ಅದ್ರಾಮನ ಅಲೆದಾಟ

Update: 2020-01-04 18:35 GMT

ಏಳು ವರ್ಷದಿಂದ ನನ್ನ ಮಗನ ಅಸ್ತಿತ್ವದ ಬಗ್ಗೆ ಸರಕಾರಿ ಕಚೇರಿಯಿಂದ ಕಚೇರಿಗೆ, ಮಂತ್ರಿ-ಮುಖ್ಯಮಂತ್ರಿಯ ಮನೆ-ಕಚೇರಿಗೆ ಅಲೆದಾಡಿ ಸಾಕಾಗಿ ಹೋಗಿದೆ. ನನ್ನ ಮಗ ಬದುಕಿದ್ದಾನೋ ಅಥವಾ ಇಹಲೋಕ ತ್ಯಜಿಸಿದ್ದಾನೋ ಎಂಬುದರ ಬಗ್ಗೆ ದೃಢೀಕರಣ ಪತ್ರ ನೀಡದೆ ಹೋದರೆ ನಾನು ಯಾವುದೇ ಕ್ಷಣ ಸಾರ್ವಜನಿಕರ ಸಮ್ಮುಖ ನೇಣು ಹಾಕಿಕೊಳ್ಳಲು ಪ್ರಯತ್ನಿಸುವೆ. ಪ್ರಜಾಪ್ರಭುತ್ವ ರಾಷ್ಟ್ರದ ಅವ್ಯವಸ್ಥೆಯ ವಿರುದ್ಧ ಈ ಮೂಲಕ ಜನಾಂದೋಲನ ರೂಪಿಸುವೆ ಎಂದು ಕಳೆದ ಎರಡು ವಾರದಿಂದ ಪಾವೂರು ಗ್ರಾಮ ಪಂಚಾಯತ್ ಕಚೇರಿಯ ಗೇಟಿನ ಮುಂದೆ ಧರಣಿ ಕುಳಿತಿರುವ ಅದ್ರಾಮ ಮಾಧ್ಯಮದ ಮುಂದೆ ಹೇಳಿಕೆ ನೀಡುವುದೂ, ರಹ್ಮತ್‌ನಗರ ಮತ್ತು ಮುಬಾರಕ್ ನಗರದ ಮಧ್ಯೆ ಸಂಪರ್ಕ ರಸ್ತೆಯನ್ನು ಉದ್ಘಾಟಿಸಲು ಸ್ಥಳೀಯ ಶಾಸಕರು ಧರಣಿ ಕುಳಿತ ಸ್ಥಳದ ಮುಂದೆ ಹಾದು ಹೋಗುವುದೂ ಆಕಸ್ಮಿಕವಾಗಿತ್ತು.

ಮಾಧ್ಯಮದವರ ದಂಡು ಭಾರೀ ಸಂಖ್ಯೆಯಲ್ಲಿ ಅದೂ ಗ್ರಾಮೀಣ ಪ್ರದೇಶದಲ್ಲಿ ಜಮಾಯಿಸಿರುವುದನ್ನು ಗಮನಿಸಿದ ಶಾಸಕರು ತನ್ನ ಕಾರಿನಿಂದಿಳಿದು ಅತ್ತ ಧಾವಿಸಿದರು. ಮಾಧ್ಯಮದವರ ಕ್ಯಾಮರಾ ಕಣ್ಣು ಶಾಸಕರತ್ತ ತಿರುಗಿತು. ಶಾಸಕರಿಗೆ ವಿಷಯ ಏನುಂತಲೂ ತಿಳಿದಿರಲಿಲ್ಲ. ಅವರು ಒಂದು ಕ್ಷಣ ವೌನಕ್ಕೆ ಶರಣಾಗಿ ಸ್ಥಳೀಯ ಜನಪ್ರತಿನಿಧಿಗಳ ಮುಖ ದಿಟ್ಟಿಸಿದರು. ಅದ್ರಾಮನ ಧರಣಿಗೂ ತಮಗೂ ಏನೂ ಸಂಬಂಧವಿಲ್ಲ ಎಂಬಂತೆ ಅವರು ಸುಮ್ಮನಿದ್ದರು.

