ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಪೇಜಾವರ ಶ್ರೀಗೆ ಸಂತಾಪ

Update: 2019-12-31 17:31 GMT

ಬೆಂಗಳೂರು, ಡಿ.31: ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ನಿಧನಕ್ಕೆ ಮಂಗಳವಾರ ನಡೆದ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಗೌರವ ಪೂರಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸಭೆ ಆರಂಭದಲ್ಲಿ ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್ ಸಂತಾಪ ಸೂಚಕ ನಿರ್ಣಯ ಮಂಡಿಸಿ, ಪೇಜಾವರ ಶ್ರೀಗಳು ಅಸ್ಪೃಶ್ಯತೆ ವಿರುದ್ಧ ದೊಡ್ಡ ಮಟ್ಟದ ಹೋರಾಟ ನಡೆಸಿದ್ದರು ಎಂದರು.

ಈ ವೇಳೆ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜೀದ್ ಅವರು, ಪೇಜಾವರ ಶ್ರೀಗಳು ಮುಸ್ಲಿಂ ಸಮುದಾಯದವರ ಬಗ್ಗೆ ಕಾಳಜಿ ಇಟ್ಟುಕೊಂಡಿದ್ದರು. ರಂಝಾನ್ ಸಂದರ್ಭದಲ್ಲಿ ಉಡುಪಿಯಲ್ಲಿ ಇಫ್ತಾರ್ ಕೂಟವನ್ನು ಆಯೋಜನೆ ಮಾಡಿದ್ದು, ದಲಿತರ ಮನೆಗೆ ತೆರಳಿ ನಾವಿದ್ದೇವೆ ಎಂದು ಸಾರಿದ್ದು. ಮಿಗಿಲಾಗಿ ಅವರು ಮುಸ್ಲಿಮರೊಬ್ಬರನ್ನು ತಮ್ಮ ಕಾರಿನ ವಾಹನ ಚಾಲಕರನ್ನಾಗಿ ನೇಮಿಸಿಕೊಂಡಿದ್ದರು ಎಂದರು.

ಮೇಯರ್ ಎಂ.ಗೌತಮ್‌ ಕುಮಾರ್ ಮಾತನಾಡಿ, ಪೇಜಾವರ ಶ್ರೀಗಳ ಸಾಮಾಜಿಕ ಕಳಕಳಿ ದೊಡ್ಡದು. ರಾಜ್ಯದಲ್ಲಿ ನಡೆಯುತ್ತಿದ್ದ ದಲಿತ ಸಂಘರ್ಷಗಳ ಸಂದರ್ಭದಲ್ಲಿ ಅವರೊಂದಿಗೆ ನಾವಿದ್ದೇವೆ ಎಂಬ ಸಂದೇಶ ಸಾರಿದ್ದರು. ದಲಿತರೊಂದಿಗೆ ಭೋಜನ ಸ್ವೀಕರಿಸಿದರು ಎಂದರು.

ನಾವೇನು ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ: ನಾವೇನು ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ. ಯಾರಾದರೂ ಒಳ್ಳೆಯವರು ಎಂದರೆ ಸಾಕು ಸೋಕಾಸ್ ನೋಟಿಸ್ ನೀಡುತ್ತಿದ್ದಾರೆ. ನಮ್ಮನ್ನು ಅನರ್ಹ ಮಾಡಿರುವುದು ಏಕೆ ಎಂದು ಕಾಂಗ್ರೆಸ್ ಹಲವು ಸದಸ್ಯರು ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜೀದ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪೇಜಾವರ ಶ್ರೀಗಳ ಸಂತಾಪದ ಬಳಿಕ ಈ ವಿಷಯ ಪ್ರಸ್ತಾಪಿಸಿದ ಜಿ.ಕೆ ವೆಂಕಟೇಶ್, ವೇಲು ನಾಯ್ಕರ್ ಸೇರಿದಂತೆ ಹಲವು ಸದಸ್ಯರು, ನಾವು ಯಾವುದೇ ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ, ಅದಕ್ಕೆ ಯಾವುದೇ ಸಾಕ್ಷಿಗಳಿಲ್ಲ. ಇಲ್ಲಿಯವರಿಗೆ ನಮಗೆ ಯಾವುದೇ ನೋಟಿಸ್ ಕೂಡ ಬಂದಿಲ್ಲ, ಆದರೂ ಸಹ ನಮ್ಮನ್ನು ಅನರ್ಹಗೊಳಿಸಲು ಆಯುಕ್ತರಿಗೆ ಮನವಿ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News