1.5 ಕೋಟಿ ರೂ. ದರೋಡೆ ಪ್ರಕರಣ: ಆರೋಪಿ ಮಜೀದ್ ಪಾಷಾಗೆ ಹೈಕೋರ್ಟ್ ಜಾಮೀನು

Update: 2019-12-31 17:43 GMT

ಬೆಂಗಳೂರು, ಡಿ.31: ದಾವಣಗೆರೆಯ ಗುತ್ತಿಗೆದಾರರಿಗೆ ಸೇರಿದ 1.5 ಕೋಟಿ ಹಣವನ್ನು ಪೊಲೀಸರ ಸೋಗಿನಲ್ಲಿ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ತನೆಯ ಆರೋಪಿ ಮಜೀದ್ ಪಾಷಾಗೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.

ಈ ಕುರಿತು ಜಾಮೀನು ಕೋರಿ ಬೆಂಗಳೂರಿನ ಚಾಮುಂಡಿನಗರ ನಿವಾಸಿ ಮಜೀದ್ ಪಾಷಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು. ಪೊಲೀಸ್ ಅಧಿಕಾರಿಗಳು ಚಾರ್ಜ್‌ಶೀಟ್ ಸಲ್ಲಿಸಲು ವಿಳಂಬ ಮಾಡುತ್ತಿರುವ ಹಿನ್ನೆಲೆಯಲ್ಲಿ ಹೈಕೋರ್ಟ್ ಮಜೀದ್‌ಗೆ ಜಾಮೀನು ಮಂಜೂರು ಮಾಡಿದೆ.

ಗುತ್ತಿಗೆ ವ್ಯವಹಾರ ಸಂಬಂಧ ಬೆಂಗಳೂರಿನಲ್ಲಿರುವ ವ್ಯಕ್ತಿಯೊಬ್ಬರಿಗೆ ದಾವಣಗೆರೆಯ ವೆಂಕಟರೆಡ್ಡಿ ಅವರು ಒಂದೂವರೆ ಕೋಟಿ ಹಣ ಕೊಡುವುದಾಗಿ ಹೇಳಿದ್ದರು. ಅದರಂತೆ ಕಿಶೋರ್ ಎಂಬಾತನ ಮೂಲಕ ಬೆಂಗಳೂರಿನ ಸ್ನೇಹಿತನಿಗೆ ಹಣ ತಲುಪಿಸಲು ನಿರ್ಧರಿಸಿದ್ದರು. ಆದರೆ, ಈ ವಿಷಯ ತಿಳಿದ ವೆಂಕಟರೆಡ್ಡಿ ಕಾರು ಚಾಲಕ ಆರೋಪಿ ಗಣೇಶ್, ಮಾಲಕನ ಹಣ ದೋಚಲು ಯೋಚಿಸಿದ್ದ. ಈ ಕೃತ್ಯಕ್ಕೆ ಆತನಿಗೆ ಸ್ನೇಹಿತರು ಸಾಥ್ ಕೊಟ್ಟಿದ್ದರು. ತನ್ನ ಗೆಳೆಯ ದಾದಾಪೀರ್‌ಗೆ ಮಾಹಿತಿ ನೀಡಿ ಹಣ ಲಪಟಾಯಿಸಲು ಗಣೇಶ್ ಸಂಚು ರೂಪಿಸಿದ್ದ. ಕಿಶೋರ್ ದಾವಣಗೆರೆಯಿಂದ 1.5 ಕೋಟಿ ಬೆಂಗಳೂರಿಗೆ ಕಾರಿನಲ್ಲಿ ತೆಗೆದುಕೊಂಡು ಬರುತ್ತಿದ್ದಾಗ, ಗೊರೆಗುಂಟೆಪಾಳ್ಯ ಜಂಕ್ಷನ್ ಬಳಿ ಪೊಲೀಸರ ಸೋಗಿನಲ್ಲಿ ಸಹಚರರ ಜತೆ ಬಂದ ದಾದಾಫಿರ್, ಕಿಶೋರ್ ಕಾರನ್ನು ಅಡ್ಡಗಟ್ಟಿ ಹಣ ದೋಚಿ ಪರಾರಿಯಾಗಿದ್ದರು ಎನ್ನಲಾಗಿತ್ತು. ಈ ಪೈಕಿ ಹನ್ನೊಂದು ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಅದರಲ್ಲಿ ಮಜೀದ್ ಪಾಷಾ 10ನೆ ಆರೋಪಿಯಾಗಿದ್ದನು. 10ನೆ ಆರೋಪಿಗೆ ಜಾಮೀನು ಮಂಜೂರು ಮಾಡಿರುವ ಹೈಕೋರ್ಟ್ 1 ಲಕ್ಷ ರೂ.ಬಾಂಡ್ ಮತ್ತು ಇಬ್ಬರ ಶ್ಯೂರಿಟಿ ನೀಡಲು ಹೈಕೋರ್ಟ್ ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News