150 ಕೋಟಿ ಮೌಲ್ಯದ ಪಾಲಿಕೆ ಸೊತ್ತು ಚರ್ಚ್ ಹೆಸರಿಗೆ ಖಾತಾ: 2 ದಿನಗಗಳಲ್ಲಿ ಟಿಪ್ಪಣಿ ಸಹಿತ ಕಡತ ಮಂಡಿಸಲು ಸೂಚನೆ
ಬೆಂಗಳೂರು, ಡಿ.31: ಬೇಗೂರು ಗ್ರಾಮದಲ್ಲಿರುವ ಸೇಂಟ್ ಇಗ್ನೇಷಿಯಸ್ ಚರ್ಚ್‌ಗೆ ತಿದ್ದುಪಡಿ ಎಂದು ನೂರಾರು ಕೋಟಿ ರೂ. ಮೌಲ್ಯದ ನಾಲ್ಕು ಎಕರೆ ವಿಸ್ತೀರ್ಣದ ಸರಕಾರಿ ಸೊತ್ತನ್ನು ಸೇರಿಸಿ, 2 ಲಕ್ಷ ಚದರ ಅಡಿಗಳಿಗೆ ಎ ಖಾತಾ ಮಾಡಿಕೊಟ್ಟಿರುವ ಅಧಿಕಾರಿಗಳ ಕ್ರಮದ ಬಗ್ಗೆ ಎರಡು ದಿನದೊಳಗೆ ಟಿಪ್ಪಣಿ ಸಹಿತ ಕಡತ ಮಂಡಿಸುವಂತೆ ಪಾಲಿಕೆಯ ವಿಶೇಷ ಆಯುಕ್ತ(ಕಂದಾಯ)ರಿಗೆ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಸೂಚಿಸಿದ್ದಾರೆ.
ಬೇಗೂರು ಉಪಭಾಗದ ಎಆರ್‌ಒ, ಅಂಜನಾಪುರ ಭಾಗದ ಆರ್‌ಒ, ಬೊಮ್ಮನಹಳ್ಳಿ ವಲಯದ ಉಪ ಆಯುಕ್ತರು ಮತ್ತು ಜಂಟಿ ಆಯುಕ್ತರ ವಿರುದ್ಧ ದೂರು ದಾಖಲಾದ ಬಳಿಕ ಆಯುಕ್ತರು ಈ ಸಂಬಂಧದ ಕಡತವನ್ನು ತಮಗೆ ಕಳುಹಿಸುವಂತೆ ಆದೇಶಿಸಿದ್ದಾರೆ.
ಸೇಂಟ್ ಇಗ್ನೇಷಿಯಸ್ ಚರ್ಚ್‌ಗೆ ಹೊಂದಿಕೊಂಡಂತೆ, ನಾಲ್ಕು ಎಕರೆ ವಿಸ್ತೀರ್ಣ ಸರಕಾರಿ ಸ್ವತ್ತಾಗಿದ್ದು, ಚರ್ಚ್‌ನ ಆಡಳಿತ ಮಂಡಳಿಯ ಪರವಾಗಿ ಪಾಲಿಕೆಯ ಅಧಿಕಾರಿಗಳು 150 ಕೋಟಿ ರೂ. ಮೌಲ್ಯದ ಸೊತ್ತನ್ನು ಏಕಾಏಕಿ ತಿದ್ದುಪಡಿ ಹೆಸರಿನಲ್ಲಿ ಚರ್ಚ್ ಹೆಸರಿಗೆ ಖಾತಾ ಮಾಡಿಕೊಟ್ಟಿದ್ದರು. ಬಿಬಿಎಂಪಿ ಆಯುಕ್ತರು ಹಾಗೂ ಪಾಲಿಕೆಯ ಕೌನ್ಸಿಲ್ ಸಭೆಯ ಅನುಮೋದನೆಯನ್ನು ಪಡೆಯದೆ ಕಾನೂನಿನ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ವಲಯ ಮಟ್ಟದಲ್ಲೇ ತಮಗೆ ಇಷ್ಟಬಂದ ಹಾಗೆ ತಿದ್ದುಪಡಿ ಮಾಡಿ, ಚರ್ಚ್ ಹೆಸರಿಗೆ ಖಾತಾ ಮಾಡಿ ಕೊಟ್ಟಿದ್ದರು.