ಮಾದಕ ವಸ್ತುಗಳ ಮೇಲೆ ತೀವ್ರ ನಿಗಾ: ಭಾಸ್ಕರ್ ರಾವ್

Update: 2019-12-28 17:05 GMT

ಬೆಂಗಳೂರು, ಡಿ.28: ಹೊಸ ವರ್ಷ ಸಂಭ್ರಮಾಚರಣೆ ವೇಳೆ ರಾಜಧಾನಿ ಬೆಂಗಳೂರು ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಮುಂಜಾಗ್ರತೆ ಕ್ರಮ ಕೈಗೊಂಡಿದ್ದು, ಮಾದಕ ವಸ್ತುಗಳ ಮೇಲೆ ತೀವ್ರ ನಿಗಾವಹಿಸಲಾಗಿದೆ. ಅದೇ ರೀತಿ, ಮದ್ಯದ ಅಮಲಿನಲ್ಲಿ ವಾಹನ ಚಾಲನೆ ಮಾಡಿದರೆ, ಪರವಾನಿಗೆ ವಶಕ್ಕೆ ಪಡೆಯಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದರು.

ಶನಿವಾರ ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಡಿ.31ರಿಂದ ನಗರ ವ್ಯಾಪ್ತಿಯಲ್ಲಿ 7 ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ಪೊಲೀಸರ ಗಸ್ತು ಸಹ ಹೆಚ್ಚಿಸಲಾಗಿದೆ ಎಂದು ಅವರು ಹೇಳಿದರು.

ನಗರದೆಲ್ಲೆಡೆ 270 ಹೊಯ್ಸಳ ಸೌಲಭ್ಯ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಯಾವುದೇ ಸಮಸ್ಯೆಗಳ ಬಗ್ಗೆ ಕರೆ ಬಂದರೂ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ತೆರಳುತ್ತೇವೆ. ಪ್ರಮುಖವಾಗಿ ಬ್ರಿಗೇಡ್ ರಸ್ತೆ, ಎಂಜಿ.ರಸ್ತೆ, ಕೋರಮಂಗಲದಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದ್ದು, 1500ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರ ಅಳವಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮದ್ಯದ ಅಮಲಿನಲ್ಲಿ ಗಲಾಟೆ ಮಾಡುವವರು, ಅಸಭ್ಯವಾಗಿ ವರ್ತಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಖಾಸಗಿ ವಾಹನ ಚಾಲಕರು ಒಬ್ಬರೇ ಮಹಿಳೆಯರು ಪ್ರಯಾಣಿಸುತ್ತಿರುವ ಸನ್ನಿವೇಶವನ್ನು ದುರ್ಬಳಕೆ ಮಾಡಿಕೊಳ್ಳಬಾರದು. ಕಾನೂನು ಉಲ್ಲಂಘಿಸಿರುವುದು ಕಂಡು ಬಂದರೆ ಕಂಪೆನಿಗಳು ಚಾಲಕರ ವಿರುದ್ದ ಸಹ ಕ್ರಮ ಕೈಗೊಳ್ಳುತ್ತೇವೆ ಎಂದರು.

ಡ್ರಗ್ಸ್ ನಿಗಾ: ಮಾದಕ ವಸ್ತು ಮಾರಾಟ ಜಾಲದ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಅದೇ ರೀತಿ, ಪ್ರತಿಷ್ಠಿತ ಹೊಟೇಲ್‌ಗಳಲ್ಲಿ ಶ್ವಾನದಳ ಮುಖಾಂತರ ತಪಾಸಣೆ ಮಾಡಲಾಗುವುದು. ಅದೇ ರೀತಿ, ಯಾರೇ ಅಪರಿಚಿತ ವ್ಯಕ್ತಿಗಳು, ತಂಪುಪಾನೀಯಗಳು ಸೇರಿ ಇನ್ನಿತರೆ ತಿಂಡಿ-ತಿನಿಸುಗಳು ನೀಡಿದರೆ ಸೇವಿಸಬಾರದು ಎಂದು ಸಲಹೆ ನೀಡಿದರು.

ಜಂಟಿ ಪೊಲೀಸ್ ಆಯುಕ್ತ(ಸಂಚಾರ) ಬಿ.ಆರ್.ರವಿಕಾಂತೇಗೌಡ ಮಾತನಾಡಿ, ಹೊಸ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದರಿಂದ ಉಂಟಾಗುವ ಅನಾಹುತಗಳನ್ನು ತಪ್ಪಿಸಲು ಈಗಾಗಲೇ ನಗರದಾದ್ಯಂತ ಪಾನಮತ್ತ ಚಾಲಕರ ಪತ್ತೆಗೆ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ ಎಂದು ತಿಳಿಸಿದರು.

