ಸ್ವದೇಶಿ ಗುಲಾಮಗಿರಿ ವಿರುದ್ಧ ಸ್ವಾಭಿಮಾನದ ಯುದ್ಧ

Update: 2020-01-04 19:09 GMT

ಇಂದು ಕೋರೆಗಾಂವ್ ವಿಜಯೋತ್ಸವ ನೆನೆವಾಗ; 1818, ಜನವರಿ 1ರಂದು ಬ್ರಿಟಿಷರ ಪರವಾಗಿ ಮಹಾರ್ ಸೈನಿಕರು ಹೋರಾಟ ಮಾಡಿ ಗೆದ್ದರಾದರೂ, ನಿಜವಾಗಿ ಜಾತಿವಾದಿ ಹಿಂದೂಗಳ ವಿರುದ್ಧ ಗೆದ್ದ ವಿಜಯೋತ್ಸವವಾಗಿದೆ. ಆದರೆ ದಲಿತರಿಗೆ ಇದು ತಾತ್ಕಾಲಿಕ ವಿಜಯೋತ್ಸವ. ಇಂದಿನ ಪ್ರಜಾತಂತ್ರ ವ್ಯವಸ್ಥೆಯಲ್ಲೂ ನವ ಅಸ್ಪಶ್ಯತೆ ಹಾಗೂ ನವಜಾತೀವಾದ ಎಲ್ಲ ಕ್ಷೇತ್ರಗಳನ್ನು ವ್ಯಾಪಿಸಿ ಅಸಮಾನತೆ ಸಾರುತ್ತಿರುವಾಗ, ಅಸಮಾನತೆ ಕೊನೆಗಾಣಿಸುವವರೆಗೂ ಈ ಸಾತ್ವಿಕ ಯುದ್ಧ ನಿರಂತರವಾದುದು.

ಜನವರಿ 1, ಜಗತ್ತು ಹೊಸ ವರ್ಷದಲ್ಲಿ ಸಂಭ್ರಮಿಸುತ್ತದೆ. ಈ ದಿನ ಭಾರತದ ಇತಿಹಾಸದಲ್ಲಿ ಅದರಲ್ಲೂ ಅಸ್ಪಶ್ಯ ಸಮುದಾಯದ ಚರಿತೆಯಲ್ಲಿ ಮರೆಯಲಾರದ ದಿನ. ಇದೇ ನೆಲದ ಸ್ವದೇಶಿ ಗುಲಾಮಗಿರಿ ವಿರುದ್ಧ ಸ್ವಾಭಿಮಾನಿ ದಲಿತ ಸೈನಿಕರು ಯುದ್ಧ ಮಾಡಿ ಗೆದ್ದ ದಿನ.

1818, ಜನವರಿ 1ರಂದು ಇಂದಿನ ಪುಣೆ ಜಿಲ್ಲೆಯ ಶಿರೂರ ತಾಲೂಕಿಗೆ ಸೇರಿದ ಕೋರೆಗಾಂವ್ ಎಂಬ ಸ್ಥಳದಲ್ಲಿ, ಇಂದಿಗೂ ಹರಿಯುತ್ತಿರುವ ಭೀಮಾನದಿಯ ದಂಡೆಯಲ್ಲಿ ಈ ಯುದ್ಧ ನಡೆದಿತ್ತು. ಮಹಾರ್ ಸಮುದಾಯದ 500 ಸೈನಿಕರು ದಣಿವರಿಯದೆ ಹಸಿವು ಬಾಯಾರಿಕೆಗಳ ಕಡೆಗಣಿಸಿ ಸತತ ಹನ್ನೆರಡು ಗಂಟೆಗಳ ಕಾಲ ಹೋರಾಡಿ ಪೇಶ್ವೆಗಳಿಗೆ ಸಂಬಂಧಿಸಿದ ಸುಮಾರು 25,000 ಸೈನಿಕರನ್ನು ಸದೆಬಡಿದು ಗರ್ವಭಂಗ ಮಾಡಿದರು. ಈ ಯುದ್ಧವನ್ನು ಭೀಮಾ ಕೋರೆಗಾಂವ್ ವಿಜಯೋತ್ಸವ ಎಂದು ಚರಿತ್ರೆಯಲ್ಲಿ ಗುರುತಿಸಲಾಗಿದೆ. ಇತಿಹಾಸದ ಪುಟಗಳಲ್ಲಿ ಹುದುಗಿಹೋಗಿದ್ದ ಈ ಘಟನೆಯನ್ನು ಹೆಕ್ಕಿ ತೆಗೆದವರು ಬಾಬಾಸಾಹೇಬ್ ಅಂಬೇಡ್ಕರ್.

