ಕೇಂದ್ರದ ಚಂದಮಾಮನ ತೋರಿಸಿ ‘ಅನರ್ಹ ಸರಕಾರ’ ರಚಿಸಿದ ಬಿಎಸ್‌ವೈ: ಕುಮಾರಸ್ವಾಮಿ

Update: 2020-01-02 15:20 GMT

ಬೆಂಗಳೂರು, ಜ.2: ‘ರಾಜ್ಯದಿಂದ 25 ಸಂಸದರನ್ನು ಪಡೆದಿರುವ ಮೋದಿಯವರು, ಕೇಂದ್ರದ ಚಂದಮಾಮನನ್ನು ತೋರಿಸಿ ‘ಅನರ್ಹ ಸರಕಾರ’ ರಚಿಸಿಕೊಂಡ ಬಿಎಸ್ವೈ ಅವರು ಶಿವಕುಮಾರ ಸ್ವಾಮೀಜಿಗಳು ಐಕ್ಯರಾಗಿರುವ ತುಮಕೂರಿನ ನೆಲದಲ್ಲಿ ನಿಂತು ಇವೆಲ್ಲಕ್ಕೂ ಉತ್ತರ ಕೊಡುವರೇ?’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಗುರುವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ರಾಜ್ಯದ ಖಜಾನೆ ಖಾಲಿಯಾಗಿದೆ. ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಮುದ್ರಾಂಕ ಮತ್ತು ನೋಂದಣಿ, ಮೋಟಾರು ವಾಹನ ಕ್ಷೇತ್ರ, ವಾಣಿಜ್ಯ ತೆರಿಗೆ ಬಹುದೊಡ್ಡ ಆದಾಯದ ಮೂಲವಾದರೂ ಅವುಗಳಿಂದ ಸಂಪನ್ಮೂಲ ಬಂದಿಲ್ಲ. ಕಾರಣವೇನು? ಕೇಂದ್ರದ ಕೆಟ್ಟ ಆರ್ಥಿಕ ನೀತಿ. ಜಿಡಿಪಿ, ದೇಶದ ಅಭಿವೃದ್ಧಿ ನುಂಗಿದ ಕೇಂದ್ರದ ನೀತಿಗಳು ಈಗ ರಾಜ್ಯದ ಮೇಲೂ ಪರಿಣಾಮ ಬೀರಿದೆ’ ಎಂದು ಟೀಕಿಸಿದ್ದಾರೆ.

‘ತೆರಿಗೆಯಲ್ಲಿ ರಾಜ್ಯಕ್ಕೆ ನೀಡಬೇಕಾದ ಪಾಲನ್ನೂ ಕೇಂದ್ರ ವಂಚಿಸಿದೆ. ರಾಜ್ಯಕ್ಕೆ ಬರಬೇಕಿದ್ದ ಪಾಲಿನಲ್ಲಿ ಶೇ.5.44ರಷ್ಟು ಇನ್ನೂ ಬಂದಿಲ್ಲ. ಇದು ರಾಜ್ಯದ ಅಭಿವೃದ್ಧಿಯ ವಿಚಾರದಲ್ಲಿ ಕೇಂದ್ರದ ಮಲತಾಯಿ ಧೋರಣೆ. ಲೋಕಸಭೆ ಸ್ಥಾನಗಳ ಮೇಲೆ ಮಾತ್ರ ಕಣ್ಣಿಡುವ ಕೇಂದ್ರ ಇಲ್ಲಿನ ಬೇಕು-ಬೇಡಗಳನ್ನು ನಿರ್ಲಕ್ಷಿಸುತ್ತದೆ. ಮೋದಿ ಈ ಬಗ್ಗೆ ಇಂದು ಮಾತಾಡಲಿ’ ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

‘ಪ್ರಮಾಣ ವಚನ ಸ್ವೀಕರಿಸಿದ ಮರುದಿನ ರಾಜ್ಯದ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎಂದಿದ್ದರು ಬಿಎಸ್ವೈ. ಆದರೀಗ ಪರಿಸ್ಥಿತಿ ವಿಷಮವಾಗಿದೆ. ರಾಜ್ಯಕ್ಕೆ ಕೇಂದ್ರದಿಂದ ಬರಬೇಕಾದ ಬರ ಪರಿಹಾರ, ಅನುದಾನ, ತೆರಿಗೆ ಹಂಚಿಕೆಗಳನ್ನು ದಿಟ್ಟತನದಿಂದ ಕೇಳುವ ಶಕ್ತಿ ಬಿಎಸ್ವೈ ಅವರಿಗಿಲ್ಲ. ನ್ಯಾಯವಾಗಿ ಬರಬೇಕಾದ್ದನ್ನು ಪಡೆಯಲಾಗದ ಬಿಎಸ್ವೈ ಅವರು ದುರ್ಬಲ ಸಿಎಂ’ ಎಂದು ವಾಗ್ದಾಳಿ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News