"ಅಪ್ರಾಪ್ತ ವಯಸ್ಕರನ್ನು ಲೈಂಗಿಕ ಕಾರ್ಯಕರ್ತರನ್ನಾಗಿ ಮಾಡಲಾಗುತ್ತಿದೆ ಎಂಬ ಆರೋಪ ಸುಳ್ಳು"
ಬೆಂಗಳೂರು, ಡಿ.30: ಸುರಕ್ಷಿತ ಲೈಂಗಿಕತೆ ಹೆಸರಿನಲ್ಲಿ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ (ಕೆಸಾಪ್ಸ್) ಎರಡು ದಶಕಗಳಿಂದ ನಡೆಸುತ್ತಿರುವ ಉಚಿತ ಕಾಂಡೋಮ್ ಹಂಚಿಕೆ ಕಾರ್ಯಕ್ರಮಕ್ಕೆ, ಅಮಾಯಕ ಬಾಲಕಿಯರು ಮತ್ತು ಮಹಿಳೆಯರು ಬಲಿಪಶುಗಳಾಗುತ್ತಿದ್ದಾರೆ ಎಂಬ ಆರೋಪ ಸತ್ಯಕ್ಕೆ ದೂರವಾದುದು, ಈ ಕುರಿತು ಮಾಜಿ ಸಚಿವೆ ಜಯಮಾಲ ಅವರು ನಮ್ಮ ಬಗ್ಗೆ ಸಂಪೂರ್ಣವಾಗಿ ತಿಳಿಯದೇ ಪಿಎಚ್‌ಡಿ ಪಡೆಯುವ ಉದ್ದೇಶದಿಂದ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆಶೋದಯ ಸಮಿತಿಯ ಕಾರ್ಯಾದರ್ಶಿ ಲಕ್ಷ್ಮಿ ಆರೋಪಿಸಿದ್ದಾರೆ.
ಸೋಮವಾರ ಪ್ರೆಸ್‌ಕ್ಲಬ್‌ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಪತ್ರಿಕೆಯೊಂದರಲ್ಲಿ ಲೈಂಗಿಕ ಕಾರ್ಯಕರ್ತರ ಕುರಿತಾದ ಲೇಖನವೊಂದು ಪ್ರಕಟಿಸಲಾಗಿತ್ತು. ಅದರಲ್ಲಿ ಅಪ್ರಾಪ್ತ ವಯಸ್ಕರನ್ನು ಲೈಂಗಿಕ ಕಾರ್ಯಕರ್ತರನ್ನಾಗಿ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಇದು ಸಂಪೂರ್ಣ ತಪ್ಪು ಮಾಹಿತಿಯಾಗಿದೆ. ಕೆಸಾಪ್ಸ್ ಈ ರೀತಿ ಯಾರನ್ನು ಬಳಸಿಕೊಂಡಿಲ್ಲ ಎಂದು ತಿಳಿಸಿದರು.
ನಮ್ಮ ಸಂಘಟನೆಯು ಲೈಂಗಿಕ ಚಟುವಟಿಕೆಯನ್ನು ಪ್ರೋತ್ಸಾಹಿಸುವುದಿಲ್ಲ. ಆದರೆ, ಎಚ್‌ಐವಿ ಸೋಂಕನ್ನು ನಿಯಂತ್ರಿಸಲು ಮತ್ತು ಸೋಂಕಿತರಿಗೆ ಚಿಕಿತ್ಸಕ ಆರೈಕೆಯನ್ನು ಮಾಡುತ್ತಿದೆ. ಎಂದು ತಿಳಿಸಿದ ಅವರು, ಮಾಜಿ ಸಚಿವೆ ಜಯಮಾಲ ಅವರು ಪಿಎಚ್‌ಡಿ ಪಡೆಯುವ ಉದ್ದೇಶದಿಂದ ನಮ್ಮನ್ನು ಬಲಿಪಶು ಮಾಡಿದ್ದಾರೆ. ಲೈಂಗಿಕ ಕಾರ್ಯಕರ್ತೆಯರು ಅವರೊಂದಿಗೆ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದರು. ಅದನ್ನೆ ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಕುರಿತು ಜಯಮಾಲ ಅವರು ಸರಿಯಾಗಿ ಸ್ಪಷ್ಟನೆ ನೀಡದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ತಿಳಿಸಿದರು.