ರೋಹಿತ್ ವರ್ಷದ ಗರಿಷ್ಠ ಏಕದಿನ ಸ್ಕೋರರ್

Update: 2019-12-30 18:38 GMT

ಹೊಸದಿಲ್ಲಿ, ಡಿ.30: ಸ್ಟಾರ್ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಭಾರತ ನಾಯಕ ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿ ಕ್ಯಾಲೆಂಡರ್ ವರ್ಷದಲ್ಲಿ ಏಕದಿನ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ಸ್ಕೋರರ್ ಆಗಿ ಹೊರಹೊಮ್ಮಿದ್ದಾರೆ.

 ಎದುರಾಳಿ ಬೌಲಿಂಗ್ ದಾಳಿಯನ್ನು ನಿರ್ದಯವಾಗಿ ದಂಡಿಸುವಲ್ಲಿ ನಿಸ್ಸೀಮರಾಗಿರುವ ರೋಹಿತ್ 2017 ಹಾಗೂ 2018ರ ಸಾಲಿನಲ್ಲಿ ಗರಿಷ್ಠ ರನ್ ಗಳಿಕೆಯಲ್ಲಿ 2ನೇ ಸ್ಥಾನದಲ್ಲಿದ್ದರು. ಮುಂಬೈ ಆಟಗಾರ 2019ನೇ ವರ್ಷವನ್ನು ತನ್ನದೇ ಶೈಲಿಯಲ್ಲಿ ಕೊನೆಗೊಳಿಸಿದರು. ಆಕ್ರಮಣಕಾರಿ ಆರಂಭಿಕ ಆಟಗಾರ ರೋಹಿತ್ 2019ರಲ್ಲಿ ಆಡಿರುವ 28 ಪಂದ್ಯಗಳಲ್ಲಿ(27 ಇನಿಂಗ್ಸ್ಸ್)57.30ರ ಸರಾಸರಿಯಲ್ಲಿ 1,490 ರನ್ ಗಳಿಸಿದ್ದಾರೆ. ಇದರಲ್ಲಿ 7 ಶತಕಗಳಿವೆ. ಈ ವರ್ಷ ಗರಿಷ್ಠ ಶತಕ ಸಿಡಿಸಿದ ಸಾಧನೆ ಮಾಡಿರುವ ರೋಹಿತ್ ಆಸ್ಟ್ರೇಲಿಯ(133,ಸಿಡ್ನಿ)ದ.ಆಫ್ರಿಕಾ(ಔಟಾಗದೆ 122,ಸೌಥಾಂಪ್ಟನ್), ಪಾಕಿಸ್ತಾನ(140,ಮ್ಯಾಂಚೆಸ್ಟರ್), ಇಂಗ್ಲೆಂಡ್(102,ಬರ್ಮಿಂಗ್‌ಹ್ಯಾಮ್), ಬಾಂಗ್ಲಾದೇಶ(104, ಬರ್ಮಿಂಗ್‌ಹ್ಯಾಮ್), ಶ್ರೀಲಂಕಾ(103,ಲೀಡ್ಸ್) ಹಾಗೂ ವೆಸ್ಟ್‌ಇಂಡೀಸ್(159,ವೈಝಾಗ್)ವಿರುದ್ಧ ಶತಕ ಸಿಡಿಸಿದ್ದರು. ಏಳು ವಿವಿಧ ತಂಡಗಳ ವಿರುದ್ಧ 7 ಶತಕ ಗಳಿಸಿದ್ದಲ್ಲದೆ ಕ್ಯಾಲೆಂಡರ್ ವರ್ಷದಲ್ಲಿ 6 ಅರ್ಧಶತಕಗಳನ್ನು ಸಿಡಿಸಿದ್ದಾರೆ. 146 ಬೌಂಡರಿ ಹಾಗೂ 36 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಭಾರತದ ‘ರನ್ ಯಂತ್ರ’ ಖ್ಯಾತಿಯ ಕೊಹ್ಲಿ ಸಿಡಿದು ನಿಂತರೆ ವಿಶ್ವದ ಯಾವ ಬೌಲಿಂಗ್ ದಾಳಿಯೂ ಅವರನ್ನು ತಡೆದು ನಿಲ್ಲಿಸಲು ಸಾಧ್ಯವಿಲ್ಲ. ಕೊಹ್ಲಿ 2017 ಹಾಗೂ 2018ರ ಋತುವಿನಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಗಳಿಸಿದ್ದರು. 2019ರಲ್ಲಿ 2ನೇ ಸ್ಥಾನ ಪಡೆದಿದ್ದಾರೆ. ಸಹ ಆಟಗಾರ ರೋಹಿತ್ ಮೊದಲ ಸ್ಥಾನದಲ್ಲಿದ್ದಾರೆ. ಭಾರತದ ನಾಯಕ 5 ಶತಕ ಹಾಗೂ 7 ಅರ್ಧಶತಕಗಳನ್ನು ಗಳಿಸಿದ್ದು,ಇದರಲ್ಲಿ 133 ಬೌಂಡರಿ ಹಾಗೂ 8 ಸಿಕ್ಸರ್‌ಗಳಿದ್ದವು. ಕೊಹ್ಲಿ ಆಸ್ಟ್ರೇಲಿಯದ ವಿರುದ್ಧ 3 ಶತಕ(104,ಅಡಿಲೇಡ್, 116 ನಾಗ್ಪುರ, 123, ರಾಂಚಿ) ಹಾಗೂ ವೆಸ್ಟ್‌ಇಂಡೀಸ್ ವಿರುದ್ಧ 2 ಶತಕ(120, ಔಟಾಗದೆ 114 ಪೋರ್ಟ್ ಆಫ್ ಸ್ಪೇನ್) ಗಳನ್ನು ಗಳಿಸಿದ್ದರು.

