ಸೋನಿಯಾ ಗಾಂಧಿ ಅಧಿಕೃತ ಹೇಳಿಕೆ ನೀಡುತ್ತಿಲ್ಲ ಯಾಕೆ: ಪ್ರಶಾಂತ್ ಕಿಶೋರ್ ಪ್ರಶ್ನೆ

Update: 2019-12-30 17:56 GMT

ಹೊಸದಿಲ್ಲಿ, ಡಿ. 30: ರಾಷ್ಟ್ರೀಯ ಪೌರತ್ವ ನೋಂದಣಿ ಕುರಿತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮೌನ ವಹಿಸಿರುವುದನ್ನು ರಾಜಕೀಯ ತಂತ್ರಜ್ಞ ಹಾಗೂ ಜನತಾ ದಳ (ಸಂಯುಕ್ತ)ದ ಉಪಾಧ್ಯಕ್ಷ ಪ್ರಶಾಂತ್ ಕಿಶೋರ್ ಪ್ರಶ್ನಿಸಿದ್ದಾರೆ.

 ಸಂದರ್ಶನವೊಂದರಲ್ಲಿ ಮಾತನಾಡಿದ ಪ್ರಶಾಂತ್ ಕಿಶೋರ್, ‘‘ಕಾಂಗ್ರೆಸ್ ಅಧ್ಯಕ್ಷರು ಒಂದು ಹೇಳಿಕೆ ನೀಡಿದರೆ, ಎಲ್ಲವೂ ಸ್ಪಷ್ಟವಾಗುತ್ತದೆ. ಧರಣಿ, ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳುವುದು ಎಲ್ಲವೂ ನ್ಯಾಯಬದ್ಧವಾದದು. ಆದರೆ, ಅವರು ಯಾಕೆ ಒಂದಾದರೂ ಹೇಳಿಕೆ ನೀಡಿಲ್ಲ’’ ಎಂದು ಕೇಳಿದ್ದಾರೆ.

ತಮ್ಮ ರಾಜ್ಯಗಳಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿಗೆ ಅವಕಾಶ ನೀಡುವುದಿಲ್ಲ ಎಂದು ಕಾಂಗ್ರೆಸ್ ಆಡಳಿತ ಇರುವ ರಾಜ್ಯಗಳು ಘೋಷಿಸಬೇಕೆಂಬುದು ಹಾಗೂ ಆ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಅಥವಾ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸೂಚಿಸಬೇಕೆಂಬುದು ಕಿಶೋರ್ ಅವರ ಭಾವನೆ. ಕಾಂಗ್ರೆಸ್‌ನ ಓರ್ವ ಮುಖ್ಯಮಂತ್ರಿ ಸೇರಿದಂತೆ 10ಕ್ಕಿಂತಲೂ ಹೆಚ್ಚು ಮುಖ್ಯಮಂತ್ರಿಗಳು ತಮ್ಮ ರಾಜ್ಯದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ ಅನುಷ್ಠಾನಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಇನ್ನೊಂದೆಡೆ ನಿತೀಶ್ ಕುಮಾರ್, ನವೀನ್ ಬಾಬು, ಮಮತಾ ದೀದಿ ಹಾಗೂ ಜಗಮೋಹನ್ ರೆಡ್ಡಿ ಮೊದಲಾದವರ ನೇತೃತ್ವದ ಪ್ರಾದೇಶಿಕ ಪಕ್ಷಗಳ ಸರಕಾರಗಳು ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ತಮ್ಮ ರಾಜ್ಯಗಳಲ್ಲಿ ಅನುಷ್ಠಾನಗೊಳಿಸಲು ನಿರಾಕರಿಸುತ್ತಿವೆ. ಕಾಂಗ್ರೆಸ್‌ನ ವಿಚಾರಕ್ಕೆ ಬಂದರೆ, ಮುಖ್ಯಮಂತ್ರಿಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಇಲ್ಲ. ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆ ಎಂದು ಕಿಶೋರ್ ಹೇಳಿದ್ದಾರೆ.

ರಾಷ್ಟ್ರೀಯ ಜನಸಂಖ್ಯೆ ನೋಂದಣಿ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ನಡುವೆ ಸಂಬಂಧ ಇಲ್ಲ ಎಂಬ ಗೃಹ ಸಚಿವ ಅಮಿತ್ ಶಾ ಅವರ ವಿವರಣೆಯನ್ನು ಕಿಶೋರ್ ಅವರು ಒಪ್ಪಿಕೊಳ್ಳಲು ನಿರಾಕರಿಸಿದ್ದಾರೆ. ‘‘ರಾಷ್ಟ್ರೀಯ ಜನಸಂಖ್ಯೆ ನೋಂದಣಿ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ನಡುವಿನ ಸಂಬಂಧವನ್ನು ಯಾರೊಬ್ಬರೂ ಸಾಬೀತುಪಡಿಸುವ ಅಗತ್ಯ ಇಲ್ಲ. ದಾಖಲೆಗಳೇ ಅದರ ಬಗ್ಗೆ ತಿಳಿಸುತ್ತವೆ. ರಾಷ್ಟ್ರೀಯ ಜನಸಂಖ್ಯೆ ನೋಂದಣಿ ರಾಷ್ಟ್ರೀಯ ಪೌರತ್ವ ನೋಂದಣಿಯ ಮೊದಲ ಹೆಜ್ಜೆ ಎಂದು ದಾಖಲೆಗಳು ಹೇಳುತ್ತವೆ’’ ಎಂದು ಪ್ರಶಾಂತ್ ಕಿಶೋರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News