ಯಾರ್ರೀ... ಇಲ್ಲಿನ ಪಿಡಿಒ...ವಿಎ.. ಎಂದು ಶಾಸಕರ ಅಬ್ಬರಕ್ಕೆ ಇಬ್ಬರೂ ಸ್ವಲ್ಪ ಮುಂದೆ ಬಂದರು. ಏನು ವಿಷಯ...ಮೇಲಧಿಕಾರಿಗಳ ಗಮನ ಸೆಳೆದಿರುವಿರಾ? ಎಂದು ಶಾಸಕರು ತುಸು ಖಾರವಾದರು. ಹಾಗೇ ತನ್ನ ಆಪ್ತ ಸಹಾಯಕನ ಮೂಲಕ ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರು, ತಹಶೀಲ್ದಾರ್, ಕಂದಾಯ ನಿರೀಕ್ಷಕರನ್ನು ಸ್ಥಳಕ್ಕೆ ಆಗಮಿಸುವಂತೆ ಸೂಚಿಸಿದರು.

ಸಿಡಿಲು ಬಡಿದು, ವಿದ್ಯುತ್ ತಂತಿ ತಗುಲಿ, ತೆಂಗಿನಕಾಯಿ ಬಿದ್ದು, ಅಡಿಕೆಯ ಮರಬಿದ್ದು, ರಸ್ತೆ ಅಪಘಾತ ಹೀಗೆ ಹಲವರು ದಿನನಿತ್ಯ ಕೊನೆಯುಸಿರೆಳೆಯುತ್ತಾರೆ. ಅವರಿಗೆ ಬೇರೆ ಬೇರೆ ನಿಧಿಯಡಿ ಪರಿಹಾರ ಧನವೂ ಸಿಗುತ್ತಿದೆ. ಆದರೆ ನನ್ನ ಮಗ ಶಮೀರ್ ಏಳು ವರ್ಷದ ಹಿಂದೆ ಇದೇ ನೇತ್ರಾವತಿ ನದಿ ತೀರದ ಗಾಡಿಗದ್ದೆಯಲ್ಲಿ ದೋಣಿ ಮಗುಚಿ ನೀರು ಪಾಲಾಗಿದ್ದಾನೆ. ಅವನು ಕೊನೆಯುಸಿರೆಳೆದಿದ್ದಾನಾ? ಅಪಾಯದಿಂದ ಪಾರಾಗಿದ್ದಾನಾ? ಎಂದು ಈವರೆಗೂ ಗೊತ್ತಿಲ್ಲ. ಅದಕ್ಕಾಗಿ ನಾನು ಗ್ರಾಮಕರಣಿಕರ, ಕಂದಾಯ ನಿರೀಕ್ಷಕರ, ತಹಶೀಲ್ದಾರರ, ಸಹಾಯಕ ಆಯುಕ್ತರ, ಜಿಲ್ಲಾಧಿಕಾರಿಯ, ಗ್ರಾಪಂ, ತಾಪಂ, ಜಿಪಂ ಸದಸ್ಯರ, ಅಧ್ಯಕ್ಷರ, ಮಂತ್ರಿ, ಮುಖ್ಯಮಂತ್ರಿಯನ್ನು ಸ್ವತಃ ಕಂಡು ಮನವಿ ಸಲ್ಲಿಸಿ ದೃಢೀಕರಣ ಪತ್ರ ನೀಡಿ ಎಂದು ಅಲೆದಾಡಿದ್ದಕ್ಕೆ ಲೆಕ್ಕವಿಲ್ಲ. ಕಾನೂನಿನಲ್ಲಿ ಅಂತಹ ದೃಢೀಕರಣ ಪತ್ರವನ್ನು ನೀಡಲು ಅವಕಾಶವಿಲ್ಲ ಎಂದು ಅಧಿಕಾರಿಗಳು ಕೈ ಚೆಲ್ಲಿದರೇ ವಿನಃ ನನಗೆ ನ್ಯಾಯ ದೊರಕಿಸಿ ಕೊಡಲಿಲ್ಲ. ಎಲ್ಲರೂ ಭರವಸೆಯ ಮಾತುಗಳನ್ನಾಡಿದರೂ ನನ್ನ ನೋವು-ದು:ಖ ಅರ್ಥ ಮಾಡಿಕೊಳ್ಳಲಿಲ್ಲ. ನಾನು ಸಂಬಂಧಪಟ್ಟವರ ಕಚೇರಿ-ಮನೆಯ ಬಾಗಿಲ ಬಳಿ ಅಲೆದಾಡಿದ್ದೇ ಬಂತು. ಮಗನ ಆಧಾರ್ ಕಾರ್ಡ್, ಜಾತಿ-ಆದಾಯ ಪ್ರಮಾಣ ಪತ್ರ, ಜನನ ಪ್ರಮಾಣ ಪತ್ರ, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ, ಹೀಗೆ ಎಲ್ಲವನ್ನೂ ನೋಡುವಾಗ ನನ್ನ ಕರುಳು ಚುರ್ ಎನ್ನುತ್ತಿದೆ. ಈ ಮಧ್ಯೆ ಸಮಾಜ ಸೇವೆಯ ಸೋಗು ಹಾಕುವ ಕೆಲವರು 15 ಸಾವಿರ ರೂಪಾಯಿ ಕೊಟ್ಟರೆ ನಿಮಗೆ ಬೇಕಾದ ದೃಢೀಕರಣ ಪತ್ರ ನೀಡುವೆವು, ಬೇರೆ ಬೇರೆ ಪರಿಹಾರ ನಿಧಿಯಿಂದ ಲಕ್ಷಾಂತರ ರೂಪಾಯಿ ದೊರಕಿಸಿ ಕೊಡುವೆವು ಎಂದರು. ನಾನು ಯಾರ ಮಾತಿಗೆ ಕಿವಿಗೊಡದೆ ಕಚೇರಿಯಿಂದ ಕಚೇರಿಗೆ ಅಲೆದಾಡಿದೆ. ಆದರೆ ಪ್ರಯೋಜನವಾಗಲಿಲ್ಲ. ಹಾಗಾಗಿ ಎರಡು ವಾರದಿಂದ ಇಲ್ಲಿ ಧರಣಿ ಕುಳಿತಿರುವೆ. ಯಾರೂ ನನ್ನತ್ತ ತಿರುಗಿ ನೋಡಲಿಲ್ಲ. ಅಂತಿಮವಾಗಿ ಸಾರ್ವಜನಿಕವಾಗಿ ನೇಣು ಹಾಕಿಕೊಳ್ಳುವ ನಿರ್ದಾರಕ್ಕೆ ಬಂದೆ. ನನಗಿನ್ನು ಮೂರು ದಿನದಲ್ಲಿ ನನ್ನ ಮಗನ ಅಸ್ತಿತ್ವದ ಬಗ್ಗೆ ದೃಢೀಕರಣ ಪತ್ರ ನೀಡದೇ ಹೋದರೆ ಯಾವುದೇ ಕ್ಷಣದಲ್ಲಿ ನಾನು ನೇಣು ಹಾಕಿಕೊಳ್ಳುವೆ ಎಂದು ಅದ್ರಾಮ ಸ್ಪಷ್ಟಪಡಿಸಿದ.