 28 ಏಕದಿನ(26 ಇನಿಂಗ್ಸ್)ಪಂದ್ಯಗಳಲ್ಲಿ 1,345 ರನ್ ಗಳಿಸಿರುವ ವೆಸ್ಟ್‌ಇಂಡೀಸ್‌ನ ಸ್ಟಾರ್ ಬ್ಯಾಟ್ಸ್ ಮನ್ ಶೈ ಹೋಪ್ 2019ರ ಋತುವಿನ ಗರಿಷ್ಠ ರನ್ ಗಳಿಕೆಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಕ್ಯಾಲೆಂಡರ್ ವರ್ಷದಲ್ಲಿ 26ರ ಹರೆಯದ ಹೋಪ್ 4 ಶತಕ ಹಾಗೂ 8 ಅರ್ಧಶತಕಗಳನ್ನು ಗಳಿಸಿದ್ದರು. ಇತ್ತೀಚೆಗೆ ಭಾರತ ವಿರುದ್ಧ ಏಕದಿನ ಸರಣಿಯಲ್ಲಿ ಗಮನೀಯ ಪ್ರದರ್ಶನ ನೀಡಿದ್ದರು. ಭಾರತ ವಿರುದ್ಧ ಔಟಾಗದೆ 102, 78 ಹಾಗೂ 42 ರನ್ ಗಳಿಸಿದ್ದರು. ಒಟ್ಟು 117 ಬೌಂಡರಿ ಹಾಗೂ 21 ಸಿಕ್ಸರ್‌ಗಳನ್ನು ಸಿಡಿಸಿದ್ದರು. ಐರ್ಲೆಂಡ್(170,ಡಬ್ಲಿನ್), ಬಾಂಗ್ಲಾದೇಶ(109, ಡಬ್ಲಿನ್), ಅಫ್ಘಾನಿಸ್ತಾನ(ಔಟಾಗದೆ 109,ಲಕ್ನೋ) ಹಾಗೂ ಭಾರತ(ಔಟಾಗದೆ 102,ಚೆನ್ನೈ)ವಿರುದ್ಧ ಶತಕ ಸಿಡಿಸಿದ್ದರು.

ಸ್ಟ್ರೇಲಿಯದ ಸೀಮಿತ ಓವರ್‌ಗಳ ಕ್ರಿಕೆಟ್ ತಂಡದ ನಾಯಕ ಆ್ಯರೊನ್ ಫಿಂಚ್ ಗರಿಷ್ಠ ಸ್ಕೋರರ್‌ಗಳ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ. ಈ ವರ್ಷ ಫಿಂಚ್ 23 ಏಕದಿನ ಪಂದ್ಯಗಳನ್ನು ಆಡಿದ್ದು, 51.86ರ ಸರಾಸರಿಯಲ್ಲಿ 1,141 ರನ್ ಗಳಿಸಿದ್ದಾರೆ. ಹೊಡಿಬಡಿ ದಾಂಡಿಗ ಕ್ಯಾಲೆಂಡರ್ ವರ್ಷದಲ್ಲಿ 4 ಶತಕ ಹಾಗೂ 6 ಅರ್ಧಶತಕಗಳನ್ನು ಗಳಿಸಿದ್ದು, ಇದರಲ್ಲಿ 98 ಬೌಂಡರಿ ಹಾಗೂ 36 ಸಿಕ್ಸರ್‌ಗಳಿವೆ. ಈ ವರ್ಷ ಅವರು ಪಾಕಿಸ್ತಾನ ವಿರುದ್ಧ 2 ಬಾರಿ, ಶ್ರೀಲಂಕಾ ಹಾಗೂ ಇಂಗ್ಲೆಂಡ್ ವಿರುದ್ಧ ತಲಾ 1 ಬಾರಿ ಶತಕ ಸಿಡಿಸಿದ್ದರು.

ಪಾಕಿಸ್ತಾನದ ಸ್ಟಾರ್ ಬ್ಯಾಟ್ಸ್‌ಮನ್ ಬಾಬರ್ ಆಝಂ ಈ ವರ್ಷ 20 ಏಕದಿನ ಪಂದ್ಯಗಳಲ್ಲಿ ಆಡಿದ್ದು, 60.66ರ ಸರಾಸರಿಯಲ್ಲಿ 1,092 ರನ್ ಗಳಿಸಿದ್ದಾರೆ. ಸ್ಥಿರ ಪ್ರದರ್ಶನಕ್ಕೆ ಖ್ಯಾತಿ ಪಡೆದಿರುವ ಆಝಂ ಕ್ಯಾಲೆಂಡರ್ ವರ್ಷದಲ್ಲಿ 3 ಶತಕ ಹಾಗೂ 6 ಅರ್ಧಶತಕಗಳನ್ನು ಗಳಿಸಿದ್ದಾರೆ. ಇಂಗ್ಲೆಂಡ್(115,ನಾಟಿಂಗ್‌ಹ್ಯಾಮ್), ನ್ಯೂಝಿಲ್ಯಾಂಡ್(ಔಟಾಗದೆ 101,ಬರ್ಮಿಂಗ್‌ಹ್ಯಾಮ್) ಹಾಗೂ ಶ್ರೀಲಂಕಾ(115,ಕರಾಚಿ)ವಿರುದ್ಧ ಆಝಂ ಶತಕಗಳನ್ನು ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News