×
Ad

ಖಾಸಗಿ ಕಾಲೇಜುಗಳಲ್ಲಿ ದುಬಾರಿ ಶುಲ್ಕ: 4 ತಿಂಗಳಲ್ಲಿ ಕ್ರಮ ಕೈಗೊಳ್ಳಲು ಸರಕಾರಕ್ಕೆ ಹೈಕೋರ್ಟ್ ಆದೇಶ

Update: 2020-01-03 22:29 IST

ಬೆಂಗಳೂರು, ಜ.3: ರಾಜ್ಯದಲ್ಲಿ ಖಾಸಗಿ ಪಿಯು ಕಾಲೇಜುಗಳು ಮನಬಂದಂತೆ ಪ್ರವೇಶ ಶುಲ್ಕ ನಿಗದಿಪಡಿಸಿ ಹಗಲು ದರೋಡೆ ನಡೆಸುತ್ತಿವೆ ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಅರ್ಜಿದಾರರ ಅರ್ಜಿಯನ್ನು ಮನವಿ ಎಂದು ಪರಿಗಣಿಸಿ ನಾಲ್ಕು ತಿಂಗಳಲ್ಲಿ ಕ್ರಮ ಕೈಗೊಳ್ಳಲು ಹೈಕೋರ್ಟ್ ರಾಜ್ಯ ಸರಕಾರಕ್ಕೆ ಆದೇಶಿಸಿದೆ.

ಈ ಕುರಿತು ವಕೀಲ ಎನ್.ಪಿ.ಅಮೃತೇಶ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಹಾಗೂ ನ್ಯಾಯಮೂರ್ತಿ ಹೇಮಂತ ಚಂದನಗೌಡರ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಅರ್ಜಿದಾರರ ಅರ್ಜಿಯನ್ನು ಮನವಿ ಎಂದು ಪರಿಗಣಿಸಿ ಕ್ರಮ ಕೈಗೊಳ್ಳಲು ಆದೇಶಿಸಿದೆ.

ಎಸೆಸೆಲ್ಸಿ ಫಲಿತಾಂಶ ಪ್ರಕಟಗೊಂಡ ಬಳಿಕ ರಾಜ್ಯದಲ್ಲಿ ಪಿಯುಸಿ ಕೋರ್ಸ್‌ಗಳ ಪ್ರವೇಶಗಳು ಪ್ರಾರಂಭವಾಗಿವೆ. ಸರಕಾರಿ ಹಾಗೂ ಖಾಸಗಿ ಅನುದಾನಿತ ಪಿಯು ಕಾಲೇಜುಗಳಿಗೆ ಸರಕಾರ ಶುಲ್ಕ ನಿಗದಿಪಡಿಸಿದೆ. ಆದರೆ, ಖಾಸಗಿ ಪಿಯು ಕಾಲೇಜುಗಳಿಗೆ ಮಾತ್ರ ಶುಲ್ಕ ನಿಗದಿಪಡಿಸಿಲ್ಲ. ಇದರ ಅನುಕೂಲ ಪಡೆದಿರುವ ಖಾಸಗಿ ಪಿಯು ಕಾಲೇಜುಗಳು ಪೋಷಕರಿಂದ ದುಬಾರಿ ಶುಲ್ಕ ದೋಚುತ್ತಿದ್ದಾರೆ ಎಂದು ಅರ್ಜಿದಾರರು ದೂರಿದ್ದರು.

ಖಾಸಗಿ ಪಿಯು ಕಾಲೇಜುಗಳು ಕಟ್ ಆಫ್ ಮಾರ್ಕ್ಸ್ ನಿಗದಿಪಡಿಸಲು ಕಾನೂನಿನಲ್ಲಿ ಅವಕಾಶ ಇಲ್ಲ. ಆದರೂ ಖಾಸಗಿ ಕಾಲೇಜುಗಳು ಪ್ರವೇಶಕ್ಕೆ ಶೇ.90 ಕಟ್ ಆಫ್ ಮಾರ್ಕ್ಸ್ ಎಂಬ ಸ್ವಯಂ ಮಾನದಂಡ ನಿಗದಿಪಡಿಸಿಕೊಂಡಿವೆ. ಕಡಿಮೆ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲು ದೊಡ್ಡ ಮೊತ್ತದ ಶುಲ್ಕ ಕೇಳುತ್ತಿವೆ. ಇದರಿಂದ ಪೋಷಕರಿಗೆ ಹೊರೆಯಾಗುತ್ತಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳು ಪರಸ್ಪರ ಸೇರಿ ಶುಲ್ಕ ನಿಗದಿಪಡಿಸಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ವಕೀಲರ ವಾದ ಆಲಿಸಿದ ನ್ಯಾಯಪೀಠವು ಅರ್ಜಿದಾರರ ಅರ್ಜಿಯನ್ನ ಮನವಿ ಎಂದು ಪರಿಗಣಿಸಿ ಕ್ರಮ ಕೈಗೊಳ್ಳಲು ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News