ಅಲ್ಲೇ ಇದ್ದ ತನ್ನ ಬೆಂಬಲಿಗರ ಮೂಲಕ ಅದ್ರಾಮನ ಹಿನ್ನ್ನೆಲೆಯ ಬಗ್ಗೆ ಕೇಳಿ ತಿಳಿದುಕೊಂಡ ಶಾಸಕರು ನೀವೊಬ್ಬ ಹೋರಾಟ ಮನೋಭಾವದವರು. ಸತತ ಪ್ರಯತ್ನದ ಹೊರತಾಗಿಯೂ ನ್ಯಾಯ ಸಿಕ್ಕಿಲ್ಲ ಎಂಬ ಹತಾಶೆಯಿಂದ ಇಂತಹ ದುಡುಕಿನ ನಿರ್ಧಾರ ತೆಗೆದುಕೊಳ್ಳಬಾರದು. ಡಿಸಿ ಸಹಿತ ಇತರ ಅಧಿಕಾರಿಗಳು ಇಲ್ಲಿಗೆ ಬರಲಿದ್ದಾರೆ. ಅವರ ಜೊತೆ ಚರ್ಚೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವೆ ಎಂದು ಭರವಸೆ ನೀಡಿದರಲ್ಲದೆ ಧರಣಿಯನ್ನು ಕೈ ಬಿಡಲು ಮನವಿ ಮಾಡಿದರು.

