×
Ad

‘ಇಂದಿರಾ ಕ್ಯಾಂಟೀನ್ ಊಟವನ್ನು ಜನಪ್ರತಿನಿಧಿಗಳಿಗೆ ನೀಡುವುದಿಲ್ಲ’

Update: 2020-01-04 23:41 IST

ಬೆಂಗಳೂರು, ಜ.4: ಬಿಬಿಎಂಪಿ ವ್ಯಾಪ್ತಿಯ ಸಾರ್ವಜನಿಕರಿಗೆ ಸರಬರಾಜು ಮಾಡುವ ಇಂದಿರಾ ಕ್ಯಾಂಟೀನ್ ಊಟವನ್ನು ಜನಪ್ರತಿನಿಧಿಗಳಿಗೆ ನೀಡುವುದಿಲ್ಲ ಎಂದು ಮೇ. ರಿವಾರ್ಡ್ಸ್ ಗುತ್ತಿಗೆ ಸಂಸ್ಥೆ ಬಿಬಿಎಂಪಿ ಕೌನ್ಸಿಲ್ ಕಾರ್ಯದರ್ಶಿಗೆ ಪತ್ರ ಬರೆದಿದೆ.

ಜನಸಾಮಾನ್ಯರಿಗೆ ನೀಡುವ ಊಟವನ್ನು ಬಿಬಿಎಂಪಿ ಕೌನ್ಸಿಲ್ ಸಭೆಗೂ ಸರಬರಾಜು ಮಾಡಲು ಕಳೆದ ಅವಧಿಯ ಮೇಯರ್ ಗಂಗಾಂಬಿಕೆ ಮೆ. ರಿವಾರ್ಡ್ಸ್ ಗುತ್ತಿಗೆ ಸಂಸ್ಥೆ ಆದೇಶ ನೀಡಿದ್ದರು. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದ 3 ತಿಂಗಳಲ್ಲಿ ಆಹಾರ ಸರಬರಾಜು ಮಾಡುತ್ತಿದ್ದ ಸಂಸ್ಥೆ, ಏಕಾಏಕಿ ಇನ್ನುಮುಂದೆ ಕೌನ್ಸಿಲ್ ಸಭೆಗೆ ಊಟ ಸರಬರಾಜು ಮಾಡುವುದಿಲ್ಲ. ಇಷ್ಟು ದಿನ ಊಟ ಸರಬರಾಜು ಮಾಡಲು ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು ಎಂದು ಕೌನ್ಸಿಲ್ ಸಭೆಗೆ ಪತ್ರ ಬರೆದಿದೆ.

ಕಾಂಗ್ರೆಸ್- ಜೆಡಿಎಸ್ ಮೈತ್ರಿ ಪಕ್ಷ ಆಡಳಿತದ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ 2018 ಅಕ್ಟೋಬರ್‌ನಿಂದ ಕ್ಯಾಂಟೀನ್ ಆಹಾರವನ್ನು ಕೌನ್ಸಿಲ್ ಸಭೆಗೆ ತರಿಸುವ ಮೂಲಕ ಎಲ್ಲ ಸದಸ್ಯರು ಕ್ಯಾಂಟೀನ್ ಆಹಾರ ಸೇವಿಸುವಂತೆ ಮಾಡಿದ್ದರು. ಇದರಿಂದ ವಾರ್ಷಿಕ ಸಾರ್ವಜನಿಕರ ತೆರಿಗೆ ಹಣ ಉಳಿಸಲು ಮುಂದಾಗಿದ್ದರು. ಜತೆಗೆ ಗುತ್ತಿಗೆ ಸಂಸ್ಥೆಗಳು ಗುಣಮಟ್ಟದ ಆಹಾರ ಸರಬರಾಜು ಮಾಡಲು ಇದೂ ಒಂದು ಕಾರಣವಾಗಿತ್ತು. ಆದರೆ ಒಂದು ವರ್ಷದಿಂದ ಆಹಾರ ನೀಡುತ್ತಿದ್ದ ಸಂಸ್ಥೆ ಏಕಾಏಕಿ ಊಟ ಸರಬರಾಜು ಮಾಡುವುದಿಲ್ಲ ಎಂದು ಹೇಳುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ.

ಕಳೆದ ಆಡಳಿತದ ಅವಧಿಯಲ್ಲಿ ಬಿಜೆಪಿ ಪಾಲಿಕೆ ಸದಸ್ಯರು ಇಂದಿರಾ ಕ್ಯಾಂಟೀನ್ ಆಹಾರ ಕಳಪೆಯಾಗಿದೆ. ನಾವು ಸೇವನೆ ಮಾಡುವುದಿಲ್ಲ ಎಂದು ಖಾಸಗಿ ಹೊಟೇಲ್‌ಗಳಿಂದ ಊಟ ತರಿಸಿಕೊಂಡು ಮಾಡುತ್ತಿದ್ದರು. ಮೊದಲಿನಿಂದಲೂ ಕ್ಯಾಂಟೀನ್ ಊಟ ವಿರೋಧಿಸುತ್ತಿದ್ದವರು, ಅಧಿಕಾರಕ್ಕೆ ಬಂದ ಮೇಲೆ ಆಹಾರ ಸರಬರಾಜು ಮಾಡುವುದನ್ನು ನಿಲ್ಲಿಸಲು ಗುತ್ತಿಗೆ ಸಂಸ್ಥೆಗೆ ಒತ್ತಡ ಹೇರಿದ್ದಾರೆ. ಬಿಜೆಪಿ ನಾಯಕರ ಲಾಬಿ ಮತ್ತು ಒತ್ತಡಕ್ಕೆ ಮಣಿದ ಮೆ. ರಿವಾರ್ಡ್ಸ್ ಸಂಸ್ಥೆ ಊಟ ಸರಬರಾಜು ಮಾಡದಿರಲು ಪತ್ರ ಬರೆದಿದೆ ಎಂದು ವಿರೋಧ ಪಕ್ಷದ ನಾಯಕರು ಆರೋಪಿಸುತ್ತಿದ್ದಾರೆ.

