‘ರಕ್ತ ಬೇಕಾದರೆ ಕೊಡುತ್ತೇವೆ, ಎನ್‌ಆರ್‌ಸಿ, ಸಿಎಎ, ಎನ್‌ಪಿಆರ್‌ಗೆ ದಾಖಲೆ ಕೊಡುವುದಿಲ್ಲ’

Update: 2020-01-02 16:42 GMT

ಬೆಂಗಳೂರು, ಜ.2: ಕೇಂದ್ರ ಸರಕಾರಕ್ಕೆ ಬಿಸಿ ಮುಟ್ಟಿಸಲು ‘ರಕ್ತ ಬೇಕಾದರೆ ಕೊಡುತ್ತೇವೆ, ಎನ್‌ಆರ್‌ಸಿ, ಸಿಎಎ ಹಾಗೂ ಎನ್‌ಪಿಆರ್‌ಗೆ ದಾಖಲೆಗಳನ್ನು ಕೊಡುವುದಿಲ್ಲ’ ಎಂಬ ಘೋಷ ವಾಕ್ಯದಡಿಯಲ್ಲಿ ಜ.5ರಂದು ಸಾವಿರಾರು ಮಂದಿ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡುವ ಮೂಲಕ ಪ್ರತಿಭಟನೆ ನಡೆಸಲಿದ್ದಾರೆ ಎಂದು ಬೆಂಗಳೂರು ಯೂತ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಮಾಸ್ತಿ ಝಾಕಿರ್ ಅಲಿ ಖಾನ್ ತಿಳಿಸಿದರು.

ಗುರುವಾರ ನಗರದ ಗುರಪ್ಪನಪಾಳ್ಯದಲ್ಲಿರುವ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬನ್ನೇರುಘಟ್ಟ ರಸ್ತೆಯಲ್ಲಿರುವ ಜಲಭವನದ ಸಮೀಪ ಜ.5ರಂದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಈ ರಕ್ತದಾನ ಶಿಬಿರ ನಡೆಯಲಿದ್ದು, ಸುಮಾರು 2500-3000 ಮಂದಿ ರಕ್ತದಾನ ಮಾಡುವ ನೀರಿಕ್ಷೆಯಿದೆ ಎಂದರು.

ದೇಶದಲ್ಲಿ ಉದ್ಯೋಗ, ಶಿಕ್ಷಣ ಸೇರಿದಂತೆ ಎಲ್ಲ ರಂಗಗಳಲ್ಲಿ ಅಲ್ಪಸಂಖ್ಯಾತರು ಕಿರುಕುಳ ಅನುಭವಿಸುವಂತಾಗಿದೆ. ಬಲಿಷ್ಠವಾಗಿದ್ದ ನಮ್ಮ ದೇಶದ ಆರ್ಥಿಕ ಸ್ಥಿತಿ ಹೀನಾಯ ಹಂತಕ್ಕೆ ಬಂದು ತಲುಪಿದೆ. ಇಂತಹ ಸಂದರ್ಭದಲ್ಲಿ ಲಕ್ಷಾಂತರ ಕೋಟಿ ರೂ.ಗಳನ್ನು ಖರ್ಚು ಮಾಡಿ ಇಡೀ ದೇಶದಲ್ಲಿ ಎನ್‌ಆರ್‌ಸಿ, ಸಿಎಎ, ಎನ್‌ಪಿಆರ್ ಜಾರಿಗೆ ತರುವ ಅಗತ್ಯವಿದೆಯೇ ಎಂದು ಅವರು ಪ್ರಶ್ನಿಸಿದರು.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಪ್ರತಿದಿನ ಒಂದಲ್ಲ ಒಂದು ಕಾರಣದಿಂದ ದೇಶದಲ್ಲಿ ಜಾತಿ ಆಧಾರಿತ ರಾಜಕಾರಣಕ್ಕೆ ಕುಮ್ಮಕ್ಕು ಸಿಕ್ಕಿದೆ. ಸ್ವಾತಂತ್ರ ನಂತರ ಈ ಹಿಂದೆ ಎಂದಿಗೂ ಇಂತಹ ಪರಿಸ್ಥಿತಿಯನ್ನು ನಾವು ನೋಡಿರಲಿಲ್ಲ ಎಂದು ಝಾಕಿರ್ ಅಲಿ ಖಾನ್ ಹೇಳಿದರು.

ಜಮೀಯತ್ ಉಲೇಮಾ ಬೆಂಗಳೂರು ದಕ್ಷಿಣ ವಿಭಾಗದ ಕಾರ್ಯದರ್ಶಿ ಫಾಝಿಲ್ ಅಹ್ಮದ್ ಮಾತನಾಡಿ, ಬೆಂಗಳೂರು ಯೂತ್ ವೆಲ್ಫೇರ್ ಟ್ರಸ್ಟ್ ಹಾಗೂ ಜಮೀಯತ್ ಉಲೇಮಾ ವತಿಯಿಂದ ಈ ವಿನೂತನ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಬೆಂಗಳೂರು ರೋಟರಿ ಕ್ಲಬ್, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ, ರೆಡ್‌ಕ್ರಾಸ್ ಸಂಸ್ಥೆಗಳು ರಕ್ತದಾನ ಶಿಬಿರಕ್ಕೆ ಸಹಕಾರ ನೀಡಲಿವೆ ಎಂದರು.

ರಕ್ತದಾನ ಶಿಬಿರ ಹಾಗೂ ಪ್ರತಿಭಟನೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 98456 49052, 90665 42101, 9902937818ಗೆ ಸಂಪರ್ಕಿಸಬಹುದು ಎಂದು ಫಾಝಿಲ್ ಅಹ್ಮದ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಾಮಾಜಿಕ ಕಾರ್ಯಕರ್ತ ಆಸಿಫ್ ಶರೀಫ್, ವೌಲಾನ ಅಬ್ದುಲ್ ರಶೀದ್, ವೌಲಾನ ಸಲಾಹುದ್ದೀನ್, ಹಾಫಿಝ್ ಫಾರೂಕ್, ಎಂ.ಜಿ.ಅಫ್ಸರ್ ಖಾನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News