ದೇವಸ್ಥಾನ, ಚರ್ಚ್ ಕಟ್ಟಲು ಬರುವವರಿಗೆ ಇಟ್ಟಿಗೆ, ಕಿಟಕಿ, ಬಾಗಿಲನ್ನು ನೀಡುತ್ತೇನೆ: ಡಿ.ಕೆ.ಶಿವಕುಮಾರ್

Update: 2020-01-02 15:24 GMT

ಬೆಂಗಳೂರು, ಜ. 2: ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆಯನ್ನು 2 ವರ್ಷದ ಹಿಂದೆ ನಿರ್ಮಿಸಲು ಹೋದಾಗ ನಾನೆ ಅವರನ್ನು ತಡೆದು ಕಾನೂನುಬದ್ಧವಾಗಿ ಮಾಡುವಂತೆ ಸಲಹೆ ನೀಡಿದ್ದೆ. ನಂತರ ನನ್ನ ಕೈಲಾದ ಸಹಾಯ ಮಾಡಿದೆ. ಉಳಿದದ್ದು ಭಕ್ತನಿಗೂ ಹಾಗೂ ಭಗವಂತನಿಗೂ ಬಿಟ್ಟ ವಿಚಾರ. ಬಿಜೆಪಿಯವರು ಏನು ಬೇಕೋ ಅದನ್ನು ಮಾಡಿಕೊಳ್ಳಲಿ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಗುರುವಾರ ಸದಾಶಿವನಗರದಲ್ಲಿನ ತನ್ನ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಏನು ನಡೆಯುತ್ತಿದೆ ಎಂದು ದೇಶ ಹಾಗೂ ಅಂತರ್‌ರಾಷ್ಟ್ರೀಯ ಮಟ್ಟದಲ್ಲೂ ಜನರು ಗಮನಿಸುತ್ತಿದ್ದಾರೆ. ವಿಶ್ವಕ್ಕೆ ಬಸವ ತತ್ವವನ್ನು ಸಾರಬೇಕೆಂದು ನಾವೇ ಹೇಳುತ್ತೇವೆ. ಅದನ್ನು ನಾವೇ ಪಾಲಿಸದಿದ್ದರೆ ಹೇಗೆ. ಅಧಿಕಾರವಿದ್ದಾಗ ಉತ್ತಮ ಕಾರ್ಯ ಮಾಡುವ ಬದಲು, ಏಸು ಪ್ರತಿಮೆ ವಿಚಾರದಲ್ಲಿ ಅಶೋಕ ಚಕ್ರವರ್ತಿ, ಡಾ.ಅಶ್ವಥ್ ನಾರಾಯಣ್, ಈಶ್ವರಪ್ಪ, ರೇಣುಕಾಚಾರ್ಯ ತಮಗೆ ಬೇಕಾದಂತೆ ಹೇಳುತ್ತಿದ್ದಾರೆ. ಅವರಿಗೆ ಏನು ಬೇಕೋ ಹೇಳಿಕೊಳ್ಳಲಿ ಎಂದು ತಿರುಗೇಟು ನೀಡಿದರು.

ಅವರಿಗೆ ಅಧಿಕಾರ ಇದೆ. ಅದನ್ನು ಒಳ್ಳೆಯದಕ್ಕಾದರೂ ಬಳಸಬಹುದು, ಕೆಟ್ಟದಕ್ಕಾದರೂ ಬಳಸಬಹುದು. ಅದರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಆ ಜಾಗಕ್ಕೆ ಹಲವು ವರ್ಷಗಳ ಚರಿತ್ರೆ ಇದೆ. ಅಲ್ಲಿ ಏಸುವಿನ ವಿಗ್ರಹ, ಶಿಲುಬೆ ಎಲ್ಲ ಮುಂಚೆಯಿಂದಲೂ ಇದೆ. ಅಲ್ಲಿ ಜನ ಪೂಜೆ ಮಾಡಿಕೊಂಡು ಬರುತ್ತಿದ್ದಾರೆ. ಪ್ರತಿಮೆ ನಿರ್ಮಾಣ ವಿಚಾರ ಒಳ್ಳೆಯ ಕೆಲಸ. ಹೀಗಾಗಿ ಅವರಿಗೆ ಮಾರ್ಗದರ್ಶನ ನೀಡಿದೆ. ಮಿಕ್ಕಿದ್ದು ಭಕ್ತನಿಗೂ ಭಗವಂತನಿಗೂ ಬಿಟ್ಟ ವಿಚಾರ ಎಂದರು.