ಉಳಿತಾಯ: ಪಾಲಿಕೆಯ ಎಲ್ಲ ಕೌನ್ಸಿಲ್ ಸಭೆಗಳು, ಇತರೆ ಸಣ್ಣ ಪುಟ್ಟ ಸಭೆಗಳಿಗೆ ಇಂದಿರಾ ಕ್ಯಾಂಟೀನ್‌ನಿಂದ ಉಪಾಹಾರ, ಸಸ್ಯಾಹಾರ ಊಟ, ಗೋಡಂಬಿ, ಚಹಾ, ಕಾಫಿ, ಬಾದಾಮಿ ಹಾಲು ಹಾಗೂ ಬಿಸ್ಕತ್ ಸರಬರಾಜು ಮಾಡುತ್ತಿತ್ತು. ವಾರ್ಷಿಕ 16 ರಿಂದ 17 ಲಕ್ಷ ರೂ. ಇಂದಿರಾ ಕ್ಯಾಂಟೀನ್‌ಗೆ ಹಣ ಸಂದಾಯವಾಗುತ್ತಿತ್ತು. ಆದರೆ ಖಾಸಗಿ ಹೊಟೇಲ್‌ಗಳಿಂದ ತರಿಸಿದ ಊಟದಲ್ಲಿ ಉಪಾಹಾರವು ಟೀ, ಕಾಫಿ, ಬಾದಾಮಿ ಹಾಲು, ಗೋಡಂಬಿ, ಮದ್ದೂರು ವಡೆ, ಸಸ್ಯಾಹಾರ ಊಟ ಹಾಗೂ ಮಾಂಸಾಹಾರಿ ಊಟ ಸರಬರಾಜು ಮಾಡಲಾಗುತ್ತಿತ್ತು. ಇದರಿಂದ ವಾರ್ಷಿಕ 75 ರಿಂದ 80 ಲಕ್ಷ ರೂ. ಆಹಾರಕ್ಕಾಗಿ ಖರ್ಚಾಗುತ್ತಿತ್ತು. ಇದರಿಂದ ಒಟ್ಟು 20 ಲಕ್ಷ ರೂ. ಉಳಿತಾಯವಾಗುತ್ತಿತ್ತು.

ಸಾರ್ವಜನಿಕರ ತೆರಿಗೆ ಹಣ ಉಳಿತಾಯ ಮಾಡುವ ಉದ್ದೇಶದಿಂದ ಪಾಲಿಕೆಯ ಎಲ್ಲ ಕೌನ್ಸಿಲ್ ಸಭೆಗೆ ಸೇವಿಸುವ ಇಂದಿರಾ ಕ್ಯಾಂಟೀನ್ ಊಟ ತರಿಸಲಾಗುತ್ತಿತ್ತು. ಇದರಿಂದ ಎಲ್ಲರಿಗೂ ಸಮಾನತೆ ಸಂದೇಶ ರವಾನೆಯಾಗುತ್ತಿತ್ತು. ಈಗ ಗುತ್ತಿಗೆ ಸಂಸ್ಥೆ ಊಟ ನಿಲ್ಲಿಸಲು ಕಾರಣ ತಿಳಿಯುತ್ತಿಲ್ಲ.

-ಗಂಗಾಂಬಿಕೆ ಮಲ್ಲಿಕಾರ್ಜುನ, ಬಿಬಿಎಂಪಿ ಮಾಜಿ ಮೇಯರ್.

ನಮ್ಮ ದೇಶ ಆರ್ಥಿಕ ಹಿಂಜರಿತದಿಂದ ತತ್ತರಿಸುತ್ತಿರುವಾಗ, ಕಡಿಮೆ ಬೆಲೆಯ ಗುಣಮಟ್ಟದ ಇಂದಿರಾ ಕ್ಯಾಂಟೀನ್ ಊಟ ಮಾಡುವುದು ಅಗತ್ಯವಿದೆ. ಆದರೆ ಮೇಯರ್ ಹಾಗೂ ಆಡಳಿತ ಪಕ್ಷದ ಸದಸ್ಯರು ಸಾರ್ವಜನಿಕರ ತೆರಿಗೆ ಹಣ ದುರುಪಯೋಗ ಮಾಡುವ ಉದ್ದೇಶದಿಂದ ಗುತ್ತಿಗೆ ಸಂಸ್ಥೆ ಮೇಲೆ ಒತ್ತಡ ಹಾಕಿ ಪತ್ರ ಬರೆಸಿದ್ದಾರೆ.

-ಅಬ್ದುಲ್ ವಾಜೀದ್, ಬಿಬಿಎಂಪಿ ವಿರೋಧ ಪಕ್ಷದ ನಾಯಕ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News