ಮೋದಿ ಸರಕಾರ ದೊಡ್ಡ ಆರ್ಥಿಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು ವಿಫಲ: ಅಮೆರಿಕ ಅರ್ಥಶಾಸ್ತ್ರಜ್ಞ ಸ್ಟೀವ್ ಹಾಂಕ್

Update: 2020-01-01 14:48 GMT

ವಾಶಿಂಗ್ಟನ್, ಜ. 1: ಭಾರತವು 2020ರಲ್ಲಿ 5 ಶೇಕಡ ಒಟ್ಟು ದೇಶಿ ಉತ್ಪನ್ನ (ಜಿಡಿಪಿ)ವನ್ನು ಸಾಧಿಸುವುದು ಕಷ್ಟ, ಯಾಕೆಂದರೆ ಕಳೆದ ಹಲವು ತ್ರೈಮಾಸಿಕಗಳಲ್ಲಿ ಅನುಭವಿಸಿದ ತೀವ್ರ ಆರ್ಥಿಕ ಹಿನ್ನಡೆಯಿಂದಾಗಿ ಭಾರತವು ನಗದು ಕೊರತೆಯನ್ನು ಎದುರಿಸುತ್ತಿದೆ ಎಂದು ಅಮೆರಿಕದ ಖ್ಯಾತ ಅರ್ಥಶಾಸ್ತ್ರಜ್ಞ ಸ್ಟೀವ್ ಹ್ಯಾಂಕ್ ಹೇಳಿದ್ದಾರೆ.

ಭಾರತವು ಒಮ್ಮೆ ತಾಳಲಾರದಷ್ಟು ಪ್ರಮಾಣದಲ್ಲಿ ಸಾಲ ನೀಡಿತು, ಈಗ ಸರಕಾರಿ ಬ್ಯಾಂಕ್‌ಗಳು ವಸೂಲಿಯಾಗದ ಸಾಲಗಳ ಭಾರಕ್ಕೆ ಜಗ್ಗಿವೆ ಎಂದು ಅಮೆರಿಕದ ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದಲ್ಲಿ ಆನ್ವಯಿಕ ಅರ್ಥಶಾಸ್ತ್ರವನ್ನು ಕಲಿಸುವ ಸ್ಟೀವ್ ಹ್ಯಾಂಕ್ ಹೇಳಿದರು.

‘‘ಭಾರತದ ಆರ್ಥಿಕ ಕುಸಿತಕ್ಕೂ ಸಾಲದ ಅಲಭ್ಯತೆಗೂ ಸಂಬಂಧವಿದೆ. ಇದು ಸರಣಿ ಸಮಸ್ಯೆ. ಇದರ ಪರಿಣಾಮವಾಗಿ, 2020ರಲ್ಲಿ ಜಿಡಿಪಿ ಬೆಳವಣಿಗೆ ದರವನ್ನು 5 ಶೇಕಡ ಮಟ್ಟದಲ್ಲಿ ಕಾಯ್ದುಕೊಂಡು ಬರಲು ಹೆಣಗಾಡಬೇಕಾಗುತ್ತದೆ’’ ಎಂದರು.

 ಅದೂ ಅಲ್ಲದೆ, ಭಾರತ ಈಗಾಗಲೇ ತನ್ನ ಜನರ ಹಿತಾಸಕ್ತಿಗಳನ್ನು ಕಾಯುವಲ್ಲಿ ಅತಿ ಸಂರಕ್ಷಣಾ ಧೋರಣೆಯನ್ನು ಅನುಸರಿಸುತ್ತಿದೆ ಎಂದು ಅವರು ಹೇಳಿದರು. ‘‘ಇತ್ತೀಚಿನವರೆಗೂ ಭಾರತವನ್ನು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ದೇಶವಾಗಿ ಪರಿಗಣಿಸಲಾಗುತ್ತಿತ್ತು. ಆದರೆ 2019-20ರ ಆರ್ಥಿಕ ವರ್ಷದ ಸೆಪ್ಟಂಬರ್ ‌ನಲ್ಲಿ ಕೊನೆಗೊಂಡ ತ್ರೈಮಾಸಿಕದಲ್ಲಿ ಅದರ ಬೆಳವಣಿಗೆ ದರ 4.5 ಶೇಕಡಕ್ಕೆ ಕುಸಿಯಿತು. ಇದು ಆರು ವರ್ಷಗಳಲ್ಲೇ ಕನಿಷ್ಠವಾಗಿದೆ. ಇದಕ್ಕೆ ಹೂಡಿಕೆಯಲ್ಲಿನ ಕುಸಿತ ಕಾರಣ ಎಂದು ಹೇಳಲಾಗಿದೆ. ನಿರುದ್ಯೋಗ ಮತ್ತು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಗ್ರಾಮೀಣ ಜನರು ಈಗ, ಉಳಿಸುವ ಹಣವನ್ನು ಆಹಾರಕ್ಕಾಗಿ ಬಳಸುತ್ತಿದ್ದಾರೆ’’ ಎಂದು ಅಮೆರಿಕದ ಅರ್ಥಶಾಸ್ತ್ರಜ್ಞ ಅಭಿಪ್ರಾಯಪಟ್ಟಿದ್ದಾರೆ.