ಕಂದಾಯ ಸಚಿವ ಅಶೋಕ್ ಈ ವಿಚಾರದಲ್ಲಿ ತನಿಖೆ ಮಾಡುತ್ತೇವೆ, ವರದಿ ಬಂದ ನಂತರ ಕ್ರಮ ಕೈಗೊಳ್ಳುತ್ತೇವೆಂದು ಹೇಳಿದ್ದಾರೆ. ಅಲ್ಲಿನ ತಹಶೀಲ್ದಾರರನ್ನು ವರ್ಗಾವಣೆ ಮಾಡಿದ್ದಾರೆ. ಅವರು ಯಾರನ್ನು ಬೇಕಾದರೂ ಅಲ್ಲಿಗೆ ತಂದು ಕೂರಿಸಲು ಅದರ ಬಗ್ಗೆ ಚಿಂತಿಸಲು ನನಗೆ ಸಮಯವಿಲ್ಲ ಎಂದರು.

ಬಿಜೆಪಿ, ಆರೆಸ್ಸೆಸ್ ಎಂಬುದು ಬೇಡ. ರಾಜ್ಯದಲ್ಲಿ ಒಂದು ಸರಕಾರ ಇದೆ. ಈ ರಾಜ್ಯದಲ್ಲಿ ಎಷ್ಟು ಮಠಗಳು, ಮಸೀದಿಗಳು, ಚರ್ಚ್‌ಗಳು, ಗುರುದ್ವಾರ, ಬೌದ್ಧ ಹಾಗೂ ಜೈನಧರ್ಮದ ಸಂಘಗಳಿಗೆ ಯಾರು, ಯಾವ ಬೆಟ್ಟದಲ್ಲಿ ಯಾರಿಗೆ ಎಷ್ಟು ಜಾಗ ನೀಡಿದ್ದಾರೆಂದು ಪಟ್ಟಿ ತರಿಸಿಕೊಳ್ಳಲಿ. ನಂತರ ತಪ್ಪು ಮಾಡಿದವರಿಗೆ ಶಿಕ್ಷೆ ನೀಡಲಿ. ಈ ಶಿವಕುಮಾರ್ ತಪ್ಪುಮಾಡಿದ್ದರೆ ಶಿಕ್ಷೆಯಾಗಲಿ ಎಂದು ಸವಾಲು ಹಾಕಿದರು.

ಕ್ಷೇತ್ರದ ಜನರಲ್ಲಿ ಒಬ್ಬ ದೇವಸ್ಥಾನ ಕಟ್ಟಬೇಕೆಂದು ಬಂದರೆ, ಮತ್ತೊಬ್ಬ ಚರ್ಚ್ ಕಟ್ಟಬೇಕೆಂದು ಬರುತ್ತಾರೆ. ನನ್ನ ಕೈಲಾದ ಮಟ್ಟಿಗೆ ಇಟ್ಟಿಗೆಯನ್ನೋ, ಕಿಟಕಿಯನ್ನೋ, ಬಾಗಿಲನ್ನೋ ನೀಡುತ್ತೇನೆ. ಶಾಲೆ ಕಟ್ಟುತ್ತೇನೆಂದು ಬಂದರೆ ಅವರಿಗೆ ಕುರ್ಚಿ ಕೊಡಿಸೋದು ನಮ್ಮ ಕೆಲಸ ಎಂದು ಶಿವಕುಮಾರ್ ಹೇಳಿದರು.

ಈ ವಿಚಾರದಲ್ಲಿ ಪಕ್ಷದ ಯಾವ ನಾಯಕರೂ ಮಾತನಾಡುತ್ತಿಲ್ಲ ಎಂಬ ಪ್ರಶ್ನೆ ಬರುವುದಿಲ್ಲ. ಅವರು ಮಾತನಾಡುವ ಅಗತ್ಯ ಏನಿದೆ. ನನಗೆ ಧ್ವನಿ ಇಲ್ಲ ಅಥವಾ ನನಗೆ ಯಾವುದಾದರೂ ನಾಯಕರ ಬೆಂಬಲವಾಗಿ ನಿಂತು ಮಾತನಾಡಲಿ ಎಂದು ನಾನು ಕೇಳಿಲ್ಲ. ಈ ವಿಚಾರದಲ್ಲಿ ಗೊಂದಲ ಬೇಡ ಎಂದು ಸ್ಪಷ್ಟಣೆ ನೀಡಿದರು.

‘ನನಗೆ ಯಾವುದೇ ಕೊಡುಗೆ(ಗಿಫ್ಟ್) ಬೇಡ. ನನಗೆ ಯಾವುದೇ ಆತುರ ಇಲ್ಲ. ಯಾವುದೇ ಸ್ಥಾನ ನೀಡಿ ಎಂದು ನಾನು ಹೈಕಮಾಂಡ್ ಬಳಿ ಕೇಳುವುದಕ್ಕೆ ಹೋಗಿಲ್ಲ. ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಬೆಳಗ್ಗೆಯಿಂದ ಸಂಜೆವರೆಗೂ ಬರುವ ನೋಟಿಸ್‌ಗೆ ಉತ್ತರ ನೀಡಿಯೇ ನನಗೆ ಸಾಕಾಗಿದೆ’

-ಡಿ.ಕೆ.ಶಿವಕುಮಾರ್, ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News