×
Ad

ಹೈಕೋರ್ಟ್‌ನಲ್ಲಿ ಕನ್ನಡ ಬಳಕೆಗೆ ಕೇಂದ್ರಕ್ಕೆ ಒತ್ತಾಯ: ಟಿ.ಎಸ್.ನಾಗಾಭರಣ

Update: 2020-01-02 23:00 IST

ಬೆಂಗಳೂರು, ಜ.2: ರಾಜ್ಯ ಹೈಕೋರ್ಟ್‌ನ ಕಲಾಪಗಳಲ್ಲಿ ಕನ್ನಡ ಬಳಸಲು ಅನುಮತಿ ನೀಡಬೇಕೆಂದು ಕೇಂದ್ರ ಸರಕಾರದ ಮೇಲೆ ಒತ್ತಡ ತರಲಾಗುವುದು ಮತ್ತು ರಾಜ್ಯದ ಎಲ್ಲ ಸಂಸದರ ಜೊತೆ ಈ ಕುರಿತಂತೆ ಚರ್ಚಿಸಲಾಗುವುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಹೇಳಿದ್ದಾರೆ. 

ಗುರುವಾರ ಹೈಕೋರ್ಟ್‌ನಲ್ಲಿ ಕನ್ನಡ ಬಳಕೆಗೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುವಂತೆ ಆಗ್ರಹಿಸಿ ಬೆಂಗಳೂರು ನಗರದ ವಕೀಲರ ವೃಂದ ನಾಗಾಭರಣ ಅವರನ್ನು ವಿಧಾನಸೌಧದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿತು.

ವಕೀಲ ಕೆ.ಬಿ.ಕೆ ಸ್ವಾಮಿ ಮಾತನಾಡಿ, ಈಗಾಗಲೇ ಮಧ್ಯಪ್ರದೇಶ, ರಾಜಸ್ಥಾನ, ಉತ್ತರಾಖಂಡ ಮತ್ತು ಬಿಹಾರ್ ರಾಜ್ಯಗಳಲ್ಲಿ ಇಂಗ್ಲಿಷ್ ಮತ್ತು ಹಿಂದಿ ಭಾಷೆಯನ್ನು ಹೈಕೋರ್ಟ್‌ನಲ್ಲಿ ಅಧಿಕೃತವಾಗಿ ಬಳಸಲಾಗುತ್ತಿದೆ. ಇದಕ್ಕೆ ಸಂವಿಧಾನದ 348 (2)ನೇ ವಿಧಿ ಅನುವು ಮಾಡಿಕೊಟ್ಟಿದೆ. ಇದೇ ಮಾದರಿಯನ್ನು ರಾಜ್ಯ ಹೈಕೋರ್ಟ್‌ನಲ್ಲೂ ಅನುಸರಿಸಲು ಮುಖ್ಯಮಂತ್ರಿಗಳಿಗೆ ಕೋರಬೇಕು ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನಾಗಾಭರಣ, ನಿಮ್ಮ ಈ ಪ್ರಯತ್ನ ಅಭಿಯಾನದ ಸ್ವರೂಪ ಪಡೆದುಕೊಳ್ಳಲಿ. ಪ್ರಾಧಿಕಾರ ಸದಾ ನಿಮ್ಮಾಂದಿಗೆ ಇರುತ್ತದೆ. ಅಂತೆಯೇ ಈಗ ಸುಪ್ರೀಂ ಕೋರ್ಟ್‌ನಲ್ಲಿ ಮೂವರು ಕರ್ನಾಟಕದ ನ್ಯಾಯಮೂರ್ತಿಗಳಿದ್ದು ಅವರಿಗೂ ಔಪಚಾರಿಕವಾಗಿ ಮನವಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು. ಪ್ರಾಧಿಕಾರದ ಕಾರ್ಯದರ್ಶಿ ಕೆ.ಮುರಳೀಧರ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News