ಸೂಪರ್ ಫಾಸ್ಟ್ ಸರ್ಚ್ ಚಾರ್ಜ್ ಸಂಗ್ರಹಣೆ: ರೈಲ್ವೆ ಇಲಾಖೆಗೆ ಹೈಕೋರ್ಟ್ ನೋಟಿಸ್
ಬೆಂಗಳೂರು, ಜ.2: ಯಲಹಂಕ-ಮೈಸೂರು ನಡುವೆ ಸಂಚರಿಸುವ ಮಾಲ್ಗುಡಿ ಎಕ್ಸ್‌ಪ್ರೆಸ್ ರೈಲು ಪ್ರಯಾಣದ ವೇಳೆ ಪ್ರಯಾಣಿಕರಿಂದ ಕಾನೂನು ಬಾಹಿರವಾಗಿ ಸೂಪರ್ ಫಾಸ್ಟ್ ಸರ್ಚ್ ಚಾರ್ಜ್ ಸಂಗ್ರಹಣೆ ಮಾಡುತ್ತಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ರೈಲ್ವೇ ಇಲಾಖೆ ಹಾಗೂ ಇತರೆ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿದೆ. ಈ ಕುರಿತು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ, ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿತು.
ಇನ್ನು ಅರ್ಜಿ ವಿಚಾರಣೆ ವೇಳೆ ಅರ್ಜಿದಾರರು ವಾದ ಮಾಡಿ, ರೈಲ್ವೇ ಇಲಾಖೆ ಸುತ್ತೋಲೆ ಅನ್ವಯ ಸೂಪರ್ ಫಾಸ್ಟ್ ರೈಲು ಗಂಟೆಗೆ 55 ಕಿ.ಮೀ ಪ್ರಯಾಣಿಸಬೇಕು, ಆದರೆ ರೈಲ್ವೇ ಇಲಾಖೆ ನೀಡಿರುವ ಮಾಹಿತಿ ಅನ್ವಯ 45 ಕಿ.ಮೀ ಮಾತ್ರ ಮಾಲ್ಗುಡಿ ಎಕ್ಸ್‌ಪ್ರೆಸ್ ರೈಲು ಸಂಚರಿಸಿ ರೈಲಿನ ಪ್ರಯಾಣಿಕರಿಂದ ಸೂಪರ್ ಫಾಸ್ಟ್ ಸರ್ಚ್‌ಚಾರ್ಜ್ ಅನ್ನು ಸಂಗ್ರಹಿಸುತ್ತಿದ್ದಾರೆ. ಇದು ಕಾನೂನು ಬಾಹಿರವಾಗಿದೆ. ಹೀಗಾಗಿ, ಸೂಪರ್ ಫಾಸ್ಟ್ ಸರ್ಚ್ ಚಾರ್ಜ್ ಅನ್ನು ಸಂಗ್ರಹಿಸದಂತೆ ರೈಲ್ವೇ ಇಲಾಖೆಗೆ ನಿರ್ದೇಶಿಸಬೇಕು ಎಂದು ಮನವಿ ಮಾಡಿದರು.
ಇನ್ನು ಅರ್ಜಿದಾರರ ವಾದ ಆಲಿಸಿದ ನ್ಯಾಯಾಲಯ ರೈಲ್ವೇ ಇಲಾಖೆ ಹಾಗೂ ಇತರೆ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿ ಆಕ್ಷೇಪಣೆ ಸಲ್ಲಿಕೆ ಮಾಡುವಂತೆ ಸೂಚಿಸಿ ವಿಚಾರಣೆ ಮುಂದೂಡಿಕೆ ಮಾಡಿದೆ.