ದೃಢೀಕರಣ ಪತ್ರ ನನ್ನ ಕೈ ಸೇರುವವರೆಗೂ ನಾನು ಧರಣಿ ಹಿಂದಕ್ಕೆ ಪಡೆಯುವುದಿಲ್ಲ ಎಂದು ಅದ್ರಾಮ ಸ್ಪಷ್ಟ ಮಾತಿನಲ್ಲಿ ತಿಳಿಸಿದ. ಅಷ್ಟರಲ್ಲಿ ಡಿಸಿ, ಎಸಿ, ತಹಶೀಲ್ದಾರ್, ರೆವೆನ್ಯೂ ಇನ್‌ಸ್ಪೆಕ್ಟರ್ ಸಹಿತ ಎಲ್ಲರ ವಾಹನಗಳು ಗ್ರಾಮ ಪಂಚಾಯತ್ ಕಚೇರಿಯ ಮುಂದೆ ಸಾಲುಗಟ್ಟಿ ನಿಂತಿತು. ಅವರ ಹಿಂದೆಯೇ ಎಸಿಪಿ, ಇನ್‌ಸ್ಪೆಕ್ಟರ್, ಸಬ್ ಇನ್‌ಸ್ಪೆಕ್ಟರ್‌ರ ವಾಹನಗಳೂ ಬಂತು. ನೋಡಿ... ವಿಷಯ 7 ವರ್ಷದ ಹಿಂದಿನದ್ದಾದರೂ 2 ವಾರದಿಂದ ಇವರು ಇಲ್ಲಿ ಧರಣಿ ಕುಳಿತಿದ್ದಾರೆ. ಆದರೆ ಯಾರೂ ನನ್ನ ಗಮನ ಸೆಳೆಯಲಿಲ್ಲ. ಯಾಕೆ, ವಿಷಯ ನಿಮಗೆ ಗೊತ್ತಾಗಲಿಲ್ಲವಾ? ಅಥವಾ ಗೊತ್ತಿದ್ದೂ ಸುಮ್ಮನಿದ್ದೀರಾ? ಎಂದು ಶಾಸಕರು ಕೇಳಿದರು.

ಕಂದಾಯ ಮತ್ತು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ತಮ್ಮ ಅಧೀನದ ಅಧಿಕಾರಿಗಳ ಮುಖ ದಿಟ್ಟಿಸಿದರು. ಸಾರ್... ನಾನು ಕಂದಾಯ ನಿರೀಕ್ಷಕರಿಗೆ ವರದಿ ನೀಡಿದ್ದೆ ಎಂದು ಗ್ರಾಮಕರಣಿಕ ಹೇಳಿದರೆ, ನಾನು ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದೆ ಎಂದು ಪಿಡಿಒ ತಿಳಿಸಿದರು.

ಗ್ರಾಮಕರಣಿಕರ ವರದಿಯ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ? ಎಂಬ ಶಾಸಕರ ಪ್ರಶ್ನೆಗೆ ಕಂದಾಯ ಇನ್‌ಸ್ಪೆಕ್ಟರ್ ವೌನ ತಾಳಿದರೆ, ಸಾರ್... ಇವರು ಸಣ್ಣಪುಟ್ಟ ವಿಷಯಕ್ಕೂ ಧರಣಿ-ಪ್ರತಿಭಟನೆ ಮಾಡುವುದು ಮಾಮೂಲಿಯಾಗಿದೆ ಎಂದು ಇನ್‌ಸ್ಪೆಕ್ಟರ್ ಪರೋಕ್ಷವಾಗಿ ತನ್ನ ನಿರ್ಲಕ್ಷ್ಯವನ್ನು ಒಪ್ಪಿಕೊಂಡರು.

ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತಿಯೊಬ್ಬರಿಗೂ ತಮ್ಮದೇ ಆದ ಸ್ವಾತಂತ್ರವಿದೆ. ಇವರು ಸಣ್ಣಪುಟ್ಟ ವಿಷಯಕ್ಕೆ ಹೋರಾಟ ಮಾಡುತ್ತಾರೆ ಎಂದು ಇವರನ್ನು ನಿರ್ಲಕ್ಷಿಸಿದರೆ ಆಗುತ್ತದಾ? ಇವರು ಹತಾಶೆಯಿಂದ ಸಾರ್ವಜನಿಕವಾಗಿ ನೇಣು ಹಾಕಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದರು. ಒಂದು ವೇಳೆ ಅನಾಹುತ ಆಗಿದ್ದರೆ ಏನಾಗುತ್ತಿತ್ತು? ಧರಣಿ ಕುಳಿತ ತಕ್ಷಣ ನನ್ನ ಗಮನ ಸೆಳೆದಿದ್ದರೆ ಇಷ್ಟರಲ್ಲಿ ಅವರಿಗೆ ನ್ಯಾಯ ಸಿಗುತ್ತಿತ್ತು. ನಿಮ್ಮ ನಿರ್ಲರ್ಕ್ಷದಿಂದ ಈಗ ಸಮಸ್ಯೆ ಉದ್ಭವಿಸಿದೆ. ನಿಮ್ಮಂತಹವರಿಗೆ ಅಮಾನತಿನ ಶಿಕ್ಷೆಯನ್ನು ಉಡುಗೊರೆ ರೂಪದಲ್ಲಿ ಕೊಡಬೇಕು ಎಂದು ಶಾಸಕರು ಖಾರವಾಗಿ ನುಡಿದರಲ್ಲದೆ, ಡಿಸಿ ಜೊತೆ ಚರ್ಚಿಸಿ ಸೂಕ್ತ ಕ್ರಮ ಜರುಗಿಸುವೆ. ತಕ್ಷಣ ಧರಣಿ ಕೈಬಿಡಬೇಕು. ನಾಳೆ ಸಂಜೆಯೊಳಗೆ ದೃಢೀಕರಣ ಪತ್ರವನ್ನು ಗ್ರಾಮಕರಣಿಕರು ಸ್ವತಃ ನಿಮ್ಮ ಮನೆ ಬಾಗಿಲಿಗೆ ತಲುಪಿಸಲಿದ್ದಾರೆ ಎಂದು ಪ್ರಕಟಿಸಿದರು.

