ಧರ್ಮದ ಆಧಾರಿತ ದೇಶ ವಿಭಜನೆ ಸಲ್ಲ: ಪ್ರೊ.ರವಿವರ್ಮ ಕುಮಾರ್
ಬೆಂಗಳೂರು, ಡಿ.28: ಕೇಂದ್ರ ಸರಕಾರ ಧರ್ಮದ ಆಧಾರಿತವಾಗಿ ದೇಶ ವಿಭಜಿಸಲು ಮುಂದಾಗಿದೆ ಎಂದು ಮಾಜಿ ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್ ಹೇಳಿದ್ದಾರೆ.
ಶನಿವಾರ ನಗರದ ಗಾಂಧೀ ಭವನದಲ್ಲಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್(ಎಐಡಿಎಸ್‌ಓ) ವತಿಯಿಂದ ಆಯೋಜಿಸಿದ್ದ ಎನ್‌ಆರ್‌ಸಿ ಮತ್ತು ಸಿಎಎ ವಿರೋಧಿ ಹಾಗೂ ವಿದ್ಯಾರ್ಥಿಗಳ ರಾಜ್ಯಮಟ್ಟದ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೇಂದ್ರ ಸರಕಾರ ಜಾರಿ ಮಾಡಲು ಉದ್ದೇಶಿಸಿರುವ ಪೌರತ್ವ(ತಿದ್ದುಪಡಿ) ಕಾಯ್ದೆಯನ್ನು ಧರ್ಮದ ಆಧಾರಿತವಾಗಿ ಜನರ ಮೇಲೆ ಹೇರಲು ಮುಂದಾಗಿದ್ದಾರೆ. ಅದು ದೇಶದ ಸಂವಿಧಾನ ಹಾಗೂ ಪ್ರಜಾತಂತ್ರವನ್ನು ಅಣಕಿಸಿದಂತೆ ಎಂದು ಅವರು ತಿಳಿಸಿದರು.
ಕೇಂದ್ರ ಸರಕಾರವು ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಅನ್ಯಮಾರ್ಗದ ಮೂಲಕ ಅನುಮೋದನೆ ಪಡೆದುಕೊಂಡಿದೆ. ಸಾರ್ವಜನಿಕ ಚರ್ಚೆಗಳಿಲ್ಲದೆ, ಅಭಿಪ್ರಾಯಗಳನ್ನು ಪಡೆಯದೇ ಅನುಮೋದಿಸಿರುವುದು ಸಂವಿಧಾನಕ್ಕೆ ಮಾಡಿದ ಬಹುದೊಡ್ಡ ಅಪಮಾನ. ಆಡಳಿತದಲ್ಲಿರುವವರಿಗೆ ಸಂವಿಧಾನದ ಬಗ್ಗೆ ಎಳ್ಳಷ್ಟೂ ಗೌರವವಿಲ್ಲ ಎಂದು ಅವರು ಆಪಾದಿಸಿದರು.
ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಷಾ ಸೇರಿದಂತೆ ಎಲ್ಲರೂ ಸಂವಿಧಾನದ ಶಿಶುಗಳು. ಇದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ಈ ಕಾಯ್ದೆಯಿಂದ ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನ ರಾಷ್ಟ್ರಗಳನ್ನು ಗಮನದಲ್ಲಿಟ್ಟುಕೊಂಡು ಮಾಡಿರುವ ಕಾಯ್ದೆಯಿಂದಾಗಿ ಕುವೈತ್, ದುಬೈ, ಸೌದಿ ಅರೇಬಿಯಾ ರಾಷ್ಟ್ರಗಳಲ್ಲಿನ ಬಹುಸಂಖ್ಯಾತ ಹಿಂದೂಗಳಿಗೆ ಅಪಾಯವನ್ನು ಉಂಟು ಮಾಡಲಿದೆ. ಹೀಗಾಗಿ, ಹಿಂದೂಗಳಿಗೆ ಅಪಾಯವನ್ನು ತಂದೊಡ್ಡುವ ಕಾಯ್ದೆಯನ್ನು ರದ್ದುಮಾಡಬೇಕು ಎಂದು ಒತ್ತಾಯಿಸಿದರು.
ಪೌರತ್ವ(ತಿದ್ದುಪಡಿ) ಕಾಯ್ದೆಯು ದೇಶದಲ್ಲಿ ಭ್ರಷ್ಟಾಚಾರಕ್ಕೆ ನಾಂದಿಯಾಡಬಹುದು. ಭ್ರಷ್ಟ ಅಧಿಕಾರಿಗಳು ಯಾರನ್ನು ಬೇಕಾದರೂ ಅನುಮಾನಿಸಬಹುದು, ಸೆರೆಮನೆಗೆ ತಳ್ಳಬಹುದು ಎಂದ ಅವರು, ದೇಶದಲ್ಲಿ ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಜನರಿಗೆ ಈ ಧರ್ಮದ ಕಲ್ಪನೆಯೇ ಇಲ್ಲ ಎಂದರು.
