×
Ad

ಅಲೆಮಾರಿ ಸಮುದಾಯಕ್ಕೆ ವಸತಿ ಸೌಕರ್ಯ: ಮುಖ್ಯಮಂತ್ರಿ ಯಡಿಯೂರಪ್ಪ

Update: 2020-01-04 23:46 IST

ಬೆಂಗಳೂರು, ಜ.4: ರಾಜ್ಯದಲ್ಲಿನ ಅಲೆಮಾರಿ ಜನಾಂಗವನ್ನು ಗುರುತಿಸಿ ಗುಡಿಸಲು ಮುಕ್ತಗೊಳಿಸುವ ನಿಟ್ಟಿನಲ್ಲಿ ‘ವಸತಿ ಸೌಕರ್ಯ’ ಕಲ್ಪಿಸಲು ಸರಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಕಟಿಸಿದರು.

ಶನಿವಾರ ನಗರದ ಕುಮಾರ ಕೃಪಾದ ಗಾಂಧಿ ಭವನ ಸಭಾಂಗಣದಲ್ಲಿ ಕರ್ನಾಟಕ ಅಲೆಮಾರಿ, ಅಲೆ ಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟುಗಳ ಒಕ್ಕೂಟ ಮತ್ತು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ವತಿಯಿಂದ ಆಯೋಜಿಸಿದ್ದ, ಅಲೆಮಾರಿ ಸಮಸ್ಯೆ ಸವಾಲುಗಳು ಮತ್ತು ಪರಿಹಾರೋಪಾಯಗಳು ಸಮಾಲೋಚನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಅಲೆಮಾರಿ ಸಮುದಾಯ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಅಗತ್ಯ ಕಾರ್ಯಕ್ರಮಗಳನ್ನು ಕೈಗೊಳ್ಳಲಿದೆ. ಅದೇ ರೀತಿಯಲ್ಲಿ ಈ ಸಮುದಾಯ ನೆಲೆ ಕಂಡುಕೊಳ್ಳಬೇಕಾಗಿದೆ. ಇದಕ್ಕಾಗಿ ವಸತಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದರು.  ಈ ಹಿಂದೆ ಅಲೆಮಾರಿ ಸಮುದಾಯದ ಅಭಿವೃದ್ಧಿಗಾಗಿ ವಿಶೇಷ ಯೋಜನೆಗಳನ್ನು ಕೈಗೊಳ್ಳಲಾಗಿತ್ತು. ಜೊತೆಗೆ ಶೈಕ್ಷಣಿಕ ಪ್ರಗತಿಗೂ ಒತ್ತು ನೀಡಲಿದ್ದು, ಯಾವೊಂದು ಮಗು ಸಹ ಶಾಲೆಯಿಂದ ಹೊರಗಡೆ ಇರಬಾರದು ಎಂದರು.

ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಕೇಂದ್ರದ ಅಲೆಮಾರಿ ಕಲ್ಯಾಣ ಮತ್ತು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬಿ.ಆರ್.ದಾದಾ, ಹಂಪಿಯ ಕನ್ನಡ ವಿವಿಯ ಬುಡಕಟ್ಟು ಅಧ್ಯಯನ ವಿಭಾಗದ ಪ್ರಾಧ್ಯಾಪಕ ಕೆ.ಎಂ.ಮೈತ್ರಿ, ಬಿಜೆಪಿ ಮುಖಂಡ ರವಿಕುಮಾರ್, ಒಕ್ಕೂಟದ ಅಧ್ಯಕ್ಷ ಕೆ.ಭಾಸ್ಕರ್ ದಾಸ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಬೇಡಿಕೆಗಳೇನು?:

* ಅಲೆಮಾರಿ ಅಧ್ಯಯನ ಕೇಂದ್ರ ಸ್ಥಾಪಿಸಿ

* ಅಲೆಮಾರಿ ಅಕಾಡೆಮಿ ಸ್ಥಾಪಿಸಿ

* ಶೈಕ್ಷಣಿಕ-ಉದ್ಯೋಗದಲ್ಲಿ ಮೀಸಲಾತಿ

* ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ಕಲ್ಪಿಸಬೇಕು

* ರಾಜ್ಯದಲ್ಲಿ ಕೂಡಲೇ ಅಲೆಮಾರಿ ಅರೆ ಅಲೆಮಾರಿ ಆಯೋಗ ರಚಿಸಲು ತಕ್ಷಣವೇ ಕ್ರಮ ಕೆಗೊಳ್ಳಬೇಕು

* ಜನಾಂಗಕ್ಕೆ ಕೃಷಿ ಯೋಗ್ಯ ಜಮೀನು ನೀಡಬೇಕು

‘ಅನರ್ಹರಿಗೆ ಮೀಸಲಾತಿ, ಕಳ್ಳತನಕ್ಕೆ ಸಮ’

 ರಾಜ್ಯದಲ್ಲೂ ಕೆಲವು ಮುಂದುವರೆದ ಜಾತಿ ಸಮುದಾಯವು ಪರಿಶಿಷ್ಟ ಜಾತಿ/ಪಂಗಡದ ಮೀಸಲಾತಿ ಪಟ್ಟಿಯಲ್ಲಿ ಸೇರ್ಪಡೆಯಾಗಿ, ಸೌಲಭ್ಯ ಪಡೆಯುತ್ತಿರುವುದು ದುರ್ದೈವ. ಇದರಿಂದ ನಿಜವಾದ ಫಲಾನುಭವಿಗಳು ಸೌಲಭ್ಯದಿಂದ ವಂಚಿತರಾಗುತ್ತಾರೆ. ಅಲ್ಲದೆ, ಅನರ್ಹರು ಮೀಸಲಾತಿ ಸೌಲಭ್ಯ ಪಡೆದರೆ ಕಳ್ಳತನ ಮಾಡಿದಷ್ಟೇ ಅಪರಾಧ.

-ಗೋವಿಂದ ಕಾರಜೋಳ, ಉಪಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News