ಅಂಬೇಡ್ಕರ್ ಅಭಿವೃದ್ಧಿ ನಿಗಮ ಅನುದಾನ ದುರ್ಬಳಕೆ ಆರೋಪ: ವ್ಯವಸ್ಥಾಪಕರಿಬ್ಬರು ಸೇರಿ 2 ಅಧಿಕಾರಿಗಳ ಅಮಾನತು

Update: 2021-03-12 12:28 GMT

ಬೆಂಗಳೂರು, ಡಿ. 31: ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಬೆಂಗಳೂರು ನಗರ ಜಿಲ್ಲಾ ಕಚೇರಿಯಲ್ಲಿ ಅನುದಾನ ದುರ್ಬಳಕೆ ಸಂಬಂಧ ಇಬ್ಬರು ವ್ಯವಸ್ಥಾಪಕರೂ ಸೇರಿದಂತೆ ಒಟ್ಟು ಎಂಟು ಮಂದಿ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

2016-17 ಹಾಗೂ 2017-18ನೆ ಸಾಲಿನಲ್ಲಿ ಸ್ವಯಂ ಉದ್ಯೋಗ ಯೋಜನೆ ಮತ್ತು ಕೈಗಾರಿಕಾ ಸೇವಾ ವ್ಯವಹಾರ ಯೋಜನೆಯಡಿ ಪರಿಶಿಷ್ಟ ಜಾತಿ(ಎಸ್ಸಿ) 115 ಫಲಾನುಭವಿಗಳಿಗೆ ಬಿಡುಗಡೆ ಮಾಡಲಾದ 6.30ಕೋಟಿ ರೂ.ಸಹಾಯಧನ ಫಲಾನುಭವಿಗಳ ಬದಲು ಮಧ್ಯವರ್ತಿಗಳಿಗೆ ವರ್ಗಾವಣೆ ಮಾಡಿದ್ದರು.ಆ ಮೂಲಕ ಸರಕಾರದ ಅನುದಾನ ದುರುಪಯೋಗ ಆರೋಪದ ಮೇರೆಗೆ ಅಂದಿನ ಜಿಲ್ಲಾ ವ್ಯವಸ್ಥಾಪಕ ಹಾಗೂ ಇಂದಿನ ಉಪ ಪ್ರಧಾನ ವ್ಯವಸ್ಥಾಪಕ ಎಚ್. ಆರ್.ಅರುಣ್‌ಕುಮಾರ್ ಮತ್ತು ಅಂದಿನ ಜಿಲ್ಲಾ ವ್ಯವಸ್ಥಾಪಕ ಹಾಗೂ ಇಂದಿನ ಉಪ ಪ್ರಧಾನ ವ್ಯವಸ್ಥಾಪಕ ಜೆ.ಜಿ.ಪದ್ಮನಾಭರನ್ನು ಅಮಾನತು ಮಾಡಲಾಗಿದೆ.

ಅಭಿವೃದ್ಧಿ ನಿಗಮದ ಕಚೇರಿ ಅಧೀಕ್ಷಕಿ ಎಂ.ಸಿ.ಇಂದಿರಮ್ಮ, ತಾಲೂಕು ಅಭಿವೃದ್ಧಿ ಅಧಿಕಾರಿಗಳಾದ ಪಿ.ಮಲ್ಲೇಶ್ ಮತ್ತು ಎನ್.ಮುಕುಂದ, ದ್ವಿತೀಯ ದರ್ಜೆ ಸಹಾಯಕರಾದ ಕಲ್ಪನಾ ಮತ್ತು ಪುಟ್ಟೀರಯ್ಯ, ಅಂದಿನ ಪ್ರಭಾರ ತಾಲೂಕು ಅಭಿವೃದ್ಧಿ ಅಧಿಕಾರಿ ಎಂ.ಲಿಂಗಣ್ಣ ಅವರನ್ನು ಅಮಾನತುಗೊಳಿಸಲಾಗಿದೆ. ಜೊತೆಗೆ, ನಿಗಮದಲ್ಲಿ ಪ್ರಥಮ ದರ್ಜೆ ಸಹಾಯಕರ ಹುದ್ದೆಯಲ್ಲಿ ಹೊರಗುತ್ತಿಗೆ ಆಧಾರದ ಮೇರೆಗೆ ಕಾರ್ಯ ನಿರ್ವಹಿಸುತ್ತಿದ್ದ ಹೇಮಂತ್‌ ಕುಮಾರ್‌ನನ್ನೂ ಸೇವೆಯಿಂದ ವಜಾ ಮಾಡಲಾಗಿದೆ.

ಅಲ್ಲದೆ, ಬೆಂಗಳೂರಿನ ಕೆನರಾ ಬ್ಯಾಂಕ್‌ನ ಕಲ್ಕರೆ ಶಾಖೆ ಅಂದಿನ ವ್ಯವಸ್ಥಾಪಕರು ಹಾಗೂ ಇತರೆ ಬ್ಯಾಂಕ್ ಸಿಬ್ಬಂದಿಯೊಂದಿಗೆ ಶಾಮೀಲಾಗಿ ಮಧ್ಯವರ್ತಿಗಳಾದ ಗೋವಿಂದರಾಜು, ಮುರುಳಿ, ಸೈಯದ್ ಸಾದಿಕ್, ಜಿಮರನ್ ಪಾಷಾ, ಅಮರ್, ಸತ್ಯನಾರಾಯಣ, ಜೆ. ಶ್ರೀಧರ್, ಕೆ.ಮಂಜುನಾಥ್, ಭುವನೇಶ್, ಕೋದಂಡರಾಮ ಹಾಗೂ ಜೀವರಾಜ್ ಒಟ್ಟಾರೆ 6.30 ಕೋಟಿ ರೂ.ದುರುಪಯೋಗ ಮಾಡಿರುವುದು ಸರಕಾರವು ಕೈಗೊಂಡ ತನಿಖೆಯಲ್ಲಿ ಕಂಡು ಬಂದಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಮಾಗಡಿ ರಸ್ತೆಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಈ ಎಲ್ಲ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 408, 419, 420 ಓದಲಾದ 149 ಪ್ರಕಾರ ನ್ಯಾಯಾಲಯದಲ್ಲಿ ಮೊಕದ್ದಮೆಯನ್ನೂ ಹೂಡಲಾಗಿದೆ ಎಂದು ಅಂಬೇಡ್ಕರ್ ಅಭಿವೃದ್ಧಿ ನಿಗಮದ ಬೆಂಗಳೂರು ನಗರ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News