×
Ad

ಸಹಪಂಕ್ತಿ ಭೋಜನದಲ್ಲಿ ದಲಿತರು ಪಾಲ್ಗೊಂಡರೆ ಪೇಜಾವರ ಶ್ರೀಗಳ ಆತ್ಮಕ್ಕೆ ಶಾಂತಿ: ದಸಂಸ

Update: 2019-12-30 22:11 IST

ಬೆಂಗಳೂರು, ಡಿ. 30: ‘ನಾವೆಲ್ಲ ಹಿಂದೂ, ನಾವೆಲ್ಲ ಒಂದು’ ಎಂದು ಹೇಳುತ್ತಿದ್ದ ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಮಠದಲ್ಲಿ ‘ಸಹಪಂಕ್ತಿ ಭೋಜನ’ದಲ್ಲಿ ದಲಿತರು ಭಾಗವಹಿಸುವಂತೆ ಮಾಡಿ, ಮುಂದೆ ಬರುವ ಶ್ರೀಗಳು ದಲಿತರಿಗೆ ಸಮಾನತೆ ನೀಡಿ ಅಸ್ಪಶ್ಯತೆ ನಿವಾರಣೆಗೆ ಕಾರ್ಯಪ್ರವೃತ್ತರಾಗಬೇಕೆಂದು ದಸಂಸ ಸಂಚಾಲಕ ಲಕ್ಷ್ಮಿ ನಾರಾಯಣ ನಾಗವಾರ ಆಗ್ರಹಿಸಿದ್ದಾರೆ.

ಶ್ರೀಗಳ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಅವರು, ದಲಿತರ ಮೇಲೆ ದೌರ್ಜನ್ಯ ನಡೆಸಿ, ಸಾಮಾಜಿಕ ಬಹಿಷ್ಕಾರ ಹಾಕಿದ ಸಂದರ್ಭದಲ್ಲೆಲ್ಲಾ ಪಶ್ಚಾತ್ತಾಪವಾಗಿ ಉಪವಾಸ ಮಾಡುತಿದ್ದ ಶ್ರೀಗಳು, ದಲಿತ ಕೇರಿಗಳಿಗೆ ಭೇಟಿ ನೀಡಿ ಸಾಂತ್ವನ ಹೇಳುವ ಮೂಲಕ ಪಾದಯಾತ್ರೆ ನಡೆಸುತ್ತಿದ್ದರು ಎಂದು ಸ್ಮರಿಸಿದ್ದಾರೆ.

‘ಚಿಕ್ಕ ಹುಡುಗನಿದ್ದಾಗ(ವೆಂಕಟರಮಣ) ಕಾಲುಜಾರಿ ಬಾವಿಗೆ ಬಿದ್ದಾಗ ದಲಿತ ಸಮುದಾಯದ ರಾಮ ಎಂಬ ವ್ಯಕ್ತಿ ನೋಡಿ ಜೋರಾಗಿ ಕೂಗಿಕೊಂಡಾಗ ಇವರ ತಂದೆ ಓಡಿ ಬಂದು ರಕ್ಷಿಸಿದ ಘಟನೆ ನಡೆಯಿತು. ದಲಿತ ಸಮುದಾಯದ ರಾಮನೇ ಬಾವಿಗೆ ಬಿದ್ದು ರಕ್ಷಣೆ ಮಾಡಬಹುದಾಗಿತ್ತು. ಆದರೆ, ದಲಿತನಾಗಿದ್ದರಿಂದ ಬ್ರಾಹ್ಮಣರನ್ನು ಮುಟ್ಟಬಾರದಾಗಿತ್ತು. ಹೀಗಾಗಿ ರಾಮು ಜೋರಾಗಿ ಕೂಗಿಕೊಳ್ಳದಿದ್ದರೆ ಅಂದೇ ಶ್ರೀಗಳ ಭವಿಷ್ಯ ಕೊನೆಯಾಗುತ್ತಿತ್ತು. ಈ ಘಟನೆಯನ್ನು ತಿಳಿದುಕೊಂಡ ಬಾಲಕ ಶ್ರೀಗಳು ಅಂದಿನಿಂದಲೇ ಅಸ್ಪೃಶ್ಯತೆ ವಿರುದ್ಧ ಹೋರಾಟ ಮಾಡಬೇಕೆಂದು ತೀರ್ಮಾರ್ನಿಸಿದ್ದರು’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News