ಗಣ್ಯರನ್ನು ಗುರುತಿಸುವ ಕೆಲಸವನ್ನು ಅಂಚೆ ಇಲಾಖೆ ಮಾಡಲಿ: ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ

Update: 2019-12-30 16:44 GMT

ಬೆಂಗಳೂರು, ಡಿ.30: ಪ್ರಮುಖ ಘಟನೆಗಳು, ಸಾಹಿತಿಗಳ ಕುರಿತ ಚಿತ್ರವನ್ನು ಲಕೋಟೆಯಲ್ಲಿ ತರುವ ಮೂಲಕ ಅವುಗಳ ಬಗ್ಗೆ ಮಾಹಿತಿಯನ್ನು ತಿಳಿಸುವ ಕಾರ್ಯವನ್ನು ಅಂಚೆ ಇಲಾಖೆ ಮಾಡಬೇಕಿದೆ ಎಂದು ರಾಜ್ಯಸಭಾ ಸದಸ್ಯ ಎಲ್. ಹನುಮಂತಯ್ಯ ಅಭಿಪ್ರಾಯಪಟ್ಟರು.

ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ 70ನೇ ವರ್ಷಾಚರಣೆ ಪ್ರಯುಕ್ತ ಸೋಮವಾರ ಆಯೋಜಿಸಿದ್ದ ವಿಶೇಷ ಅಂಚೆ ಲಕೋಟೆ ಲೋಕಾರ್ಪಣೆ ಸಮಾರಂಭದಲ್ಲಿ ಸಂಘದ 2020ರ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಅಂಚೆ ಲಕೋಟೆಯಲ್ಲಿ ಬರಬೇಕಾಗಿರುವುದು ಬಹಳ ಇದೆ. ಐತಿಹಾಸಿಕ ಘಟನೆಗಳು, ಪ್ರಮುಖ ಪತ್ರಕರ್ತರು, ಇನ್ನೂ ಅನೇಕ ಸಮಾಜದ ಗಣ್ಯರನ್ನು ಗುರುತಿಸಬೇಕಿದೆ. ಅಂಚೆ ಕಚೇರಿಯ ಮುಖ್ಯಸ್ಥರು ಇವುಗಳ ಬಗ್ಗೆ ಗಮನ ಹರಿಸಿ ಆದ್ಯತೆಯ ಮೇಲೆ ನಿರ್ಧಾರ ತೆಗೆದುಕೊಳ್ಳಬೇಕು. ಅರ್ಹರಿಗೆ ಸರಿಯಾದ ಸ್ಥಾನಮಾನ ದೊರಕಿಸುವ ಕಾರ್ಯವನ್ನು ಅಂಚೆ ಇಲಾಖೆ ಮಾಡಬೇಕು ಎಂದು ಸಲಹೆ ನೀಡಿದರು.

ಪತ್ರಕರ್ತರ ಸಂಘದ ಮೂಲಕ ಪತ್ರಕರ್ತರ ಮಕ್ಕಳಿಗೆ ಪುರಸ್ಕಾರ ನೀಡಿರುವುದನ್ನು ಶ್ಲಾಘಿಸಿದ ಅವರು, ಸಂಘವು ಇಂತಹ ಕಾರ್ಯಗಳನ್ನು ಮಾಡಲು ಅದಕ್ಕೆ ಹೆಚ್ಚು ಅನುದಾನ ನೀಡಬೇಕು. ಸಂಘ ಬೆಳೆಯಲು ಸರಕಾರದಿಂದ ಅಗತ್ಯ ಸಹಾಯ ಧನವನ್ನು ಪಡೆಯಬೇಕು. ಸಂಘದಿಂದ ಪತ್ರಕರ್ತರಿಗೆ ನಿಜವಾದ ನೆರವು ಸಿಗುತ್ತದೆ. ಸಣ್ಣ ಪತ್ರಿಕೆಗಳಿಗೂ ನೆರವಾಗುವ ಇಂತಹ ಸಂಘಗಳು ಹೆಚ್ಚಾಗಬೇಕೆಂದು ಆಶಿಸಿದರು.

ಕರ್ನಾಟಕ ವತ್ತ ಅಂಚೆ ಇಲಾಖೆಯ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಚಾರ್ಲ್ಸ್ ಲೋಬೊ ಮಾತನಾಡಿ, ಅಂಚೆ ಇಲಖೆ ಬಿಡುಗಡೆಗೊಳಿಸಿರುವ ಲಕೋಟೆಯಲ್ಲಿ ವಿಶೇಷವಿದೆ. ಇದು ಮುದ್ರೆಯ ರೂಪವಾಗಿದ್ದು ಇದರಲ್ಲಿ ಪತ್ರಕರ್ತರ ಸಂಘದ ಲಾಂಛನವಿದೆ. ಇದು ಅಪರೂಪದ ಸಂಗ್ರಹವಾಗಿದ್ದು ಅಂಚೆ ಇಲಾಖೆಯು ಇಂತಹ ಅಪರೂಪದ ಕಾರ್ಯಗಳನ್ನು ಮಾಡುತ್ತಿದೆ ಎಂದು ತಿಳಿಸಿದರು.

ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎಸ್. ರಾಜೇಂದ್ರಕುಮಾರ್ ಸಂಘದ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. ಚಾರ್ಲ್ಸ್ ಲೋಬೊ ಅವರು ವಿಶೇಷ ಅಂಚೆ ಲಕೋಟೆಯನ್ನು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಎಸ್. ಲಕ್ಷ್ಮೀನಾರಾಯಣ, ಖಚಾಂಚಿ ಯತಿರಾಜು, ಅಂಚೆ ಇಲಾಖೆ ಇತರ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News