ಬೆಂಗಳೂರು: ಎನ್‌ಆರ್‌ಸಿ-ಸಿಎಎ ವಿರೋಧಿಸಿ ಪ್ರತಿಭಟನೆ

Update: 2019-12-28 14:39 GMT

ಬೆಂಗಳೂರು, ಡಿ.28: ಪ್ರಧಾನಿ ನರೇಂದ್ರ ಮೋದಿ ಅವರು ಒಮ್ಮೆ ಕುಟುಂಬಸ್ಥರೊಂದಿಗೆ ಸಂಸಾರ ನಿಭಾಯಿಸಬೇಕು. ಆಗ ಮಾತ್ರ, ದೇಶದ ಜನರ ಪರಿಸ್ಥಿತಿ, ಅಗತ್ಯ ವಿಷಯಗಳ ಬಗ್ಗೆ ಅವರು ಮಾತನಾಡುವರು ಎಂದು ಮಹಿಳಾ ಹೋರಾಟಗಾರರು ಅಭಿಪ್ರಾಯ ವ್ಯಕ್ತಪಡಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್‌ಆರ್‌ಸಿ, ಎನ್‌ಪಿಆರ್ ವಿರೋಧಿಸಿ ಶನಿವಾರ ನಗರದ ಪುರಭವನ ಮುಂಭಾಗ ಕರ್ನಾಟಕ ಮುಸ್ಲಿಮ್ ಆಂದೋಲನ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಹಿಳಾ ಹೋರಾಟಗಾರರು ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಆಂದೋಲನ ಅಧ್ಯಕ್ಷೆ ನಗ್ಮಾ ಶೇಖ್, ಓರ್ವ ಮಹಿಳೆಗೆ ಮನೆಯ ನಿರ್ವಹಣೆ, ಆಡಳಿತದ ಜವಾಬ್ದಾರಿ ಇರುತ್ತದೆ. ಆದರೆ, ಪ್ರಧಾನಿ ಮೋದಿಗೆ ಇದೆಲ್ಲಾ ತಿಳಿದಿಲ್ಲ. ಅದಕ್ಕಾಗಿ ಅವರು, ತಮ್ಮ ಹೆಚ್ಚಿನ ಸಮಯವನ್ನು ಕುಟುಂಬಸ್ಥರೊಂದಿಗೆ ಕಳೆಯಬೇಕು. ಆಗ, ದೇಶದ ಜನರಿಗೆ ಏನು ಅಗತ್ಯವಿದೆ ಎಂದು ತಿಳಿಯಲಿದೆ ಎಂದು ನುಡಿದರು.

ಪ್ರಧಾನಿ ನರೇಂದ್ರ ಮೋದಿ ದಿನಕ್ಕೊಂದು ದೇಶಕ್ಕೆ ಹೋಗುತ್ತಾರೆ. ಲಕ್ಷಾಂತರ ರೂಪಾಯಿ ಮೌಲ್ಯದ ಬಟ್ಟೆ ಧರಿಸುತ್ತಾರೆ. ದುಬಾರಿ ಬೆಲೆಯ ಆಹಾರ, ನೀರು ಸೇವಿಸುತ್ತಾರೆ. ಆದರೂ, ತಾನೂ ಬಡವ, ಚೌಕಿದಾರ್ ಎಂದು ಹೇಳಿಕೊಳ್ಳುತ್ತಾರೆ. ಇದೆಲ್ಲಾ ನಮಗೂ ನೀಡಿ, ಬಡವರನ್ನಾಗಿಸಿ ಎಂದು ವ್ಯಂಗ್ಯವಾಡಿದರು.

ಸ್ವಾತಂತ್ರ ಹೋರಾಟದಲ್ಲಿ ನಮ್ಮ ಹಿರಿಯರು ಭಾಗವಹಿಸಿ ದೇಶಕ್ಕಾಗಿ ಹೋರಾಟ ಮಾಡಿದ್ದಾರೆ. ಸೇನೆಯಲ್ಲಿ ಮುಸ್ಲಿಮ್ ಸೈನಿಕರಿದ್ದಾರೆ. ರಾಷ್ಟ್ರಪತಿಯಾಗಿ ಅಬ್ದುಲ್ ಕಲಾಂ ಕೆಲಸ ಮಾಡಿದ್ದಾರೆ. ನಾವು ಈ ದೇಶದಲ್ಲೇ ಹುಟ್ಟಿದ್ದೇವೆ. ಇಲ್ಲೇ ಸಾಯುತ್ತೇವೆ. ಭಾರತ ಸಂವಿಧಾನ ನಮಗೆ ಬದುಕುವ ಹಕ್ಕು ನೀಡಿದೆ. ನಾವು ಇಲ್ಲಿನವರು ಎಂದು ಏಕೆ ಸಾಬೀತು ಪಡಿಸಿಕೊಳ್ಳಬೇಕು. ಹಿಂದೂ ರಾಷ್ಟ್ರ ನಿರ್ಮಾಣ ಮಾಡಬೇಕು ಎನ್ನುವ ಒಂದೇ ಉದ್ದೇಶದಿಂದ ಇಂತಹ ಕಾಯ್ದೆ ಜಾರಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News