ಸಿಬಿಎಸ್‌ಇ ಶಿಕ್ಷಕರಿಗೆ ಕನ್ನಡ ಕಲಿಕೆ ಕಾರ್ಯಾಗಾರ: ಸಚಿವ ಸುರೇಶ್‌ ಕುಮಾರ್

Update: 2020-01-03 17:07 GMT

ಬೆಂಗಳೂರು, ಜ.3: ರಾಜ್ಯ ವ್ಯಾಪ್ತಿಯ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್(ಸಿಬಿಎಸ್‌ಇ) ಶಾಲೆಗಳಲ್ಲಿನ ಶಿಕ್ಷಕರಿಗೆ ಕನ್ನಡ ಕಲಿಕೆ ಕಾರ್ಯಾಗಾರ ಏರ್ಪಡಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.

ಶುಕ್ರವಾರ ನಗರದ ಕಬ್ಬನ್ ಪಾರ್ಕಿನ ಎನ್‌ಜಿಒ ಸಭಾಂಗಣದಲ್ಲಿ ದಲಿತ ಸಂಘರ್ಷ ಸಮಿತಿ(ಸಮತಾವಾದ) ಆಯೋಜಿಸಿದ್ದ, ದೇಶದ ಪ್ರಪ್ರಥಮ ಶಿಕ್ಷಕಿ ಸಾವಿತ್ರಿ ಬಾಫುಲೆ ಅವರ 186ನೇ ಜನ್ಮ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರಿಗೆ ಆಯೋಜಿಸಿರುವ ಈ ಕಾರ್ಯಾಗಾರದಿಂದ ಕನ್ನಡ ಕಲಿಕೆ ಪ್ರಕ್ರಿಯೆ ಹೆಚ್ಚಾಗಲಿದೆ ಎಂದು ತಿಳಿಸಿದರು.

ಸರಕಾರಿ ಶಾಲೆಗಳಲ್ಲಿ ಸಾವಿತ್ರಿ ಬಾಫುಲೆ ಜನ್ಮದಿನ ಕಾರ್ಯಕ್ರಮ ಆಯೋಜನೆ ಆತ್ಮತೃಪ್ತಿ ಕೊಟ್ಟಿದೆ ಎಂದ ಅವರು, ರಾಜ್ಯದಾದ್ಯಂತ ಅವರ ಜನ್ಮ ದಿನಾಚರಣೆ ಆಚರಣೆ ಮಾಡಲಾಗುತ್ತಿದ್ದು, ಈ ಕುರಿತು ಎಲ್ಲ ಶಾಲೆಗಳಲ್ಲೂ ಜಯಂತಿ ಆಚರಣೆಗೆ ಸರಕಾರ ಸುತ್ತೋಲೆಯನ್ನು ಹೊರಡಿಸಿದೆ ಎಂದು ನುಡಿದರು.

ಸಾವಿತ್ರಿ ಬಾಫುಲೆ ಅವರ ಆದರ್ಶ ಎಲ್ಲರಿಗೂ ಮಾದರಿಯಾಗಿದೆ. ಅವರಂತೆಯೇ ಎಲ್ಲರೂ ದೀನ ದಲಿತರಿಗೆ ಶಿಕ್ಷಣ ನೀಡುವಲ್ಲಿ ಶ್ರಮಿಸಬೇಕು. ಸಾವಿತ್ರಿ ಬಾಫುಲೆ ಅವರು ಶಿಕ್ಷಕಿಯಾಗಿ ಸಾಕಷ್ಟು ಅವಮಾನಗಳನ್ನು ಎದುರಿಸಿದರು. ಹೀಗಾಗಿ, ಅವರನ್ನು ಅಗ್ರಗಣ್ಯ ವ್ಯಕ್ತಿಗಳ ಸಾಲಿನಲ್ಲಿ ಕಾಣಬೇಕು ಎಂದರು.

ದಸಂಸ(ಸಮತಾವಾದ) ಅಧ್ಯಕ್ಷ ಎಚ್.ಮಾರಪ್ಪ ಮಾತನಾಡಿ, ದಲಿತ ಕುಟುಂಬಕ್ಕೆ ಸೇರಿದ ಸಾವಿತ್ರಿ ಬಾಫುಲೆ ಅವರಿಗೆ ಅನೇಕರು ಕಿರುಕುಳ ನೀಡಿದರೂ ಎದೆಗುಂದದೆ ಒಂದು ಶಾಲೆಯನ್ನು ತೆರೆದು ದಲಿತ ಹಿಂದುಳಿದವರಿಗೆ ಶಿಕ್ಷಣ ನೀಡುವಂತಹ ಕಾರ್ಯ ಮಾಡಿದ್ದಾರೆ. ಇಂತಹ ಆದರ್ಶಗಳನ್ನಿಟ್ಟುಕೊಂಡು, ಮಹಿಳೆಯರನ್ನು ಮುಖ್ಯ ವಾಹಿನಿಗೆ ತರುವಂತಹ ಕೆಲಸ ಮಾಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ರೇವಣಸಿದ್ಧೇಶ್ವರ ಮಹಾಮಠದ ಪೀಠಾಧ್ಯಕ್ಷ ಡಾ.ಬಸವರಾಜ ದೇವರು, ನ್ಯಾಯವಾದಿ ಸಿ.ಜಗದೀಶ್, ದಸಂಸ ಮುಖಂಡರು ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News