ಆದರೆ ಅದ್ರಾಮ ಯಾರ ಮನವಿಗೂ ಕರಗಲಿಲ್ಲ. ಆತನ ಹಟ ಎಲ್ಲರಿಗೂ ಮತ್ತೊಂದು ಸಮಸ್ಯೆಯಾಗಿ ಕಾಡಿತು. ಅದ್ರಾಮ ಕಣ್ಣು ಮುಚ್ಚಿ ಧರಣಿ ಮುಂದುವರಿಸಿದರೆ, ಶಾಸಕರು-ಡಿಸಿ ಸಹಿತ ಎಲ್ಲಾ ಅಧಿಕಾರಿಗಳು ಕೆಲಕಾಲ ಅಲ್ಲೇ ಕಾದು ನಿಂತು ಏನೂ ಪ್ರಯೋಜನವಾಗುವುದಿಲ್ಲ ಎಂದು ಮನವರಿಕೆಯಾಗುತ್ತಲೇ ಕಾಲ್ತೆಗೆದರು. ಮಾಧ್ಯಮದವರು ಕೂಡ ಅಲ್ಲಿಂದ ಹೊರಟು ಹೋದರು.

****

ಅದ್ದು ಯಾನೆ ಅದ್ದುಕ ಯಾನೆ ಅದ್ದುಕಾಕ ಯಾನೆ ಅದ್ದ ಯಾನೆ ಅದ್ದಾಕ ಯಾನೆ ಅವುದ್ರಾಮ ಯಾನೆ ಅದ್ರಾಮ ಹೀಗೆ ಕಾಲ ಕಾಲಕ್ಕೆ ತನ್ನವರಿಂದ ಕರೆಯಿಸಲ್ಪಟ್ಟ ಅಬ್ದುಲ್ ರಹ್ಮಾನ್ ಬಡತನದಲ್ಲೇ ಬೆಳೆದವ.

ಬಾಲ್ಯದಲ್ಲೇ ತಂದೆ-ತಾಯಿಯನ್ನು ಕಳೆದುಕೊಂಡ ಅದ್ರಾಮ ಆ ಕಾಲದ ನಾಲ್ಕನೆಯ ತರಗತಿಯವರೆಗೆ ಕಲಿತಿದ್ದ. ಹೊಟ್ಟೆಪಾಡಿಗಾಗಿ ಮಾಡದ ಕಸಬು ಇಲ್ಲ. ಒಂದು ಹಲಸನ್ನು ಸಣ್ಣ ಸಣ್ಣ ತುಂಡು ಮಾಡಿ ರಸ್ತೆ ಬದಿ ಸ್ಟೂಲ್ ಹಾಕಿ ನಿಂತು ಮಾರಾಟ ಮಾಡಿದ, ಮಾವಿನ ಹಣ್ಣು, ಗೇರು ಹಣ್ಣನ್ನು ಮಾರಾಟ ಮಾಡಿದ, ಕಾಯಿಮಾವನ್ನು ತೆಳುವಾಗಿ ಕೊಯ್ದು ಉಪ್ಪು ಹಾಕಿ ಭರಣಿಯಲ್ಲಿ ಹಾಕಿ ಮಾರಾಟ ಮಾಡಿದ ದಿನಗಳಿಗೆ ಲೆಕ್ಕವೇ ಇಲ್ಲ. ಮನೆ ಮನೆಗೆ ತೆರಳಿ ತೆಂಗಿನಕಾಯಿ ಖರೀದಿಸಿ ಸಂತೆಗೆ ಕೊಂಡೊಯ್ದು ಮಾರಾಟ ಮಾಡಿದ್ದೂ ಇದೆ, ಹಾಗೇ ನೋಡಿದರೆ ಅದ್ರಾಮನಿಗೆ ಸಂಪತ್ತು ಕೂಡಿಡುವ ಆಸೆಯೇ ಇಲ್ಲ. ಗಾಳಿ, ಮಳೆ, ಬಿಸಿಲಿನಿಂದ ರಕ್ಷಿಸಲು ಸಣ್ಣ ಗುಡಿಸಲು ಇದೆ. ಅಂದಂದಿನ ತುತ್ತು ತಿನ್ನಲು ಕಸುಬು ಇದೆ. ಏಕೈಕ ಮಗ ಸರಕಾರಿ ಶಾಲೆಗೆ ಹೋಗುವ ಕಾರಣ ಶಿಕ್ಷಣ ಹೊರೆಯಾಗಿಲ್ಲ. ಇತ್ತೀಚೆಗಂತೂ ಎಡಪಕ್ಷಗಳ ಗೆಳೆಯರ ಸಂಪರ್ಕ ಬೆಳೆಸಿದ ಕಾರಣ ಹೋರಾಟ-ಪ್ರತಿಭಟನೆಯಲ್ಲಿ ತೊಡಗಿಸಿಕೊಳ್ಳುವುದು, ಮನವಿ ಸಲ್ಲಿಸಲು ಅಲೆದಾಡುವುದು ಮಾಮೂಲಿಯಾಗಿದೆ. ಯಾರಿಗೆ ಏನೇ ಅನ್ಯಾಯ ಆದರೂ ಕೂಡ ಅಲ್ಲಿ ಅದ್ರಾಮನ ಇಂಕ್ವಿಲಾಬ್ ಜಿಂದಾಬಾದ್ ಧ್ವನಿ ಮೊಳಗುತ್ತದೆ. ಗ್ರಾಮ ಪಂಚಾಯತ್, ಪೊಲೀಸ್ ಠಾಣೆ ಹೀಗೆ ಸರಕಾರಿ ಕಚೇರಿ, ಖಾಸಗಿ ಸಂಸ್ಥೆಗಳ ಮುಂದೆ ಅದ್ರಾಮನ ಧ್ವನಿ ಮೊಳಗುತ್ತಲೇ ಇರುತ್ತದೆ.

