ಇಂದು ಔಟಾಗುವ ಮೊದಲು ಒಂದು ಗಂಟೆಗೂ ಅಧಿಕ ಸಮಯ ಕ್ರೀಸ್‌ನಲ್ಲಿದ್ದ ಸ್ಮಿತ್ ನಿನ್ನೆಯ ಸ್ಕೋರ್‌ಗೆ ಕೇವಲ 8 ರನ್ ಸೇರಿಸಿ ಔಟಾದರು.

ಸಂಕ್ಷಿಪ್ತ ಸ್ಕೋರ್

► ಆಸ್ಟ್ರೇಲಿಯ ಮೊದಲ ಇನಿಂಗ್ಸ್: 155.1 ಓವರ್‌ಗಳಲ್ಲಿ 467/10

(ಹೆಡ್ 114, ಸ್ಮಿತ್ 85, ಪೈನ್ 79, ಲ್ಯಾಬುಶೆನ್ 63, ವಾಗ್ನರ್ 4-83, ಸೌಥಿ 3-103, ಗ್ರಾಂಡ್‌ಹೋಮ್ 2-68)

► ನ್ಯೂಝಿಲ್ಯಾಂಡ್ ಮೊದಲ ಇನಿಂಗ್ಸ್: 18 ಓವರ್‌ಗಳಲ್ಲಿ 44/2

(ಬ್ಲಂಡೆಲ್ 15, ಕಮಿನ್ಸ್ 1-8, ಪ್ಯಾಟಿನ್ಸನ್ 1-9)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News