ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕೆ ‘ದಿಶಾ' ವೇದಿಕೆ: ಡಿ.ವಿ.ಸದಾನಂದಗೌಡ

Update: 2019-12-30 16:33 GMT

ಬೆಂಗಳೂರು, ಡಿ. 30: ಸರಕಾರದ ಕಾರ್ಯಕ್ರಮಗಳ ಕುರಿತು ಜನಪ್ರತಿನಿಧಿಗಳು ಹಾಗೂ ಇಲಾಖೆಯ ಅಧಿಕಾರಿಗಳು ಮುಕ್ತವಾಗಿ ಚರ್ಚಿಸಿ, ಅಡೆ-ತಡೆಗಳನ್ನು ಗುರುತಿಸಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ‘ದಿಶಾ ಪ್ರಗತಿ ಪರಿಶೀಲನಾ ಸಭೆ’ ಉದ್ದೇಶ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.

ಸೋಮವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬೆಂಗಳೂರು ನಗರ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ(ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೇಸಿಗೆ ಆರಂಭವಾಗುವ ಮುನ್ನ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಅಧಿಕಾರಿಗಳು ಗಮನಹರಿಸಬೇಕು. ಕುಡಿಯುವ ನೀರಿನ ಘಟಕಗಳ ಸ್ಥಾಪನೆಗೆ ಪ್ರಥಮ ಆದ್ಯತೆ ನೀಡಬೇಕು ಎಂದರು.

ದಿಶಾ ಅಡಿ ವಿವಿಧ ಇಲಾಖೆಗಳು ಅನುಷ್ಠಾನಗೊಳಿಸಬೇಕಾದ ಕಾರ್ಯಕ್ರಮಗಳು ವರ್ಷದ ಮೂರನೆ ತ್ರೈಮಾಸಿಕ ಮುಗಿಯುತ್ತಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಸಾಧಿಸಿಲ್ಲ. ಹಿಂದಿನ ವರ್ಷ ಇದೇ ಸಮಯದಲ್ಲಿ ಉತ್ತಮ ಪ್ರಗತಿ ಸಾಧಿಸಲಾಗಿತ್ತು ಎಂದ ಅವರು, ಇನ್ನು 15 ದಿನಗಳೊಳಗಾಗಿ ಇಲ್ಲಿಯವರೆಗಿನ ಅನುಷ್ಠಾನ ಗುರಿಯನ್ನು ತಲುಪಲೇಬೇಕು. ಈ ನಿಟ್ಟಿನಲ್ಲಿ ಸಮರೋಪಾದಿಯಲ್ಲಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಬಾಕಿ ಇರುವ ಅರ್ಜಿಗಳನ್ನು, ವಿಶೇಷವಾಗಿ ವಿಧವಾ ವೇತನ, ಅಂಗವಿಕಲ ವೇತನ ಹಾಗೂ ಸಂಧ್ಯಾ ಸುರಕ್ಷಾ ಅರ್ಜಿಗಳು ಶೀಘ್ರದಲ್ಲಿ ವಿಲೇವಾರಿ ಮಾಡಬೇಕು ಎಂದು ಸದಾನಂದಗೌಡ ಇದೇ ವೇಳೆ ಅಧಿಕಾರಿಗಳಿಗೆ ಸೂಚಿಸಿದರು.

ಎಲ್ಲ ಇಲಾಖೆಯ ಅಧಿಕಾರಿಗಳು ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಶಾಸಕರು, ಹಾಗೂ ಲೋಕಸಭಾ ಸದಸ್ಯರೊಂದಿಗೆ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನದ ಕುರಿತು ವರದಿ ಸಲ್ಲಿಸಬೇಕು. ಪ್ರಸಕ್ತ ಆರ್ಥಿಕ ವರ್ಷ ಮುಗಿಯಲು 3 ತಿಂಗಳು ಬಾಕಿಯಿದ್ದು, ಅಷ್ಟರಲ್ಲಿ ಸರಕಾರದಿಂದ ಬಿಡುಗಡೆಯಾಗಿರುವ ಅನುದಾನದ ಸಂಪೂರ್ಣ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಜನನಿ ಶಿಶು ಸುರಕ್ಷಾ ಯೋಜನೆಯಡಿ ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಳ್ಳುವ ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳೆಯರಿಗೆ ಮಾತ್ರ ಪ್ರತಿ ತಿಂಗಳು ನೀಡಲಾಗುವ 500 ರೂ.ಸಹಾಯಧನವನ್ನು ಸರಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಿಕೊಳ್ಳುವ ಎಲ್ಲ್ಲ ಮಹಿಳೆಯರಿಗೂ ನೀಡುವಂತೆ ಯೋಜನೆಯನ್ನು ಸಡಿಲಗೊಳಿಸಬೇಕೆಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಮನವಿಗೆ ಸ್ಪಂದಿಸಿದ ಅವರು, ಸೂಕ್ತ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು.

ಕೊಳಚೆ ನಿರ್ಮೂಲನಾ ಮಂಡಳಿಯಿಂದ ಫಲಾನುಭವಿಗಳಿಗೆ ಪುನರ್ವಸತಿ ಕಲ್ಪಿಸುವಲ್ಲಿ ವಿಳಂಬವಾಗುತ್ತಿದ್ದು, ವಸತಿ ರಹಿತರು ತೊಂದರೆಗೊಳಗಾಗಿದ್ದಾರೆ. ಈವೆರಗೆ ಇದ್ದ ನಿಗದಿತ ಗುರಿಯನ್ನು ಜನವರಿ 15ರೊಳಗಾಗಿ ಪೂರ್ಣಗೊಳಿಸಿ ಸ್ಥಳೀಯ ಶಾಸಕರು ಹಾಗೂ ವಸತಿ ಸಚಿವರಿಗೆ ವರದಿ ನೀಡುವಂತೆ ಆದೇಶಿಸಿದರು.

ಸಭೆಯಲ್ಲಿ ಯಶವಂತಪುರ ಕ್ಷೇತ್ರದ ಶಾಸಕ ಎಸ್.ಟಿ.ಸೋಮಶೇಖರ್, ಬೆಂಗಳೂರು ನಗರ ಜಿ.ಪಂ.ಅಧ್ಯಕ್ಷ ಮುನಿರಾಜು, ಉಪಾಧ್ಯಕ್ಷೆ ಪಾರ್ವತಿ ಚಂದ್ರಪ್ಪ, ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಶಿವರಾಮೇಗೌಡ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News