ಊರಿನ ಬಹುತೇಕ ಜನರಿಗೆ ಅನ್ಯಾಯ ಆದಾಗ ತಕ್ಷಣ ನೆನಪಾಗುವುದು ಅದ್ರಾಮ. ಅವನು ಇಂಕ್ವಿಲಾಬ್ ಕೂಗಿದರೆ ನ್ಯಾಯ ಸಿಕ್ಕಂತೆ ಎಂಬ ಭಾವನೆ ಎಲ್ಲರಲ್ಲೂ ಇದೆ. ಕೆಲವರು ನ್ಯಾಯ ಸಿಕ್ಕಿದ ಬಳಿಕವೂ ಅದ್ರಾಮನನ್ನು ನೆನಪಿಸಿಕೊಂಡರೆ, ಇನ್ನು ಕೆಲವರು ಏನೇನೂ ಉಪಕಾರ ಆಗಿಲ್ಲ ಎಂಬಂತೆ ಮರೆತುಬಿಡುವುದೂ ಇತ್ತು. ಹಾಗಂತ ಅದ್ರಾಮ ಯಾವುದನ್ನೂ ಮನಸ್ಸಿಗೆ ಹಚ್ಚಿಕೊಳ್ಳುವುದಿಲ್ಲ. ಹೋರಾಟದಿಂದಲೇ ತನ್ನ ಗುರಿ ತಲುಪಬಹುದು ಎಂದು ಚೆನ್ನಾಗಿ ತಿಳಿದುಕೊಂಡಿದ್ದ. ಇತ್ತೀಚಿನ ದಿನಗಳಲ್ಲಂತೂ ಅದ್ರಾಮ ತನ್ನನ್ನು ಕಮ್ಯುನಿಸ್ಟ್ ಅದ್ರಾಮ ಎಂದು ಗುರುತಿಸಿಕೊಳ್ಳಲು ಹೆಚ್ಚು ಇಷ್ಟಪಡುತ್ತಿದ್ದ. ಕೇವಲ ಅದ್ರಾಮ ಎಂದು ಹೇಳಿದರೆ ಯಾರಿಗೂ ಊರಲ್ಲಿ ಗುರುತು ಸಿಗುವುದಿಲ್ಲ. ಕಮ್ಯುನಿಸ್ಟ್ ಅದ್ರಾಮ ಎಂದರೆ ಈಗ ವರ್ಲ್ಡ್ ಫೇಮಸ್ ಎಂಬಂತಾಗಿದೆ.

