ದಿಢೀರ್ ಹೃದಯ ಬಡಿತಕ್ಕೆ ಕಾರಣವೇನು ಗೊತ್ತಾ?

Update: 2020-01-03 17:54 GMT

ಹೃದಯ ಬಡಿತ ದಿಢೀರ್‌ನೆ ಹೆಚ್ಚುವುದು ಟ್ಯಾಕಿಕಾರ್ಡಿಯಾ ಅಥವಾ ಹೃದಯಸ್ಪಂದನಾಧಿಕ್ಯ ಸಮಸ್ಯೆಯ ಲಕ್ಷಣವಾಗಿದೆ. ಕೆಲವೊಮ್ಮೆ ಹೃದಯ ಬಡಿತ ಹೆಚ್ಚಾಗುವುದು ಸಾಮಾನ್ಯವಾಗಿದೆ. ಭೀತಿ ಹುಟ್ಟಿಸುವ ಏನನ್ನಾದರೂ ಅಥವಾ ಭೀಕರ ಅಪಘಾತವನ್ನು ನೋಡಿದಾಗ,ಅನಿರೀಕ್ಷಿತವಾಗಿ ಏನಾದರೂ ಅಹಿತಕರವಾದುದು ಸಂಭವಿಸಿದಾಗ ಹೃದಯ ಬಡಿತ ಹೆಚ್ಚುವುದು ಸಹಜವಾಗಿದೆ. ಆದರೆ ಇಂತಹ ಯಾವುದೇ ಕಾರಣವಿಲ್ಲದೆ ಹೃದಯ ಬಡಿತ ಏರಿಕೆಯ ಅನುಭವ ಆಗಾಗ್ಗೆ ಆಗುತ್ತಿದ್ದರೆ ಅದು ಗಂಭೀರ ಹೃದಯ ಕಾಯಿಲೆಯ ಸಂಕೇತವಾಗಬಹುದು.

ಮದ್ಯ ಹಾಗೂ ಸಿಗರೇಟ್,ಗುಟ್ಕಾದಂತಹ ತಂಬಾಕು ಉತ್ಪನ್ನಗಳ ಚಟವನ್ನು ಹೊಂದಿರುವವರು ಇತರರಿಗೆ ಹೋಲಿಸಿದರೆ ಟ್ಯಾಕಿಕಾರ್ಡಿಯಾಕ್ಕೆ ಗುರಿಯಾಗುವ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ಅಲ್ಲದೆ ಚಹಾ ಮತ್ತು ಕಾಫಿಯ ಗೀಳು ಹೊಂದಿದವರನ್ನೂ ಹೆಚ್ಚಿನ ಹೃದಯ ಬಡಿತದ ಸಮಸ್ಯೆ ಕಾಡುತ್ತದೆ. ಆದರೆ ಕೆಲವೊಮ್ಮೆ ದಿಢೀರ್ ಹೃದಯ ಬಡಿತ ಏರಿಕೆಯು ಗಂಭೀರ ಅನಾರೋಗ್ಯ ಅಥವಾ ಹೃದಯಾಘಾತದ ಪೂರ್ವ ಲಕ್ಷಣವಾಗಿರಬಹುದು. ಹೀಗಾಗಿ ಈ ಬಗ್ಗೆ ಕಾಳಜಿ ಹೊಂದಿರುವುದು ಅಗತ್ಯವಾಗಿದೆ.

► ಹೆಚ್ಚಿನ ಹೃದಯ ಬಡಿತ ದರವೇಕೆ ಅಪಾಯಕಾರಿ ಲಕ್ಷಣ?

ಟ್ಯಾಕಿಕಾರ್ಡಿಯಾ ಅಥವಾ ಅನಿಯಮಿತ ಹೃದಯ ಬಡಿತವು ಅನಾರೋಗ್ಯಕರ ಹೃದಯದ ಸಂಕೇತವಾಗಬಲ್ಲದು ಮತ್ತು ಅಂತಹ ವ್ಯಕ್ತಿ ಶೀಘ್ರವೇ ಹೃದಯ ವೈಫಲ್ಯ ಅಥವಾ ಹೃದಯಾಘಾತಕ್ಕೆ ಗುರಿಯಾಗಬಹುದು.

