‘ರಸ್ತೆ ಅಪಘಾತ’ ಸ್ಥಳಗಳನ್ನು ಕಪ್ಪು ಜಾಗಗಳೆಂದು ಘೋಷಣೆ: ಡಿಸಿಎಂ ಗೋವಿಂದ ಕಾರಜೋಳ

Update: 2019-12-31 12:09 GMT

ಬೆಂಗಳೂರು, ಡಿ. 31: ರಸ್ತೆ ಅಪಘಾತವಾಗುವ ಸ್ಥಳಗಳನ್ನು ಗುರುತಿಸಲಾಗಿದ್ದು, ಮತ್ತೆ ಆ ಸ್ಥಳದಲ್ಲಿ ಅಪಘಾತಗಳು ಸಂಭವಿಸದಂತೆ ಅಗತ್ಯ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಇಂದಿಲ್ಲಿ ತಿಳಿಸಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿನ ತನ್ನ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಅಪಘಾತ ಸಂಭವಿಸುವ ಒಟ್ಟು 942 ‘ಕಪ್ಪು’ ಸ್ಥಳಗಳನ್ನು ಗುರುತಿಸಲಾಗಿದೆ. ಆ ಪೈಕಿ ಲೋಕೋಪಯೋಗಿ ಇಲಾಖೆ-249, ರಾಷ್ಟ್ರೀಯ ಹೆದ್ದಾರಿ-172, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ 392 ಹಾಗೂ ಬಿಬಿಎಂಪಿ ವ್ಯಾಪ್ತಿಯ 31 ಸ್ಥಳಗಳನ್ನು ಗುರುತಿಸಲಾಗಿದೆ. ರಸ್ತೆ ಅಪಘಾತಗಳ ಪ್ರಮಾಣವನ್ನು ತಗ್ಗಿಸುವ ದೃಷ್ಟಿಯಿಂದ ಪದೇ ಪದೇ ಅಪಘಾತ ಸಂಭವಿಸುವ ಸ್ಥಳಗಳನ್ನು ಗುರುತಿಸಿದ್ದು, ಆ ಪ್ರದೇಶಗಳಲ್ಲಿ ಚಾಲಕರಿಗೆ ಅಗತ್ಯ ಸೂಚನೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಗೋವಿಂದ ಕಾರಜೋಳ ಇದೇ ವೇಳೆ ವಿವರ ನೀಡಿದರು.

ಸೇತುವೆಗಳ ದುರಸ್ತಿ: ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಕೊಚ್ಚಿಹೋದ ಸೇತುವೆಗಳನ್ನು ದುರಸ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, ತಾತ್ಕಾಲಿಕವಾಗಿ ಈಗಾಗಲೇ ರಸ್ತೆ ಸಂಚಾರಕ್ಕೆ ಅವಕಾಶ ಮಾಡಿದ್ದೇವೆ. ಶಾಶ್ವತವಾಗಿ ರಸ್ತೆ ಅಭಿವೃದ್ಧಿ ಪಡಿಸಲಾಗುವುದು. ಪ್ರವಾಹದಿಂದ 7 ಸಾವಿರ ಕೋಟಿ ರೂ.ಗಳಷ್ಟು ರಸ್ತೆ ಹಾಳಾಗಿದೆ. ಅವುಗಳ ಅಭಿವೃದ್ಧಿ ಸರಕಾರ ಕ್ರಮ ವಹಿಸಿದೆ ಎಂದರು.

ಟರ್ಫ್ ಕ್ಲಬ್ 10 ವರ್ಷಗಳಿಂದ 37 ಕೋಟಿ ರೂ.ಗುತ್ತಿಗೆ ಹಣವನ್ನು ಬಾಕಿ ಉಳಿಸಿಕೊಂಡಿದ್ದು, ಅದರ ವಸೂಲಿ, ಕ್ಲಬ್ ತೆರವುಗೊಳಿಸಲು ಸರಕಾರ ಮುಂದಾಗಿತ್ತು. ಈ ಮಧ್ಯೆ ಕ್ಲಬ್ ಆಡಳಿತ ಮಂಡಳಿ ಕೋರ್ಟ್ ಮೆಟ್ಟಿಲೇರಿದೆ. ಕೋರ್ಟ್ ತೀರ್ಪಿನ ಬಳಿಕ ಕ್ಲಬ್‌ಗೆ ನೀಡಿರುವ ಭೂಮಿ ಹಿಂಪಡೆಯಲು ಕ್ರಮ ವಹಿಸಲಾಗುವುದು ಎಂದರು.

‘ಟೋಲ್‌ಗಳಲ್ಲಿನ ಫಾಸ್ಟ್ ಟ್ಯಾಗ್ ಹಾಕಿದ್ದರೂ ಸಂಚಾರ ವಿಳಂಬ ತಪ್ಪಿಸುವ ಸಂಬಂಧ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಚರ್ಚಿಸಿದ್ದು, ಅದನ್ನು ಅದಷ್ಟು ಶೀಘ್ರವೇ ಸರಿಪಡಿಸಲು ಅವರು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ’

-ಗೋವಿಂದ ಕಾರಜೋಳ, ಉಪಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News