ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಬಂಡವಾಳ 608 ಕೋಟಿ ರೂ.ಗೆ ಹೆಚ್ಚಳ: ಸಚಿವ ಪ್ರಭು ಚೌವ್ಹಾಣ್

Update: 2019-12-31 14:02 GMT

ಬೆಂಗಳೂರು ಡಿ. 31: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಶೇರು ಬಂಡವಾಳವನ್ನು 150 ಕೋಟಿ ರೂ.ಗಳಿಂದ 608 ಕೋಟಿ ರೂ.ಗಳಿಗೆ ಹೆಚ್ಚಿಸಲು ರಾಜ್ಯ ಸರಕಾರ ನಿನ್ನೆ ನಡೆದ ಸಂಪುಟ ಸಭೆಯಲ್ಲಿ ಅನುಮತಿಸಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಪ್ರಭು ಚೌವ್ಹಾಣ್ ತಿಳಿಸಿದ್ದಾರೆ.

ಮಂಗಳವಾರ ಈ ಸಂಬಂಧ ಮಾತನಾಡಿದ ಅವರು, ಶೇರು ಬಂಡವಾಳ ಹೆಚ್ಚಳದಿಂದ ರಾಜ್ಯದ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಹೆಚ್ಚಿನ ವೇಗ ದೊರೆಯಲಿದೆ. ನಿಗಮದಿಂದ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಶೈಕ್ಷಣಿಕ ಸಾಲ, ಸ್ವಯಂ ಉದ್ಯೋಗ, ಶ್ರಮಶಕ್ತಿ ಸಾಲ, ಗಂಗಾ ಕಲ್ಯಾಣ, ಏತ ನೀರಾವರಿ ಹಾಗೂ ಕೌಶಲ್ಯ ಅಭಿವೃದ್ಧಿ ಅಂತಹ ಉಪಯುಕ್ತ ಯೋಜನೆಗಳು ಅಲ್ಪಸಂಖ್ಯಾತರ ಅಭಿವೃದ್ಧಿಗೆ ರೂಪಿಸಲಾಗಿದೆ ಎಂದರು.

ನಿಗಮದ ಅಧಿಕೃತ ಷೇರು ಬಂಡವಾಳ 150 ಕೋಟಿ ರೂ.ಇದ್ದು, ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಸರಕಾರವು ಈವರೆಗೆ 608.40 ಕೋಟಿ ರೂ.ಗಳಷ್ಟು ಬಂಡವಾಳವನ್ನು ನಿಗಮದ ವಿವಿಧ ಯೋಜನೆಗಳ ಅಡಿಯಲ್ಲಿ ಸಾಲದ ರೂಪದಲ್ಲಿ ಫಲಾನುಭವಿಗಳಿಗೆ ಪಾವತಿಸಲಾಗಿರುತ್ತದೆ. ಪಾವತಿಸಿದ ಷೇರು ಬಂಡವಾಳ ಸರಕಾರ ಹೂಡಿರುತ್ತದೆ. ಕಂಪೆನಿ ಕಾಯ್ದೆ 2013ರ ಪ್ರಕಾರ ಪಾವತಿಯಾದ ಬಂಡವಾಳ ಅಧಿಕೃತ ಶೇರು ಬಂಡವಾಳ ಮೀರುವಂತಿಲ್ಲ. ಆದ್ದರಿಂದ ಕೆಎಂಡಿಸಿಯ ಅಧಿಕೃತ ಷೇರು ಬಂಡವಾಳವನ್ನು 150 ಕೋಟಿ ರೂ.ಗಳಿಂದ 608 ಕೋಟಿ ರೂ.ಗೆ ಹೆಚ್ಚಿಸಲು ಸರಕಾರ ನಿರ್ಧರಿಸಿದೆ. ಒಟ್ಟು ಷೇರು ಬಂಡವಾಳದಲ್ಲಿ ಶೇ.75ರಷ್ಟು ಬಂಡವಾಳವನ್ನು ಶಿಕ್ಷಣಕ್ಕಾಗಿ ಅರಿವು ಯೋಜನೆಯಡಿ ಬಳಸಲಾಗುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News