ಹ್ಯಾಂಕ್ ಅಮೆರಿಕದ ಮಾಜಿ ಅಧ್ಯಕ್ಷ ರೊನಾಲ್ಡ್ ರೇಗನ್‌ರ ಆರ್ಥಿಕ ಸಲಹಾಗಾರರ ಮಂಡಳಿಯಲ್ಲಿ ಸೇವೆ ಸಲ್ಲಿಸಿದ್ದರು.

ಆರ್ಥಿಕ ಸುಧಾರಣೆಯಲ್ಲಿ ಮೋದಿ ಸರಕಾರಕ್ಕೆ ಆಸಕ್ತಿಯಿಲ್ಲ

ನರೇಂದ್ರ ಮೋದಿ ಸರಕಾರವು ಯಾವುದೇ ದೊಡ್ಡ ಆರ್ಥಿಕ ಸುಧಾರಣೆಯನ್ನು ತರಲು ವಿಫಲವಾಗಿದೆ ಎಂದು ಸ್ಟೀವ್ ಹ್ಯಾಂಕ್ ಹೇಳಿದ್ದಾರೆ.

‘‘ಸದೃಢ ಹಾಗೂ ಅಗತ್ಯ ಆರ್ಥಿಕ ಸುಧಾರಣೆಗಳನ್ನು ತರುವಲ್ಲಿ ಮೋದಿ ಸರಕಾರಕ್ಕೆ ಯಾವುದೇ ಆಸಕ್ತಿ ಇರುವಂತೆ ಕಾಣುತ್ತಿಲ್ಲ. ಅದರ ಬದಲಿಗೆ, ಮೋದಿ ಸರಕಾರವು ಅಸ್ಥಿರಕಾರಕ ಹಾಗೂ ಸ್ಫೋಟಕ ಪರಿಣಾಮಗಳನ್ನು ಬೀರಬಲ್ಲ ಎರಡು ವಿಷಯಗಳಿಗೆ ಆದ್ಯತೆ ನೀಡಿದೆ. ಅವುಗಳೆಂದರೆ ಜನಾಂಗ ಮತ್ತು ಧರ್ಮ. ಇದು ಮಾರಕ ಮಿಶ್ರಣವಾಗಿದೆ’’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾಪ್ರಭುತ್ವದಿಂದ ಪೊಲೀಸ್ ಆಡಳಿತದತ್ತ

ಮೋದಿ ಆಡಳಿತದಲ್ಲಿ ಭಾರತವು ಈಗಾಗಲೇ ‘ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ’ದಿಂದ ‘ಜಗತ್ತಿನ ಅತಿ ದೊಡ್ಡ ಪೊಲೀಸ್ ದೇಶ’ವಾಗಿ ಮಾರ್ಪಟ್ಟಿದೆ ಎಂಬುದಾಗಿ ಹೆಚ್ಚಿನವರು ಅಭಿಪ್ರಾಯಪಟ್ಟಿದ್ದಾರೆ ಎಂದು ಅರ್ಥಶಾಸ್ತ್ರಜ್ಞ ಸ್ಟೀವ್ ಹ್ಯಾಂಕ್ ಹೇಳಿದರು.

ಅವರು ವಾಶಿಂಗ್ಟನ್‌ನ ಕ್ಯಾಟೊ ಇನ್‌ಸ್ಟಿಟ್ಯೂಟ್‌ನಲ್ಲಿ ಟ್ರಬಲ್ಡ್ ಕರೆನ್ಸೀಸ್ ಪ್ರಾಜೆಕ್ಟ್‌ನಲ್ಲಿ ಸೀನಿಯರ್ ಫೆಲೋ ಮತ್ತು ನಿರ್ದೇಶಕರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News