ಡಿಸೆಂಬರ್‌ ನಲ್ಲಿ ಏಳು ತಿಂಗಳ ಅಧಿಕ ಮಟ್ಟಕ್ಕೇರಿದ ಕೈಗಾರಿಕಾ ಚಟುವಟಿಕೆ

Update: 2020-01-02 16:06 GMT

ಬೆಂಗಳೂರು,ಜ.2: ಭಾರತದ ಕೈಗಾರಿಕಾ ಚಟುವಟಿಕೆಯು ಡಿಸೆಂಬರ್‌ನಲ್ಲಿ ಕಳೆದ ಏಳು ತಿಂಗಳಲ್ಲಿಯೇ ಗರಿಷ್ಠ ಮಟ್ಟಕ್ಕೆ ಹೆಚ್ಚಿದ್ದು,ಹೊಸ ಬೇಡಿಕೆಗಳಲ್ಲಿ ಏರಿಕೆಯಿಂದಾಗಿ ಕಂಪನಿಗಳು ತಮ್ಮ ಉತ್ಪಾದನೆಗಳನ್ನು ಹೆಚ್ಚಿಸಿದ್ದು ಇದಕ್ಕೆ ಕಾರಣವಾಗಿದೆ ಎಂದು ಖಾಸಗಿ ಉದ್ಯಮ ಸಮೀಕ್ಷೆಯೊಂದು ಗುರುವಾರ ತನ್ನ ವರದಿಯಲ್ಲಿ ತಿಳಿಸಿದೆ.

ಆದರೆ ಇದೇ ವೇಳೆ ಕಂಪನಿಗಳು ಸವಾಲಾಗಿರುವ ಮಾರುಕಟ್ಟೆ ಸ್ಥಿತಿಯ ಕುರಿತು ಕಳವಳಗೊಂಡಿರುವುದರಿಂದ ಉದ್ಯಮ ಆಶಾವಾದವು ಮೂರು ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ ಎಂದು ಅದು ಹೇಳಿದೆ.

ಐಎಚ್‌ಎಸ್ ಮಾರ್ಕಿಟ್ ಸಂಕಲಿಸಿರುವ ನಿಕ್ಕೀ ಮ್ಯಾನ್ಯುಫ್ಯಾಕ್ಚರಿಂಗ್ ಪರ್ಚೇಸಿಂಗ್ ಮ್ಯಾನೇಜರ್ಸ್ ಇಂಡೆಕ್ಸ್ (ಪಿಎಂಐ) ನವಂಬರ್‌ನಲ್ಲಿ 51.2 ಇದ್ದುದು ಡಿಸೆಂಬರ್‌ನಲ್ಲಿ 52.7ಕ್ಕೆ ಜಿಗಿದಿದೆ. ಇದು ಮೇ ತಿಂಗಳಿನಿಂದೀಚಿಗೆ ಗರಿಷ್ಠ ಸಂಖ್ಯೆಯಾಗಿದೆ.

ಇತ್ತೀಚಿನ ಪಿಎಂಐ ಫಲಿತಾಂಶಗಳು ಸೂಚಿಸಿರುವ ಭಾರತೀಯ ತಯಾರಿಕಾ ಕ್ಷೇತ್ರದಲ್ಲಿಯ ಪ್ರಗತಿಯನ್ನು, ಅಕ್ಟೋಬರ್‌ನಲ್ಲಿಯ ಕಳವಳಕಾರಿ ಅಂಕಿಅಂಶಗಳ ಹಿನ್ನೆಲೆಯಲ್ಲಿ ನೀತಿ ನಿರ್ಮಾತೃಗಳು ಸ್ವಾಗತಿಸುತ್ತಾರೆ ಎಂದು ಐಎಚ್‌ಎಸ್ ಮಾರ್ಕಿಟ್‌ನ ಪ್ರಧಾನ ಆರ್ಥಿಕ ತಜ್ಞ ಪಿ.ಡಿ ಲಿಮಾ ಹೇಳಿದ್ದಾರೆ.

ಬೇಡಿಕೆಗಳಲ್ಲಿ ಏರಿಕೆಯು ಫ್ಯಾಕ್ಟರಿಗಳಿಗೆ ಲಾಭದಾಯಕವಾಗಿದೆ. ಬೇಡಿಕೆಗೆ ಸ್ಪಂದಿಸಿ ಅವು ತಮ್ಮ ಉತ್ಪಾದನೆಯನ್ನು ಹೆಚ್ಚಿಸಿದ್ದು, ಮೇ ತಿಂಗಳಿನ ಬಳಿಕ ಡಿಸೆಂಬರ್‌ನಲ್ಲಿ ಉತ್ಪಾದನಾ ಚಟುವಟಿಕೆಗಳು ಗರಿಷ್ಠಗೊಂಡಿವೆ ಎಂದೂ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News