ಭಾರತ ಹಿಂದೂ ಧರ್ಮದ ಪರ ವಕಾಲತ್ತು ವಹಿಸುವ ದೇಶವಲ್ಲ. ನಮ್ಮದು ಬಹುತ್ವ ದೇಶ. ಇಲ್ಲಿ ಸಂವಿಧಾನವೇ ಸಾರ್ವಭೌಮವಾಗಿದ್ದು, ಅದು ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯವರೆಗೂ ಒಂದು ಧರ್ಮದ ಆಧಾರಿತ ದೇಶವಾಗಲು ಅಸಾಧ್ಯ ಎಂದು ಅವರು ಪ್ರತಿಪಾದಿಸಿದರು.
ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಮಾತನಾಡಿ, ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ಅಹಿಂಸಾತ್ಮಕ ಹೋರಾಟ ನಡೆಸಬೇಕು. ಕೋಪಕ್ಕಿಂತ ಹೆಚ್ಚಾಗಿ ಧೈರ್ಯಕ್ಕೆ ಒತ್ತು ಕೊಡಬೇಕು. ದೌರ್ಜನ್ಯವನ್ನು ಸಮರ್ಥವಾಗಿ ಎದುರಿಸಬೇಕು ಎಂದು ಹೇಳಿದರು.
ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಸರಕಾರವು ದೇಶವನ್ನು ಹಿಂದೂರಾಷ್ಟ್ರ ಮಾಡುವ ಪ್ರಯತ್ನದಲ್ಲಿದೆ. ಆದರೆ, ಇನ್ನೂ ಸಾವಿರ ವರ್ಷಗಳಾದರೂ ಅದು ಸಾಧ್ಯವಿಲ್ಲ ಎಂದ ಅವರು, ದೇಶದಲ್ಲಿ ಬ್ರಾಹ್ಮಣ್ಯವಾದ ಹಾಗೂ ಫ್ಯಾಶಿಸಂ ಒಟ್ಟೊಟ್ಟಿಗೆ ಬೆಳೆಯುತ್ತಿವೆ ಎಂದರು.
ಕಾಯ್ದೆಯಿಂದ ದೇಶದ ಮುಸ್ಲಿಮರಿಗೆ ಯಾವುದೇ ತೊಂದರೆ ಇಲ್ಲ. ಸುಮ್ಮನೆ ಅಪಪ್ರಚಾರ ಮಾಡಲಾಗುತ್ತಿದೆ ಎಂದು ದೂರಲಾಗುತ್ತಿದೆ. ಆದರೆ, ಧರ್ಮ ತಾರತಮ್ಯ ತೋರುವ ಯಾವುದೇ ಕಾಯ್ದೆ ಸಂವಿಧಾನ ವಿರೋಧಿಯಾದುದು. ಯಾವುದೇ ಕಾಯ್ದೆ ಸಂವಿಧಾನಕ್ಕೆ ವಿರುದ್ಧವಾದುದು ಎಂದು ತಿಳಿದಾಗ ಅದನ್ನು ವಿರೋಧಿಸಲೇಬೇಕು ಎಂದು ಅವರು ಹೇಳಿದರು.
ಬಿಜೆಪಿ ಹಾಗೂ ಸಂಘಪರಿವಾರವು ದೇಶಪ್ರೇಮ, ರಾಷ್ಟ್ರೀಯತೆಯ ಹೆಸರಿನಲ್ಲಿ ನಾವೇನು ಮಾಡಿದರೂ ಜನ ವಿರೋಧ ವ್ಯಕ್ತಪಡಿಸಲ್ಲ ಎಂದು ಭಾವಿಸಿಕೊಂಡಿದ್ದಾರೆ. ಹೀಗಾಗಿ, ಅವರು ಯಾವುದಕ್ಕೂ ಹೆದರುತ್ತಿಲ್ಲ. ಆದರೆ, ಜನರ ಅಭಿಪ್ರಾಯ ಬದಲಾಗುತ್ತಿದೆ ಎಂದೆನಿಸಿದರೆ ತಕ್ಷಣ ಬದಲಾಗುತ್ತಾರೆ. ಎನ್‌ಆರ್‌ಸಿ ವಿಷಯದಲ್ಲಿ ಈಗ ಪ್ರಧಾನಿ ಹಾಗೂ ಅಮಿತ್ ಶಾ ತಮ್ಮ ವರಸೆಯನ್ನೇ ಬದಲಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಎಸ್‌ಯುಸಿಐ(ಸಿ) ರಾಜ್ಯ ಕಾರ್ಯದರ್ಶಿ ಕೆ. ಉಮಾ, ಅಂಕಣಕಾರ ಕೆ.ಸಿ.ರಘು, ಸಿಯಾಸತ್ ಪತ್ರಿಕೆಯ ಜಾಹೀರುದ್ದೀನ್ ಅಲಿ ಖಾನ್, ಎಐಡಿಎಸ್‌ಓ ರಾಷ್ಟ್ರಾಧ್ಯಕ್ಷ ವಿ.ಎನ್.ರಾಜಶೇಖರ್, ರಾಜ್ಯಾಧ್ಯಕ್ಷೆ ಕೆ.ಎಸ್.ಅಶ್ವಿನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.