ತಿಳಿವಳಿಕೆ ಹೆಚ್ಚಿಸುವ ಸಂಶೋಧನೆ ಅಗತ್ಯ: ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ

Update: 2019-12-28 14:15 GMT

ಬೆಂಗಳೂರು, ಡಿ. 28: ದೇಶದಲ್ಲಿ ನಡೆಯುವ ಎಲ್ಲ ಸಂಶೋಧನೆಗಳು ತಿಳಿವಳಿಕೆ ಹೆಚ್ಚಿಸುವ ನಿಟ್ಟಿನಲ್ಲಿರಬೇಕೇ ಹೊರತು ಮೆಚ್ಚುಗೆಯ ಸಂಶೋಧನೆ ಆಗಬಾರದು ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಇಂದಿಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.

ಶನಿವಾರ ಕಮ್ಯುನಿಟಿ ಸೆಂಟರ್ ಆಫ್ ಎಜುಕೇಷನ್ ಇನ್‌ಸ್ಟಿಟ್ಯೂಟ್‌ನ ವಜ್ರಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ಜ್ಞಾನಕ್ಕಾಗಿ ಹೊರತು ವ್ಯಕ್ತಿ ಆರಾಧನೆಗಾಗಿ ಅಲ್ಲ. ಜ್ಞಾನಾರ್ಜನೆ ನಿರಂತರ ಪ್ರಕ್ರಿಯೆ. ಸರಳ ಶಿಕ್ಷಣಕ್ಕೆ ನಾವೆಲ್ಲರೂ ಆದ್ಯತೆ ನೀಡಬೇಕು ಎಂದರು.

ವಿಶ್ವಾದ್ಯಂತ ನಡೆಯುವ ಸಂಶೋಧನೆಗಳು ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ನಿಟ್ಟಿನಲ್ಲಿ ಇರಬೇಕು. ಯಾರನ್ನೋ ಮೆಚ್ಚಿಸುವ ರೀತಿಯಲ್ಲಿ ಇರಬಾರದು. ತಿಳಿವಳಿಕೆ ಹೆಚ್ಚಿಸುವ ಸಂಶೋಧನೆಗಳಿಗೆ ಶಿಕ್ಷಣ ಸಂಸ್ಥೆಗಳು ಸಹಾಯ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಶಿಕ್ಷಣ ಕೇವಲ ಪದವಿಗೆ ಮಾತ್ರ ಸೀಮಿತವಾಗಬಾರದು. ಈ ದಾರಿಯಲ್ಲಿ ನಡೆಯೋ ಕೆಲಸವನ್ನು ಕಮ್ಯುನಿಟಿ ಸೆಂಟರ್ ಮಾಡುತ್ತಿದೆ. ಪ್ರತಿಯೊಬ್ಬರ ಬದುಕು ರೂಪಿಸಲು ಶಿಕ್ಷಣ ನೆರವಾಗಲಿ. ಪ್ರತಿಯೊಬ್ಬರ ಭಾವನೆಗಳಿಗೆ ಪೂರಕವಾದ ಶಿಕ್ಷಣ ಲಭ್ಯವಾಗುವಂತೆ ಮಾಡಬೇಕು ಎಂದರು.

ಸಮಾರಂಭದಲ್ಲಿ ಮಾಜಿ ಸಚಿವ ರಾಮಲಿಂಗಾರೆಡ್ಡಿ, ಪರಿಷತ್ ಸದಸ್ಯ ಯು.ಬಿ. ವೆಂಕಟೇಶ್, ಸಂಸ್ಥೆಯ ಅಧ್ಯಕ್ಷ ಕೆ.ಎಂ.ನಾಗರಾಜ್ ಸೇರಿದಂತೆ ಶಿಕ್ಷಣ ಸಂಸ್ಥೆ ಸಿಬ್ಬಂದಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News