ಒತ್ತಡ ಅಥವಾ ಆತಂಕ,ರಕ್ತಹೀನತೆ,ಥೈರಾಯ್ಡ್  ಕಾಯಿಲೆ,ರಕ್ತದಲ್ಲಿ ಸಕ್ಕರೆ ಮಟ್ಟ ಕುಸಿತ, ಶರೀರದಲ್ಲಿ ಎಲೆಕ್ಟ್ರೋಲೈಟ್‌ಗಳ ಕೊರತೆ ಇವುಗಳೆಲ್ಲ ಹೃದಯ ಬಡಿತವನ್ನು ಹೆಚ್ಚಿಸುತ್ತವೆ.

ಟ್ಯಾಕಿಕಾರ್ಡಿಯಾಕ್ಕೆ ಮನೆಯಲ್ಲಿಯೇ ಕೆಲವು ಸರಳ ಕ್ರಮಗಳ ಮೂಲಕ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.

► ನಿಧಾನ,ಆಳವಾದ ಉಸಿರಾಟ

ಒತ್ತಡ ಅಥವಾ ಆತಂಕದಿಂದಾಗಿ ಹೃದಯ ಬಡಿತ ದಿಢೀರ್‌ನೆ ಹೆಚ್ಚಾಗಿದ್ದರೆ ಕುಳಿತುಕೊಂಡು ಅಥವಾ ನಿಂತುಕೊಂಡು ಆಳವಾಗಿ ಮತ್ತು ನಿಧಾನವಾಗಿ ಉಸಿರಾಡಿಸುವುದು ಮೊದಲು ಮಾಡಬೇಕಾದ ಕೆಲಸವಾಗಿದೆ. ಇದು ಹೃದಯ ಮತ್ತು ಮಿದುಳಿಗೆ ಆಮ್ಲಜನಕದ ಪೂರೈಕೆಯನ್ನು ಹೆಚ್ಚಿಸುತ್ತದೆ. ಈ ಪ್ರಕ್ರಿಯೆ ಸಂದರ್ಭ ಮೂಗಿನಿಂದ ಉಸಿರನ್ನು ಒಳಗೆಳೆದುಕೊಳ್ಳಬೇಕು ಮತ್ತು ಅದು ನಮ್ಮ ಉದರ ಭಾಗವನ್ನು ತಲುಪಬೇಕು,ಎರಡು ಸೆಕೆಂಡ್‌ಗಳ ಬಳಿಕ ಉಸಿರನ್ನು ಹೊರಬಿಡಬೇಕು. 4-5 ಸಲ ಹೀಗೆ ಮಾಡಿದರೆ ಹೃದಯ ಬಡಿತವು ಸಹಜ ಸ್ಥಿತಿಗೆ ಮರಳುತ್ತದೆ.

ಕೆಮ್ಮುವುದು

ನಿಮ್ಮ ಹೃದಯ ಬಡಿತ ದಿಢೀರ್‌ನೆ ಹೆಚ್ಚಾಗಿದ್ದರೆ ಕೆಮ್ಮು ಬರದಿದ್ದರೂ ಕೆಲವು ಸೆಕೆಂಡ್‌ಗಳವರೆಗೆ ವೇಗವಾಗಿ ಕೆಮ್ಮಲು ಪ್ರಯತ್ನಿಸಿ. ಹೀಗೆ ಕೆಮ್ಮಿದಾಗ ಎದೆಯ ಮೇಲೆ ಒತ್ತಡ ಬೀಳುತ್ತದೆ ಮತ್ತು ಇದರಿಂದಾಗಿ ಹೃದಯ ಬಡಿತ ತನ್ನಿಂತಾನೇ ಕಡಿಮೆಯಾಗುತ್ತದೆ.