ಅದ್ರಾಮನ ಹೆಂಡತಿ ಬೀಪಾತುಮ್ಮ ಕೂಡ ಹಸುವಿನಂತಹ ಸ್ವಭಾವದ ಮಹಿಳೆ. ಆಕೆಗೆ ಗಂಡ-ಮಗ-ಮನೆಯೇ ಸರ್ವಸ್ವ. ನಡುಬಗ್ಗಿಸಿ ಪ್ರತೀ ದಿನ ಸಾವಿರ ಬೀಡಿ ಕಟ್ಟುತ್ತಿದ್ದ ಆಕೆ ಇತರರ ಉಸಾಬರಿಗೆ ಹೋದವಳಲ್ಲ. ಗಂಡನ ಹೋರಾಟದ ಬಗ್ಗೆ ಅಪಸ್ವರ ಎತ್ತಿದವಳೂ ಅಲ್ಲ.

ಅದ್ರಾಮನ 8 ವರ್ಷ ಪ್ರಾಯದ ಮಗ ಶಮೀರ್ ಕೂಡ ಸ್ಥಳೀಯ ಶಾಲೆಯ ಮೂರನೇ ತರಗತಿಯಲ್ಲಿ ಓದುತ್ತಿದ್ದ. ತಂದೆ-ತಾಯಿಯ ಏಕೈಕ ಮಗನಾದ ಕಾರಣ ಇಬ್ಬರಿಗೂ ಅವನೆಂದರೆ ಪ್ರೀತಿ. ಅಂತಹ ಮಗ ಅದೊಂದು ದಿನ ಪಾವೂರು ಗಾಡಿಗದ್ದೆಯ ನೇತ್ರಾವತಿ ನದಿಯನ್ನು ದೋಣಿ ಮೂಲಕ ದಾಟುವಾಗ ನಡೆದ ದುರ್ಘಟನೆಯಲ್ಲಿ ನೀರುಪಾಲಾಗಿದ್ದ. ಅವನೊಂದಿಗಿದ್ದ ಇತರ ಇಬ್ಬರ ಮೃತದೇಹ ಮರುದಿನ ನದಿಯ ಬದಿಯಲ್ಲೇ ಪತ್ತೆಯಾಗಿತ್ತು. ಆದರೆ ಶಮೀರ್ ಎಲ್ಲಿದ್ದಾನೆ, ಏನಾದ ಎಂಬುದು ತಿಳಿಯಲೇ ಇಲ್ಲ. ಜೀವರಕ್ಷಕ ತಂಡ ಸಹಿತ ಸಾರ್ವಜನಿಕರು-ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಹುಡುಕುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಲಿಲ್ಲ. ಮೂರು ದಿನ ಹುಡುಕಾಡಿ ಸುಸ್ತಾದ ತಂಡ ಬಳಿಕ ಹುಡುಕುವ ಪ್ರಯತ್ನ ಕೈ ಬಿಟ್ಟಿತು. ಒಂದೋ ಕೆಸರಲ್ಲಿ ಹೂತಿರಬಹುದು ಅಥವಾ ಅರಬಿ ಕಡಲು ಸೇರಿರಬಹುದು ಎಂದು ಎಲ್ಲರೂ ಬಾವಿಸಿದರು. ತನ್ನ ಏಕೈಕ ಮಗ ಏನಾದ, ಎಲ್ಲಿಗೆ ಹೋದ ಎಂದು ತಿಳಿಯಲಾಗದೆ ಬೀಫಾತುಮ್ಮ ಹಾಸಿಗೆ ಹಿಡಿದರಲ್ಲದೆ, ತನ್ನ ಹಿರಿಯರು ಯಾವತ್ತೋ ಮಾಡಿದ ತಪ್ಪಿಗೆ ಮಗನನ್ನು ಅಲ್ಲಾಹು ಈ ಮೂಲಕ ತನ್ನತ್ತ ಕರೆಸಿಕೊಂಡನೇ ಎಂದು ತನ್ನಲ್ಲೇ ಪ್ರಶ್ನಿಸಿ ದು:ಖಿಸುತ್ತಿದ್ದಳು.

ಮೃತಪಟ್ಟಿದ್ದಾನೆ ಎಂದು ಖಚಿತಗೊಂಡಿದ್ದರೂ ದಫನ ಮಾಡಲಾಗದ ನೋವು ಒಂದೆಡೆಯಾದರೆ, ಆ ಬಳಿಕದ ವಿಧಿ ವಿಧಾನಗಳನ್ನು ಮಾಡದೆ ತಾನು ತಪ್ಪೆಸೆಗುತ್ತಿದ್ದೇನೆಯೇ? ಎಂದು ಮನಸ್ಸು ಪ್ರಶ್ನಿಸಿದ್ದೂ ಇದೆ. ಅಷ್ಟೇ ಅಲ್ಲ, ಮೃತಪಟ್ಟಿದ್ದೇನೆ ಎಂದು ಬಾವಿಸಿ ಆ ವಿಧಿ ವಿಧಾನವನ್ನು ಮಾಡಿದರೆ ಊರವರು ಏನೆಂದುಕೊಂಡಾರು ಎಂದು ಬಾವಿಸಿ ಅದ್ರಾಮ ಖಿನ್ನತೆಗೊಳಗಾದ.

