ಧರ್ಮಾಧಾರಿತ ಕಾಯ್ದೆ ಬೇಡ: ಬಿಎಸ್ಪಿ ರಾಜ್ಯ ಉಸ್ತುವಾರಿ ಮಾರಸಂದ್ರ ಮುನಿಯಪ್ಪ
ಬೆಂಗಳೂರು, ಡಿ.30: ಕೇಂದ್ರ ಸರಕಾರ ಧರ್ಮಾಧಾರಿತ ಕಾಯ್ದೆಗಳನ್ನು ಬಲಪ್ರಯೋಗದ ಮೂಲಕ ಜನತೆಯ ಮೇಲೆ ಹೇರಲು ಪ್ರಯತ್ನ ಮಾಡುತ್ತಿರುವುದು, ಸಂವಿಧಾನಕ್ಕೆ ಮಾಡಿದ ದ್ರೊಹ ಎಂದು ಬಿಎಸ್ಪಿ ರಾಜ್ಯ ಉಸ್ತುವಾರಿ ಮಾರಸಂದ್ರ ಮುನಿಯಪ್ಪ ಹೇಳಿದರು.
ಸೋಮವಾರ ಇಲ್ಲಿನ ಶಿವಾಜಿನಗರದ ಬಿಎಸ್ಪಿ ಕೇಂದ್ರ ಕಚೇರಿಯಲ್ಲಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಡಾ.ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನದ ಪರಿಚ್ಛೇದ 14ರ ಪ್ರಕಾರ ಜಾತಿ ಆಧಾರಿತ ಕಾನೂನು ಅಥವಾ ನೀತಿ ನಿಯಮಗಳನ್ನು ಅನುಷ್ಠಾನ ಮಾಡಬಾರದು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಹೀಗಿದ್ದರೂ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡುವ ಪೌರತ್ವ ತಿದ್ದುಪಡಿ ಕಾಯ್ದೆ ಅನ್ನು ಜನರ ವಿರೋಧದ ನಡುವೆಯೂ ಜಾರಿ ಮಾಡಿರುವುದು ಸರಿಯಲ್ಲ ಎಂದರು.
ಯಾವುದೇ ಕಾಯ್ದೆ ಜಾರಿ ಮಾಡುವ ಮುನ್ನ ಆ ಬಗೆಗಿನ ಸಾಧಕ, ಬಾಧಕಗಳನ್ನು ಕೇಂದ್ರ ಸರಕಾರ ಚಿಂತನೆ ನಡೆಸಬೇಕಿತ್ತು. ಆದರೆ, ಕೇಂದ್ರ ಸರಕಾರ ಈ ಬಗ್ಗೆ ಆಲೋಚಿಸದೇ ದೇಶಾದ್ಯಂತ ಭಯದ ವಾತಾವರಣ ನಿರ್ಮಾಣ ಮಾಡುವ ಎನ್‌ಆರ್‌ಸಿ ಮತ್ತು ಸಿಎಎ ಕಾಯ್ದೆ ಜಾರಿಗೆ ಮುಂದಾಗಿದೆ ಎಂದು ದೂರಿದರು.
ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಬಹುಜನ ಸಮಾಜ ಪಕ್ಷದ(ಬಿಎಸ್ಪಿ) ಮುಖ್ಯಸ್ಥೆ ಮಾಯಾವತಿ ನೇತೃತ್ವದಲ್ಲಿ ನಿಯೋಗ ಭೇಟಿಯಾಗಿ ಕಾಯ್ದೆಯನ್ನು ಹಿಂಪಡೆದುಕೊಳ್ಳಲು ಕ್ರಮ ಕೈಗೊಳ್ಳುವಂತೆ ವಿನಂತಿಸಿದೆ. ಅಷ್ಟೇ ಅಲ್ಲದೆ, ಪೌರತ್ವ ತಿದ್ದುಪಡಿ ಕಾಯ್ದೆ ಸಂವಿಧಾನದ ಮುನ್ನುಡಿ ಹಾಗೂ ವಿಧಿ 14 ಮತ್ತು 21 ರ ಉಲ್ಲಂಘನೆಯಾಗಿದೆ ಎಂದು ರಾಷ್ಟ್ರಪತಿ ಅವರ ಗಮನಕ್ಕೆ ತರಲಾಗಿದೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ, ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರ ಹುಟ್ಟುಹಬ್ಬದ ಅಂಗವಾಗಿ, ಜನಕಲ್ಯಾಣ ದಿನ ಆಚರಣೆ ಮಾಡಲು ಪಕ್ಷ ನಿರ್ಧಾರ ಕೈಗೊಂಡಿದೆ. ಅದೇ ರೀತಿಯಲ್ಲಿ, ತಳಮಟ್ಟದಿಂದ ಪಕ್ಷ ಸಂಘಟನೆಗೆ ಒತ್ತು ನೀಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಎಸ್ಪಿ ಮುಖ್ಯ ಸಂಯೋಜಕ ಎಂ.ಎಲ್. ತೋಮರ್, ಬಿಎಸ್ಪಿರಾಜ್ಯ ಘಟಕ ಅಧ್ಯಕ್ಷ ಕೃಷ್ಣಮೂರ್ತಿ ಸೇರಿದಂತೆ ಜಿಲ್ಲಾ ಮತ್ತು ವಿಧಾನ ಸಮಿತಿ ಮುಂಖಡರು ಉಪಸ್ಥಿತರಿದ್ದರು.