ಬಡವರು ಬಳಸುವ ಮದ್ಯಕ್ಕೆ ಸಬ್ಸಿಡಿಗೆ ಚಿಂತನೆ: ಅಬಕಾರಿ ಸಚಿವ ನಾಗೇಶ್

Update: 2019-12-31 12:03 GMT

ಬೆಂಗಳೂರು, ಡಿ.31: ಬಡ ಜನರು ಹೆಚ್ಚು ಬಳಕೆ ಮಾಡುವ ಕಡಿಮೆ ದರದ ಮದ್ಯವನ್ನು ಸಬ್ಸಿಡಿ ದರದಲ್ಲಿ ಕೊಡಬೇಕೆಂದು ಸರಕಾರ ಚಿಂತನೆ ನಡೆಸುತ್ತಿದೆ ಎಂದು ಅಬಕಾರಿ ಸಚಿವ ನಾಗೇಶ್ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಮದ್ಯ ಸರಬರಾಜು ಮಾಡುವ ಯೋಜನೆ ರೂಪಿಸಲಾಗುತ್ತಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಜೊತೆ ಚರ್ಚಿಸಿ ಕಾರ್ಯರೂಪಕ್ಕೆ ತರಲಾಗುವುದು ಎಂದು ಮಾಹಿತಿ ನೀಡಿದರು.

ಬಿಯರ್ ಮಾರಾಟವನ್ನು ಕಡಿಮೆ ಮಾಡಿ ಹಾಟ್‌ಲಿಕ್ಕರ್‌ನ್ನು ಹೆಚ್ಚು ಮಾರಾಟ ಮಾಡುವಂತೆ ಅಬಕಾರಿ ಅಧಿಕಾರಿಗಳು ಮದ್ಯ ಮಾರಾಟಗಾರರ ಮೇಲೆ ಒತ್ತಡ ಹೇರುತ್ತಿರುವ ದೂರುಗಳು ಬಂದಿವೆ. ಈ ಬಗ್ಗೆ ಅಬಕಾರಿ ಆಯುಕ್ತರೊಂದಿಗೆ ಚರ್ಚಿಸಿದ್ದೇನೆ. ಹಾಗೂ ಕರಾವಳಿ ಭಾಗದಲ್ಲಿ ಬಿಯರ್ ಮಾರಾಟ ನಿಯಂತ್ರಿಸದಂತೆ ಸೂಚನೆ ನೀಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಪ್ರತಿದಿನವೂ ವೀಕೆಂಡ್: ಈವರೆಗೆ ರಾತ್ರಿ 11ರವರೆಗೆ ಬಾರ್‌ಗಳು ಕಾರ್ಯ ನಿರ್ವಹಿಸಲು ಸರಕಾರ ಅನುಮತಿ ನೀಡಿತ್ತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಶುಕ್ರವಾರ ಮತ್ತು ಶನಿವಾರ ರಾತ್ರಿ 1ರವರೆಗೆ ಬಾರ್ ಮತ್ತು ರೆಸ್ಟೋರೆಂಟ್‌ಗಳನ್ನು ತೆರೆಯಲು ಅನುಮತಿ ನೀಡಲಾಗಿತ್ತು. ಈಗ ಪ್ರತಿನಿತ್ಯ ಮಧ್ಯರಾತ್ರಿ 2ರವರೆಗೆ ಮದ್ಯ ಮಾರಾಟ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಅವರು ತಿಳಿಸಿದರು.

ಇನ್ನು ಮುಂದೆ ಮದ್ಯದಂಗಡಿಗಳು ರಾತ್ರಿ 2ರವರಗೆ ಕಾರ್ಯನಿರ್ವಹಿಸಲಿದ್ದು, ಇದಕ್ಕೆ ಗೃಹ ಇಲಾಖೆ ಸಮ್ಮಿತಿಸಿದೆ. ಹೆಚ್ಚಿನ ರಾಜಸ್ವ ಸಂಗ್ರಹಕ್ಕೆ ರಾಜ್ಯ ಸರಕಾರ ನಿರ್ಧರಿಸಿದ್ದು, 20,950 ಕೋಟಿ ರೂ. ರಾಜಸ್ವ ಸಂಗ್ರಹಿಸುವ ಗುರಿ ಇಟ್ಟುಕೊಳ್ಳಲಾಗಿದೆ. ನವೆಂಬರ್ ಅಂತ್ಯದ ವರೆಗೆ ಒಟ್ಟೂ 14,400 ಕೋಟಿ ರೂ. ಸಂಗ್ರಹವಾಗಿದೆ. 2019ರಲ್ಲಿ ಒಟ್ಟು 16,100 ಕೋಟಿ ರಾಜಸ್ವ ಸಂಗ್ರಹವಾದಂತಾಗುತ್ತದೆ. ಇನ್ನು 3 ತಿಂಗಳೊಳಗೆ ನಮ್ಮ ಟಾರ್ಗೆಟ್ ಮುಟ್ಟುತ್ತೇವೆ.

-ನಾಗೇಶ್, ಅಬಕಾರಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News