ಕುವೆಂಪು ಜನ್ಮ ದಿನಾಚರಣೆ ವಿಶೇಷ; ಜತೆಗೂಡಿಸಿದ ಕೈತುತ್ತುಗಳು..!

Update: 2019-12-29 18:20 GMT

ಬೆಂಗಳೂರು, ಡಿ.29: ಅವರ ಧರ್ಮವೂ ಗೊತ್ತಿಲ್ಲ, ಜಾತಿ, ಬಣ್ಣ, ಎಲ್ಲಿಂದ ಬಂದರೂ ಸಹ ತಿಳಿದಿಲ್ಲ. ಆದರೂ, ಅವರೆಲ್ಲಾ ಒಂದು ಮರದ ಕೆಳಗೆ ಕುಳಿತು, ಬಗೆ ಬಗೆಯ ಊಟ, ತಿಂಡಿ ತಿನಿಸುಗಳ ಕೈತುತ್ತುಗಳನ್ನು ಹಂಚಿಕೊಂಡು, ನಗೆ ಮುಖದಲ್ಲಿ ಗಂಟೆಗಟ್ಟಲೆ ಮಾತನಾಡತೊಡಗಿದರು.

ಹೀಗೆ, ಪರಿಚಯವೇ ಇಲ್ಲದ ನೂರಾರು ಮಂದಿ ಜತೆಗೂಡಿದ ದೃಶ್ಯಗಳು ರವಿವಾರ ಇಲ್ಲಿನ ಕಬ್ಬನ್‌ಪಾರ್ಕ್‌ನಲ್ಲಿ ರಾಷ್ಟ್ರಕವಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ (ಕುವೆಂಪು) ಅವರ ಜನ್ಮ ದಿನದ ಅಂಗವಾಗಿ ಸಮಾನ ಮಾನಸ್ಕರು ಏರ್ಪಡಿಸಿದ್ದ, ಸಹಸ್ರ ಸಹ ಭೋಜನ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಕಂಡು ಬಂದವು.

‘ಸರ್ವಜನಾಂಗದ ಶಾಂತಿಯ ತೋಟ’ ಎಂಬ ವಾಕ್ಯದೊಂದಿಗೆ ಜತೆಯಾದ ನೂರಾರು ಮಂದಿ, ಮನೆಗಳಿಂದ ತಯಾರಿಸಿ ತಂದ, ಊಟದ ಪೊಟ್ಟಣಗಳನ್ನು ಬಿಚ್ಚಿ, ಹಂಚಿದರು.ಇನ್ನು, ಕೆಲವರು ಹೋಟೆಲ್ ಮೂಲಕ ತಂದ ಆಹಾರನ್ನು ಬಡಿಸಿದರು.

 ಚರ್ಚೆ: ಊಟ ಜತೆಯೊಂದಿಗೆ ಮಾತು ಆರಂಭಿಸಿದ ಯುವಕರು, ಪೌರತ್ವ ತಿದ್ದುಪಡಿ ಕಾಯ್ದೆಯಿಂದಾಗಿ ಶಾಂತಿಯ ತೋಟದಂತಿದ್ದ ನಾಡಿನಲ್ಲಿ ಈಗ ಗೊಂದಲದ ವಾತಾವರಣ ಉಂಟಾಗಿದೆ. ಜನರನ್ನು ಘರ್ಷಣೆಯತ್ತ ಪ್ರಚೋದನೆ ನೀಡಲಾಗುತ್ತಿದೆ. ಸಮಾಜದಲ್ಲಿ ಮತ್ತೆ ಸಾಮರಸ್ಯ ಸ್ಥಾಪಿಸುವುದಕ್ಕಾಗಿ ವಿಶ್ವಮಾನವ ಸಂದೇಶ ನೀಡಿದ ಕುವೆಂಪು ಅವರ ಜನ್ಮದಿನ ವಿೇಷವಾಗಿ ಆಚರಿಸುತ್ತಿದ್ದೇವೆ ಎಂದರು.

ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಮುಸ್ಲಿಮರಿಗೆ ಕಷ್ಟ ಎದುರಾಗಿರುವುದು ಕಟು ವಾಸ್ತವ. ಮುಸ್ಲಿಮರಿಗೆ ಮಾತ್ರವಲ್ಲದೇ ಆದಿವಾಸಿಗಳು, ಅಲೆಮಾರಿಗಳು, ಭೂರಹಿತ ದಲಿತ, ಹಿಂದುಳಿದ ವರ್ಗಗಳ ಜನರಿಗೂ ತೊಂದರೆಯಾಗಲಿದೆ. 30 ವರ್ಷಗಳ ಹಿಂದಿನ ದಾಖಲಾತಿ ಒದಗಿಸಲು ದೇಶದ ಶೇ.40ರಷ್ಟು ಜನರಿಗೆ ಕಷ್ಟವಾಗಲಿದೆ ಎಂದು ಹಿರಿಯ ನಾಗರೀಕ ತಮ್ಮಯ್ಯ ಆಚಾರ್ ಚರ್ಚೆಯಲ್ಲಿ ವಾದಿಸಿದರು.

ಸಂವಿಧಾನದ ಮುನ್ನುಡಿ ಓದು: ಸಹಸ್ರ ಸಹ ಭೋಜನ ಬಳಿಕ, ಧರ್ಮ, ಜಾತಿ, ಲಿಂಗದ ತಾರತಮ್ಯವಿಲ್ಲ. ಎಲ್ಲರೂ ಒಂದುಗೂಡಿ ಸಂವಿಧಾನದ ಮುನ್ನುಡಿ ಓದುವ ಮೂಲಕ ಗಮನ ಸೆಳೆದರು.

ನಾನೆಂಬ ಅಲ್ಪತನವನ್ನು ಕಿತ್ತೊಗೆದು ನಾವು ಎಂಬ ಚಿಂತನೆಯನ್ನು ಪಸರಿಸುವುದೇ ಸಹಬಾಳ್ವೆ, ವಿಶ್ವಮಾನವ ಸಂದೇಶ ಎಂದು ಕುವೆಂಪು ಸಾರಿದ್ದಾರೆ. ಆದರೆ, ಇಂದಿನ ಪರಿಸ್ಥಿತಿಗೆ ಇದನ್ನು ನಾವು ಗಟ್ಟಿಯಾಗಿ ಹೇಳಬೇಕಿದೆ. ಸಮಾಜದಲ್ಲಿ ಸಹಬಾಳ್ವೆ ವಾತಾವರಣ ನಿರ್ಮಾಣಕ್ಕೆ ಕುವೆಂಪು ಮಾರ್ಗದರ್ಶನವೇ ಅಸ್ತ್ರವಾಗಿದೆ.ಹಾಗಾಗಿ, ರಾಜ್ಯದ ಮೂಲೆ ಮೂಲೆಯಲ್ಲೂ ಸಹಸ್ರ ಸಹ ಭೋಜನ ಆಯೋಜಿಸಲಾಗಿದೆ ಎಂದು ಆಯೋಜಕರು ನುಡಿದರು.

ನೂರಾರು ಕಡೆ ಭೋಜನ..!
ಬೆಂಗಳೂರಿನ ಕಬ್ಬನ್‌ಪಾರ್ಕ್, ಯಲಹಂಕ ಸೇರಿದಂತೆ 30 ಕಡೆ ಸಹಭೋಜನ ಆಯೋಜನೆ ಮಾಡಲಾಗಿತ್ತು. ಭದ್ರಾವತಿ ಪಟ್ಟಣವೊಂದರಲ್ಲೇ 5, ಮಂಡ್ಯ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ 5, ವಿಜಯಪುರ ಜಿಲ್ಲೆಯ 6 ಕಡೆ ಸೇರಿ 600ಕ್ಕೂ ಹೆಚ್ಚು ಕಡೆ ಕಾರ್ಯಕ್ರಮ ನಡೆದಿದೆ.

‘ಒಂದಾಗಿ ಇರೋಣ’
ಭಾರತ ದೇಶದಲ್ಲಿ ಸೋದರತೆ, ಸಹಬಾಳ್ವೆಯಿರಬೇಕು ಎಂದು ಬಯಸುವ ಎಲ್ಲರೂ ಸೇರಿ ಸಹಸ್ರ ಸಹ ಭೋಜನ ಮಾಡಬೇಕಿದೆ.ಇದಕ್ಕಾಗಿ, ಎಲ್ಲರಲ್ಲೂ ಅರಿವು ಮೂಡಿಸುವ ಅಗತ್ಯತೆ ಹೆಚ್ಚಿದೆ ಎನ್ನುತ್ತಾರೆ ಭೋಜನದಲ್ಲಿ ಪಾಲ್ಗೊಂಡ ಯುವಕ ಹರ್ಷ ಗೌಡ.

Writer - -ಸಮೀರ್ ದಳಸನೂರು

contributor

Editor - -ಸಮೀರ್ ದಳಸನೂರು

contributor

Similar News