ಪರಿಸರ ಸಂರಕ್ಷಣೆಗೆ ಎಲ್ಲರೂ ಮುಂದಾಗಬೇಕು: ಆರ್.ವಿ.ದೇಶಪಾಂಡೆ

Update: 2020-01-02 17:36 GMT

ಬೆಂಗಳೂರು, ಜ.2: ಸ್ವಚ್ಛತಾ ಆಂದೋಲನದಲ್ಲಿ ಪ್ರತಿಯೊಬ್ಬರೂ ಭಾಗವಹಿಸಿದಾಗ ಸ್ವಚ್ಛತೆಯೊಂದಿಗೆ ಪರಿಸರ ಪ್ರೇಮ, ಆರೋಗ್ಯ ಉತ್ತಮ ಪರಿಸರವೂ ನಿರ್ಮಿಸಲು ಸಾಧ್ಯವಾಗುವುದರಿಂದ ಪರಿಸರ ಸಂರಕ್ಷಣೆಗೆ ಎಲ್ಲರೂ ಮುಂದಾಗಬೇಕೆಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.

ಗುರುವಾರ ದೊಡ್ಡಬಳ್ಳಾಪುರ ತಾಲೂಕಿನಲ್ಲಿರುವ ಡಾ.ಅನಿಬೆಸೆಂಟ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ತರಬೇತಿ ಮತ್ತು ಶಿಬಿರ ಕೇಂದ್ರದಲ್ಲಿ 28ನೆ ರಾಜ್ಯ ಸ್ಕೌಟ್ಸ್ ಜಾಂಬೋರೇಟ್ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ವಿದ್ಯಾರ್ಥಿಗಳಿಗೆ ಶಿಸ್ತು, ಸಮಯಪಾಲನೆ, ಸಂಯಮ, ಜಾತ್ಯತೀತ ಮತ್ತು ಸೇವಾ ಮನೋಭಾವವನ್ನು ಮೂಡಿಸುವುದು ಅಗತ್ಯವಿರುವುದರಿಂದ ಕಾಲೇಜು ಮಟ್ಟದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಅನ್ನು ಕಡ್ಡಾಯಗೊಳಿಸಬೇಕು ಹಾಗೂ ಸರಕಾರವು ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಗೆ ಮತ್ತಷ್ಟು ಉತ್ತೇಜನ ನೀಡಬೇಕು ಎಂದು ಅವರು ಹೇಳಿದರು.

ಮಾಜಿ ಸಚಿವ ಯು.ಟಿ.ಖಾದರ್ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ಶಿಬಿರಗಳು ಮಕ್ಕಳಲ್ಲಿ ನಾಯಕತ್ವದ ಗುಣವನ್ನು ಬೆಳೆಸುತ್ತದೆ. ಜಾಂಬೋರೇಟ್ ಕೇಂದ್ರದಿಂದ ನಿರ್ಗಮಿಸಿದ ನಂತರ ಶಿಬಿರಾರ್ಥಿಗಳು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಮಾಜಕ್ಕೆ ಕೊಡುಗೆ ನೀಡುವಂತಾಗಲಿ ಎಂದು ಆಶಿಸಿದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜ್ಯದ ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಜ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ, 28ನೆ ರಾಜ್ಯ ಜಾಂಬೋರೇಟ್ ಕಾರ್ಯಕ್ರಮ ಯಶಸ್ವಿಯಾಗಿದ್ದು, ವಿದ್ಯಾರ್ಥಿಗಳಲ್ಲಿ ಕುಶಲತೆ, ಶಿಸ್ತು, ದೇಶಪ್ರೇಮ, ಆತ್ಮಸ್ಥೈರ್ಯ ಬೆಳೆಸಲು ಸ್ಕೌಟ್ಸ್ ಗೈಡ್ಸ್‌ನ ಶಿಕ್ಷಕರು ಮೊದಲು ಗುಣಮಟ್ಟದ ತರಬೇತಿ ಹೊಂದುವುದು ಅಗತ್ಯವಾಗಿದೆ ಎಂದರು.

ಮುಂದಿನ ದಿನಗಳಲ್ಲಿ ವಿಶ್ವವಿದ್ಯಾಲಯ ಮಟ್ಟದಲ್ಲಿ ರೋವರ್ಸ್ ಮತ್ತು ರೇಂಜರ್ಸ್‌ಗಳನ್ನು ಕಡ್ಡಾಯಗೊಳಿಸುವ ಚಿಂತನೆ ನಡೆಸಲಾಗಿದೆ ಎಂದು ಪಿ.ಜಿ.ಆರ್.ಸಿಂಧ್ಯಾ ತಿಳಿಸಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಹೊಸದಿಲ್ಲಿಯ ರಾಷ್ಟ್ರೀಯ ಆಯುಕ್ತ ಎಂ.ಎ.ಖಾಲಿದ್ ಸಮಾರೋಪ ಭಾಷಣ ಮಾಡಿದರು. ರಾಜ್ಯ ಕಾರ್ಯದರ್ಶಿ ಕೆ.ಗಂಗಪ್ಪಗೌಡ ಸ್ವಾಗತಿಸಿದರು. ರಾಜ್ಯ ಕಾರ್ಯದರ್ಶಿ ಷಣ್ಮುಖಪ್ಪ ಬಿ.ಕೊಂಡಜ್ಜಿ, ರಾಜ್ಯ ತರಬೇತಿ ಆಯುಕ್ತೆ ಕೆ.ವಿ.ಶ್ಯಾಮಲಾ, ರಾಜ್ಯ ಆಯುಕ್ತೆ ಗೀತಾ ನಟರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News