ನಗರದ 134 ಕಡೆಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಯುತ್ತಿದ್ದು, ಹೊಸ ವರ್ಷದ ಸಂಭ್ರಮಾಚರಣೆಯ ಡಿ.31 ರಂದು 175 ಕಡೆಗಳಲ್ಲಿ ತಪಾಸಣೆ ನಡೆಯಲಿದೆ. ಮದ್ಯಪಾನ ಮಾಡಿ ಹೊಸ ವರ್ಷದಂದು ವಾಹನ ಚಾಲನೆ ಮಾಡುವ ಚಾಲಕರ ವಿರುದ್ಧ ಸೆಕ್ಷನ್ 279ರಡಿ (ನಿರ್ಲಕ್ಷ್ಯ, ಸಾರ್ವಜನಿಕರ ಜೀವಕ್ಕೆ ಅಪಾಯ) ಪ್ರಕರಣ ದಾಖಲಿಸಲಾಗುವುದೆಂದು ಎಚ್ಚರಿಸಿದರು.

ಸಂಚಾರ ನಿಷೇಧ: ಡಿ.31ರಂದು ರಾತ್ರಿ 8 ರಿಂದ ಮುಂಜಾನೆ 2ರವರೆಗೆ ಅನಿಲ್‌ಕುಂಬ್ಳೆ ವೃತ್ತದಿಂದ ಮೆಯೋಹಾಲ್ ರೆಸಿಡೆನ್ಸಿ ರಸ್ತೆ, ಕಾವೇರಿ ಎಂಪೋರಿಯಂನಿಂದ ಅಪೇರಾ ಜಂಕ್ಷನ್, ಬ್ರಿಗೇಡ್ ರಸ್ತೆಯಿಂದ ಮ್ಯುಸಿಯಂ ರಸ್ತೆ ಜಂಕ್ಷನ್, ಎಂಜಿ ರಸ್ತೆಯಿಂದ ಹಳೆ ಮದ್ರಾಸ್ ಬ್ಯಾಂಕ್ ವೃತ್ತ, ಮ್ಯುಸಿಯಂ ರಸ್ತೆಯಿಂದ ಬ್ರಿಗೇಡ್ ರಸ್ತೆ ಜಂಕ್ಷನ್, ರೆಸಿಡೆನ್ಸಿ ರಸ್ತೆಯಿಂದ ಎಂಜಿ ರಸ್ತೆ ಜಂಕ್ಷನ್‌ವರೆಗೆ ಸಾರ್ವಜನಿಕ ವಾಹನಗಳ ಪ್ರವೇಶ ಹಾಗೂ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದರು. ಅದೇ ರೀತಿ, ಹೊಸೂರು ಮುಖ್ಯರಸ್ತೆ, ಜಯದೇವ, ಡೈರಿ ವೃತ್ತ, ಆನಂದ್‌ರಾವ್ ವೃತ್ತ, ಮೈಸೂರು ರಸ್ತೆ, ಕಲ್ಯಾಣನಗರ ಮೇಲ್ಸೇತುವೆ, ನ್ಯಾಷನಲ್ ಕಾಲೇಜ್, ಹೊರ ವರ್ತುಲ ರಸ್ತೆ, ನಾಗವಾರ ಮೇಲ್ಸೇತುವೆ ಸೇರಿದಂತೆ ನಗರದ ಎಲ್ಲ 44 ಮೇಲ್ಸೇತುವೆಗಳಲ್ಲಿ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗುವುದು ಎಂದು ಮಾಹಿತಿ ನೀಡಿದರು.

ವಾಹನ ನಿಲುಗಡೆ: ಎಂಜಿ ರಸ್ತೆಯಲ್ಲಿ ನಡೆಯುವ ಹೊಸ ವರ್ಷದ ಸಂಭ್ರಮದಲ್ಲಿ ಪಾಲ್ಗೊಳ್ಳುವವರು ವಾಹನ ನಿಲುಗಡೆಗೆ ಮಾಣಿಕ್‌ಷಾ ಪರೇಡ್ ಮೈದಾನ ಹಾಗೂ ಶಿವಾಜಿನಗರದ ಮಲ್ಟಿಲೆವಲ್ ವಾಹನ ನಿಲುಗಡೆ ಪ್ರದೇಶದಲ್ಲಿ ಅವಕಾಶ ಮಾಡಿಕೊಡಲಾಗಿದೆ ಎಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News