×
Ad

18 ವರ್ಷಗಳಲ್ಲಿ ನಡೆದೇ ಇಲ್ಲ ವಾರ್ಷಿಕ 60 ದಿನಗಳ ಅಧಿವೇಶನ: 2019ರಲ್ಲಿ ಕೇವಲ 18 ದಿನಗಳ ಕಲಾಪ !

Update: 2020-01-02 20:01 IST

ಬೆಂಗಳೂರು, ಜ. 2: ರಾಜ್ಯದ ಜ್ವಲಂತ ಸಮಸ್ಯೆಗಳ ಚರ್ಚೆ ಮತ್ತು ಪರಿಹಾರ ಕಲ್ಪಿಸುವ ದೃಷ್ಟಿಯಿಂದ ವಿಧಾನಮಂಡಲ ಅಧಿವೇಶನ ವರ್ಷಕ್ಕೆ ಕನಿಷ್ಠ 60 ದಿನಗಳ ಕಾಲ ನಡೆಸಬೇಕೆಂಬ ನಿಯಮವಿದೆ. ಆದರೆ, 18 ವರ್ಷಗಳಿಂದ ವಾರ್ಷಿಕ 60 ದಿನ ಅಧಿವೇಶನವನ್ನೆ ನಡೆಸಲು ಆಗಿಲ್ಲ.

2002ರಲ್ಲಿ 63 ದಿನಗಳು ಅಧಿವೇಶನ ಕಲಾಪ ನಡೆಸಿದ್ದನ್ನೂ ಬಿಟ್ಟರೆ ಈವರೆಗೂ ಕನಿಷ್ಟ 60 ದಿನಗಳ ಅಧಿವೇಶನ ನಡೆಸಲು ಸಾಧ್ಯವಾಗಿಲ್ಲ. ಕನಿಷ್ಠ 60 ದಿನ ಅಧಿವೇಶನ ನಡೆಸಲೇಬೇಕು ಎಂದು ಎಲ್ಲ ಸಿಎಂಗಳು ಹೇಳಿದರೂ, ಸರಕಾರಗಳು ಬದಲಾದರೂ ವರ್ಷಕ್ಕೆ 60 ದಿನ ಅಧಿವೇಶನ ಕಲಾಪ ನಡೆಸಿಲ್ಲ.

ಕೇವಲ 18 ದಿನ: 2019ರಲ್ಲಿ ಲೋಕಸಭೆ ಚುನಾವಣೆ, ಉಪಚುನಾವಣೆ, ಸ್ಥಳೀಯ ಸಂಸ್ಥೆಗಳ ಚುನಾವಣೆ, ರಾಜಕೀಯ ಸ್ಥಿತ್ಯಂತರಗಳಿಂದ ಸರಕಾರ ಬದಲಾವಣೆ ಹಿನ್ನೆಲೆಯಲ್ಲಿ ಅಧಿವೇಶನ ಕಲಾಪ ನಡೆದದ್ದು ಕೇವಲ 18 ದಿನಗಳು ಮಾತ್ರ.

2019ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರಕಾರ ಹಾಗೂ ಬಿಜೆಪಿ ಸರಕಾರ ಆಡಳಿತ ನಡೆಸಿದರೂ ಕನಿಷ್ಠ 60 ದಿನ ಅಧಿವೇಶನ ನಡೆಸಲು ಆಗಿಲ್ಲ. 2018ರಲ್ಲಿ ಒಟ್ಟು 33 ದಿನಗಳ ಕಾಲ ಅಧಿವೇಶನ ಕಲಾಪ ನಡೆಸಿದ್ದು, ವಾರ್ಷಿಕ 60 ದಿನ ಕಲಾಪ ನಡೆಸಬೇಕೆಂಬುದು ಕೇವಲ ಘೋಷಣೆಗೆ ಸೀಮಿತವಾಗಿದೆ. ಸಿದ್ದರಾಮಯ್ಯ ಸಿಎಂ ಆಗಿದ್ದ 2013ರ ಅವಧಿಯಲ್ಲಿ-47, 2014ರಲ್ಲಿ-53, 2015-58, 2016-35, 2017- 50 ದಿನಗಳ ಅಧಿವೇಶನ ಕಲಾಪ ನಡೆದಿದೆ.

ಅಲ್ಲದೇ, 2003-44, 2004-23, 2005-51, 2006-56, 2007-34, 2008-17, 2009-42, 2010-10, 2011-31, 2012-57 ದಿನಗಳ ಕಾಲ ವಿಧಾನಸಭೆ ಕಲಾಪ ನಡೆದಿದೆ.

1963ರಲ್ಲಿ 98 ದಿನ ಕಲಾಪ: 1955ರಲ್ಲಿ 75 ದಿನ ಅಧಿವೇಶನ ನಡೆದಿದ್ದರೆ, 1958ರಲ್ಲಿ 80 ದಿನ, 1963ರಲ್ಲಿ 98 ದಿನ ಗರಿಷ್ಠ ಪ್ರಮಾಣದಲ್ಲಿ ಅಧಿವೇಶನ ನಡೆದಿದೆ. 1972ರಲ್ಲಿ 82, 1973ರಲ್ಲಿ ಡಿ.ದೇವರಾಜ ಅರಸು ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಒಟ್ಟು 97 ದಿನಗಳ ಕಾಲ ವಿಧಾನ ಮಂಡಲ ಅಧಿವೇಶನ ನಡೆಸಲಾಗಿದೆ.

60 ದಿನದ ನಿರೀಕ್ಷೆ: 2020ರ ವರ್ಷದ ವಿಧಾನ ಮಂಡಲ ಮೊದಲ ಅಧಿವೇಶನ ಫೆ.17ರಿಂದ ಆರಂಭಗೊಳ್ಳಲಿದೆ. ಈ ವರ್ಷವಾದರೂ ಕನಿಷ್ಠ 60 ದಿನಗಳ ಕಾಲ ಅಧಿವೇಶನ ಕಲಾಪ ನಡೆಸಬೇಕೆಂಬ ನಿಯಮವನ್ನು ಬಿಎಸ್‌ವೈ ನೇತೃತ್ವದ ಸರಕಾರ ಅನುಷ್ಠಾನಗೊಳಿಸುವುದೇ ಕಾದುನೋಡಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News