ದುರಂತದಲ್ಲಿ ಮಡಿದ ಇಬ್ಬರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ಸಿಕ್ಕಾಗ ತನಗೆ ಹಣ ಮುಖ್ಯ ಅಲ್ಲ, ಮಗನ ಅಸ್ತಿತ್ವದ ಪ್ರಶ್ನೆ ಮುಖ್ಯ ಎಂದು ಬಗೆದು ಸೂಕ್ತ ದೃಢೀಕರಣ ಪತ್ರ ಪಡೆಯಲು ಸರಕಾರಿ ಕಚೇರಿ, ಅಧಿಕಾರಿಗಳು, ಜನಪ್ರತಿನಿಧಿಗಳು, ಮಂತ್ರಿ-ಮುಖ್ಯಮಂತ್ರಿಯನ್ನು ಕಂಡೂ ಮನವಿ ಸಲ್ಲಿಸಿದರೂ ಪ್ರಯೋಜನ ಆಗದ್ದನ್ನು ಕಂಡು ಹತಾಶನಾಗಿದ್ದ.

ಇದೀಗ ಅಂತಿಮವಾಗಿ ಸಾರ್ವಜನಿಕವಾಗಿ ನೇಣು ಹಾಕಿಕೊಳ್ಳುವೆ ಎಂದು ಬೆದರಿಕೆಯ ತಂತ್ರ ಪ್ರಯೋಗಿಸಿ ಸರಕಾರದ ಗಮನ ಸೆಳೆಯಲು ಪ್ರಯತ್ನ ಮಾಡಿದರೂ ಸರಿಯಾದ ಸ್ಪಂದನೆ ಸಿಗದ ಕಾರಣ ಹತಾಶೆಯಿಂದ ನೊಂದು ವೌನಕ್ಕೆ ಶರಣಾದ.

ಶಾಸಕರ ಭರವಸೆಯಂತೆ ಅಧಿಕಾರಿಗಳು ಮರು ದಿನವೇ ಮಗನ ಅಸ್ತಿತ್ವಕ್ಕೆ ಸಂಬಂಧಿಸಿದ ದೃಢೀಕರಣದ ಪ್ರಮಾಣ ಪತ್ರವನ್ನು ಧರಣಿ ನಿರತ ಸ್ಥಳಕ್ಕೆ ತಂದು ಕೊಟ್ಟರೂ ಅದ್ರಾಮ ವೌನ ಮುರಿಯಲಿಲ್ಲ. ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಬಂದ ಪತ್ರಕರ್ತರ ಪ್ರಶ್ನೆಗೂ ಅದ್ರಾಮ ಉತ್ತರಿಸಲಿಲ್ಲ.

ತುಟಿ ಪಿಟಿಕೆತ್ತದೆ ಅದ್ರಾಮ ವೌನವಾಗಿಯೇ ಕುಳಿತ. ಪ್ರತಿಭಟನೆ ಕೈ ಬಿಡುವಂತೆ ಅಧಿಕಾರಿಗಳು ಮನವಿ ಮಾಡಿದರೂ ಅದಕ್ಕೂ ತನಗೂ ಸಂಬಂಧವೇ ಇಲ್ಲ ಎಂಬಂತೆ ವೌನ ಮುಂದುವರಿಸಿದ.

ಸೂರ್ಯ ಮುಳುಗುವವರೆಗೂ ಅದ್ರಾಮ ಕುಳಿತಲ್ಲಿಂದ ಕದಲಲಿಲ್ಲ. ಪತ್ರಕರ್ತರು ಲೈವ್‌ನಲ್ಲಿ ತಲ್ಲೀನರಾದರೆ ಅಧಿಕಾರಿಗಳು ಅಲ್ಲಿಂದ ಕಾಲ್ತೆಗೆದರು. ಅಲೆದಾಟದ ಅದ್ರಾಮ ವೌನಕ್ಕೆ ಶರಣಾಗಿ ಶೂನ್ಯದತ್ತ ದೃಷ್ಟಿ ಹಾಯಿಸಿದ.

Writer - ಹಂಝ ಮಲಾರ್

contributor

Editor - ಹಂಝ ಮಲಾರ್

contributor

Similar News