ಬೆಂಗಳೂರು ವಿವಿಯ ಬಿಕಾಂ ಪದವಿಯಲ್ಲಿ ಪ್ರಥಮ ರ‍್ಯಾಂಕ್: ವಿದ್ಯಾರ್ಥಿನಿ ರಹಮತುನ್ನೀಸಾಗೆ ಗೌರವ ಸನ್ಮಾನ

Update: 2020-01-04 18:18 GMT

ಬೆಂಗಳೂರು, ಜ.4: ಬಿಬಿಎಂಪಿ ವತಿಯಿಂದ ನಡೆಸುತ್ತಿರುವ ಮಹಿಳಾ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿ ರಹಮತುನ್ನೀಸಾ ಬಿಕಾಂ ಪದವಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯಕ್ಕೇ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ. ಈ ಸಂಬಂಧ ಶನಿವಾರ ಪಾಲಿಕೆ ಆಯುಕ್ತ ಬಿ.ಹೆಚ್ ಅನಿಲ್ ಕುಮಾರ್ ಅವರು ಪಾಲಿಕೆ ಕೇಂದ್ರ ಕಚೇರಿಯಲ್ಲಿ ರಹಮತುನ್ನೀಸಾ ಅವರನ್ನು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪಾಲಿಕೆ ಆಯುಕ್ತ ಬಿ.ಹೆಚ್ ಅನಿಲ್ ಕುಮಾರ್, ಬಿಬಿಎಂಪಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ರಹಮತುನ್ನೀಸಾ ಬಿಕಾಂ ಪದವಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಪ್ರಥಮ ರ‍್ಯಾಂಕ್ ಗಳಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಬಿಬಿಎಂಪಿಯ ನಾಲ್ಕು ಪದವಿ ಕಾಲೇಜುಗಳಲ್ಲಿ 2,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಿಎ, ಬಿ.ಕಾಂ ಪದವಿ ವ್ಯಾಸಂಗ ಮಾಡುತ್ತಿದ್ದು, ಅದರಲ್ಲಿ ರಹಮತುನ್ನೀಸಾ 4,600 ಅಂಕಗಳಿಗೆ 4,226(ಶೇ.91.87) ಅಂಕ ಪಡೆದು ಬೆಂಗಳೂರು ವಿಶ್ವವಿದ್ಯಾಲಯಕ್ಕೇ ಮೊದಲ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿ ಎಂದರು.

ರಹಮತುನ್ನೀಸಾ ಶೇ.91.87, ಹರಿಜ ಸುಲ್ತಾನ ಶೇ.91.8, ಉಮ್ಮೆ ಹನಿ ಶೇ.89.7, ಉಮ್ಮು ಕುಲ್ಸಮ್ ಶೇ.84.8, ಅರ್ಷಿಯಾ ತಾಜ್ ಶೇ.83.8, ಅನೀಸ ಶೇ.83.4, ಫಾತಿಮುನ್ನೀಸಾ ಶೇ.82.5, ಸಮ್ರೀನ್ ಬಾನು ಶೇ.82.1, ಉಮ್ಮು ಅಸ್ಮಾ ಶೇ.80.4, ಅಲ್ಮಸ್ ತಾಜ್ ಶೇ.80.1 ಅಂಕ ಪಡೆದಿದ್ದಾರೆ.

ಈ ಸಂದರ್ಭದಲ್ಲಿ ಪಾಲಿಕೆಯ ವಿಶೇಷ ಆಯುಕ್ತರಾದ ವೃಷಬೇಂದ್ರ ಮೂರ್ತಿ, ಡಾ. ರವಿಕುಮಾರ್ ಸುರಪುರ, ಜಂಟಿ ಆಯುಕ್ತೆ ಪಲ್ಲವಿ, ಬಿಬಿಎಂಪಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಆನಂದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News