► ತಣ್ಣೀರಿನ ಸೇವನೆ

ನಿಮ್ಮ ಹೃದಯವು ಮಾಮೂಲಿಗಿಂತ ವೇಗವಾಗಿ ಬಡಿದುಕೊಳ್ಳುತ್ತಿದ್ದರೆ ಒಂದು ಗ್ಲಾಸ್ ತಣ್ಣೀರು ಸೇವಿಸಿ. ನಿರ್ಜಲೀಕರಣವೂ ಹೃದಯ ಬಡಿತ ದಿಢೀರ್‌ನೆ ಹೆಚ್ಚಲು ಕಾರಣ ಎನ್ನುವುದು ನಿಮಗೆ ಗೊತ್ತೇ? ಅಲ್ಲದೆ ತಣ್ಣೀರು ನರಗಳನ್ನು ಶಾಂತಗೊಳಿಸುತ್ತದೆ,ಹೀಗಾಗಿ ಸಿಟ್ಟು,ಉದ್ವೇಗ ಅಥವಾ ಆತಂಕದಿಂದಾಗಿ ಹೃದಯ ಬಡಿತ ಹೆಚ್ಚಾಗಿದ್ದರೆ ತಣ್ಣೀರಿನ ಸೇವನೆ ತಕ್ಷಣ ಪರಿಹಾರವನ್ನು ನೀಡುತ್ತದೆ.

► ಮುಖಕ್ಕೆ ತಣ್ಣೀರು ಎರಚಿಕೊಳ್ಳಿ

ಹೃದಯ ಬಡಿತ ಹೆಚ್ಚಾದಾಗ ತಣ್ಣೀರು ಸೇವಿಸುವ ಬದಲು ತಣ್ಣೀರನ್ನು ಮುಖಕ್ಕೆ ಎರಚಿಕೊಳ್ಳಬಹುದು. ಇದು ನರಮಂಡಲ ವ್ಯವಸ್ಥೆಯನ್ನು ಪುನಃಶ್ಚೇತನಗೊಳಿಸುತ್ತದೆ ಮತ್ತು ಹೆಚ್ಚಿದ ಹೃದಯ ಬಡಿತ ಸಹಜ ಸ್ಥಿತಿಗೆ ಮರಳುತ್ತದೆ. ಮೊದಲ ಬಾರಿಗೆ ಹೃದಯ ಬಡಿತ ಹೆಚ್ಚಿದ ಅನುಭವವಾಗುತ್ತಿದ್ದರೆ ಸಾದಾ ಅಥವಾ ತಂಪುನೀರಿನ ಸ್ನಾನವು ಹಿತಕರವಾಗುತ್ತದೆ.

► ಹೆಚ್ಚಿನ ಹೃದಯ ಬಡಿತ ಯಾವಾಗ ಅಪಾಯಕಾರಿ?

ಸಾಮಾನ್ಯ ಸ್ಥಿತಿಯಲ್ಲಿ ಈ ಸರಳ ಕ್ರಮಗಳನ್ನು ಅನುಸರಿಸುವುದರಿಂದ ಹೃದಯ ಬಡಿತವು ಸಹಜಗೊಳ್ಳುತ್ತದೆ. ಆದರೆ ಕೆಲವೊಮ್ಮೆ ಯಾವುದೋ ಗಂಭೀರ ಕಾಯಿಲೆ ಯಿಂದಾಗಿ ಹೃದಯವು ವೇಗವಾಗಿ ಹೊಡೆದುಕೊಳ್ಳುತ್ತಿದ್ದರೆ ಸಾಧ್ಯವಾದಷ್ಟು ಶೀಘ್ರ ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ. ಉದಾಹರಣೆಗೆ ಹೆಚ್ಚಿನ ಹೃದಯ ಬಡಿತದೊಂದಿಗೆ ಬೆನ್ನುನೋವು,ಸೊಂಟನೋವು,ದವಡೆ ನೋವು,ತೀವ್ರ ಎದೆನೋವು,ಹಣೆಯಿಂದ ತಣ್ಣನೆಯ ಬೆವರು ಹರಿಯುವಿಕೆ ಇವೆಲ್ಲ ವೈದ್ಯರನ್ನು ತಕ್ಷಣ ಸಂಪರ್ಕಿಸಬೇಕು ಎನ್ನುವುದಕ್ಕೆ ಎಚ್ಚರಿಕೆಯ ಸಂಕೇತಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News