ಪೌರತ್ವ ಕಾಯ್ದೆ ವಿರೋಧಿ ಹೋರಾಟಗಾರರಿಗೆ ಪಿಂಚಣಿ ಭರವಸೆ ನೀಡಿದ ಸಮಾಜವಾದಿ ಪಕ್ಷ

Update: 2020-01-04 08:22 GMT

ಲಕ್ನೋ: ಅಧಿಕಾರಕ್ಕೆ ಬಂದರೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟಗಾರರಿಗೆ ಪಿಂಚಣಿ ನೀಡುವುದಾಗಿ ಸಮಾಜವಾದಿ ಪಕ್ಷ ಭರವಸೆ ನೀಡಿದೆ. ರಾಜ್ಯದಲ್ಲಿ ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆಗಳಲ್ಲಿ ಭಾಗವಹಿಸಿ ಜೈಲು ಪಾಲಾದವರಿಗೆ ಅಥವಾ ಮೃತಪಟ್ಟವರಿಗೆ ಪರಿಹಾರವನ್ನೂ ಪಕ್ಷ ನೀಡಲಿದೆ ಎಂದು ಉತ್ತರ ಪ್ರದೇಶ ವಿಧಾನಸಭೆಯ ವಿಪಕ್ಷ ನಾಯಕ ರಾಮ್ ಗೋವಿಂದ್ ಚೌಧುರಿ ಹೇಳಿದ್ದಾರೆ.

"ನಮ್ಮ ಪಕ್ಷ ಕೇಂದ್ರ ಹಾಗೂ ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದರೆ ಅವರಿಗೆ (ಪ್ರತಿಭಟನಾಕಾರರಿಗೆ) ಪಿಂಚಣಿ ನೀಡಲಾಗುವುದು. ಅವರು ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ರಕ್ಷಣೆಗೆ ಹೋರಾಡಿರುವುದರಿಂದ ಈ ಕ್ರಮ ಕೈಗೊಳ್ಳಲಾಗುವುದು'' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಅವರು ಹೇಳಿದರು.

"ಯಾರು ನಮ್ಮ ಬಳಿ ಆಶ್ರಯ ಕೇಳಿ ಬರುತ್ತಾರೋ ಅವರು ನಮ್ಮ ಆಶ್ರಯದಲ್ಲಿರುತ್ತಾರೆ. ನಾವು ಎಲ್ಲರನ್ನೂ ರಕ್ಷಿಸುವ ಜನರು'' ಎಂದು ಅವರು ಹೇಳಿಕೊಂಡರು.

ಸಮಾಜವಾದಿ ಪಕ್ಷದ ಪಿಂಚಣಿ ಭರವಸೆಯನ್ನು ಕಟುವಾಗಿ ಟೀಕಿಸಿದ ರಾಜ್ಯದ ಉಪಮುಖ್ಯಮಂತ್ರಿ ದಿನೇಶ್ ಶರ್ಮ, "ದಂಗೆಕೋರರನ್ನು ಹಾಗೂ ಸಮಾಜ ವಿರೋಧಿಗಳನ್ನು ಗೌರವಿಸುವುದು ಆ ಪಕ್ಷದ ಡಿಎನ್‍ಎಯಲ್ಲಿದೆ'' ಎಂದಿದ್ದಾರೆ. "ಅವರು ಹಿಂದೆಯೂ ಉಗ್ರರ ವಿರುದ್ಧದ ಪ್ರಕರಣಗಳನ್ನು ವಾಪಸ್ ಪಡೆಯಲು ಯತ್ನಿಸಿದವರು ನಂತರ ನ್ಯಾಯಾಲಯ ಹಸ್ತಕ್ಷೇಪ ನಡೆಸಬೇಕಾಯಿತು.  ಬಾಂಗ್ಲಾದೇಶಿಗಳು ಹಾಗೂ ರೋಹಿಂಗ್ಯನ್ನರಿಗೆ ಪೌರತ್ವ ಹಕ್ಕುಗಳನ್ನು ನೀಡುವ ಬಗ್ಗೆ ಸಮಾಜವಾದಿ ಪಕ್ಷ ಮಾತನಾಡುತ್ತಿರುವುದು ದುರದೃಷ್ಟಕರ'' ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News