 ಪೇಶ್ವೆಗಳೆಂಬ

ಜಾತಿ ಹಿಂದೂಗಳು

ಪೇಶ್ವೆಗಳ ಆಳ್ವಿಕೆ ಅಸಮಾನತೆ ಹಾಗೂ ಅಮಾನವೀಯತೆಯನ್ನು ಸಮರ್ಥಿಸುವ ಮನುಧರ್ಮಶಾಸ್ತ್ರವನ್ನು ಆಧರಿಸಿತ್ತು. ಎರಡನೆಯ ಬಾಜಿರಾಯ ಹಿಂದುತ್ವದ ಕಟ್ಟಾ ಅನುಯಾಯಿ ಆಗಿದ್ದನು. ಈತನ ಆಳ್ವಿಕೆಯಲ್ಲಿ ಜಾತೀಯತೆ ಹಾಗೂ ಅಸ್ಪಶ್ಯತಾ ಆಚರಣೆ ಘನಘೋರವಾಗಿತ್ತು. ಅಸ್ಪರೆಂದು ಪರಿಗಣಿಸಲ್ಪಟ್ಟ ಸಮುದಾಯದವರುತಮ್ಮ ಹೆಗಲ ಮೇಲೆ ಕಪ್ಪು ಕಂಬಳಿ ಹೊದ್ದು, ಉಗುಳಲು ಕೊರಳಲ್ಲಿ ಒಂದು ಮಡಿಕೆಯನ್ನು ನೇತುಹಾಕಿಕೊಂಡು ಜೊತೆಗೆ ತಾವು ನಡೆವ ಗುರುತನ್ನು ಅಳಿಸಿಹಾಕಲು ಸೊಂಟಕ್ಕೊಂದು ಪೊರಕೆಯನ್ನು ಕಟ್ಟಿಕೊಳ್ಳಬೇಕಿತ್ತು. ಸಾಲದೆಂಬಂತೆ ಕೈಯಲ್ಲೊಂದು ಕೋಲು ಹಿಡಿದು ತಾವು ನಡೆವಾಗ ಸಂಭೋಳಿ, ಸಂಭೋಳಿ ಎಂದು ಕೂಗುತ್ತಾ ಓಡಾಡಬೇಕಿತ್ತು. ಜೊತೆಗೆ ಸತ್ತ ಪ್ರಾಣಿಗಳನ್ನು ಎಳೆದು ಹಾಕುವ, ಪ್ರಬಲ ಜಾತಿಗಳಿಗೆ ಬಿಟ್ಟಿ ಚಾಕರಿಮಾಡುವ ಕಾಯಕ. ಸಾರ್ವಜನಿಕ ಸ್ಥಳಗಳಲ್ಲಿ ಅಸ್ಪರಿಗೆ ಪ್ರವೇಶಾವಕಾಶ ಇರಲಿಲ್ಲ. ಹೀಗೆ ಪ್ರಾಣಿಗಳಿಗಿಂತಲೂ ಕಡೆಯಾಗಿ ಬದುಕು ನಡೆಸುವ ನೀತಿ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದವರು ಈ ಪೇಶ್ವೆಗಳೆ.

  ಭಾರತದ ಎಲ್ಲಾ ಭಾಗಗಳನ್ನು ಬ್ರಿಟಿಷರು ಆಕ್ರಮಿಸಿಕೊಳ್ಳಲು ಹಪಹಪಿಸುತ್ತಿದ್ದರು. ತಮ್ಮಿಂದಿಗೆ ಹೊಂದಾಣಿಕೆ ಮಾಡಿಕೊಂಡ ರಾಜರಿಗೆ ತಮ್ಮ ಸಹಾಯಹಸ್ತ ಚಾಚುತ್ತಿದ್ದರು. ಆದರೆ ತಮ್ಮನ್ನು ವಿರೋಧಿಸುವ ರಾಜರನ್ನು ಮಾತ್ರ ತಂತ್ರ ಬಳಸಿ ಬಗ್ಗು ಬಡಿದು ಅಲ್ಲಿ ತಮ್ಮ ಆಡಳಿತ ಸ್ಥಾಪಿಸುತ್ತಿದ್ದರು. ಇದಕ್ಕೆ ಭಾರತೀಯ ಸಮಾಜದಲ್ಲಿ ಹಾಸುಹೊಕ್ಕಾಗಿದ್ದ ಜಾತಿ ಶ್ರೇಣೀರಣದ ವಾತಾವರಣ ಅವರಿಗೆ ಅನುಕೂಲಕರವಾಗಿತ್ತು. ಪೇಶ್ವೆಗಳ ವಿರುದ್ಧವು ಯುದ್ಧ ಸಾರಿ ತಮ್ಮ ಆಧಿಪತ್ಯ ಸ್ಥಾಪಿಸಲು ಹೊಂಚು ಹಾಕುತ್ತಿದ್ದರು. ಈ ವಿಷಯ ಪೇಶ್ವೆಗಳ ಸೈನ್ಯದಲ್ಲಿದ್ದ ಮಹಾರ್ ಸೈನಿಕರಿಗೆ ತಿಳಿಯಿತು. ಸೈನಿಕರಾಗಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದರೂ ಪೇಶ್ವೆಗಳಿಂದ ಜಾತಿ ಕಾರಣಕ್ಕಾಗಿ ಅಪಮಾನ ಹಾಗೂ ಕಡೆಗಣನೆಗೆ ಒಳಗಾಗಿದ್ದ ಈ ಸೈನಿಕರನ್ನು ತಮಗೆ ಸಹಕಾರ ನೀಡುವಂತೆ ಬ್ರಿಟಿಷರು ಆಹ್ವಾನಿಸಿದ್ದರು. ಆದರೆ ಪೇಶ್ವೆಗಳ ಸೈನ್ಯದೊಳಗಿದ್ದು ಬ್ರಿಟಿಷರ ಪರವಾಗಿ ಹೋರಾಟ ಮಾಡುವುದು ದ್ರೋಹವೆಂದು ಅಸ್ಪಶ್ಯ ಸೈನಿಕರು ಪರಿಗಣಿಸಿದರು. ತಮ್ಮದೇ ನೆಲದ ರಾಜನ ವಿರುದ್ಧ ವಿದೇಶಿಯರಾದ ಬ್ರಿಟಿಷರು ಯುದ್ಧ ನಡೆಸುವುದನ್ನು ಸಹಿಸದಾದರು. ಪೇಶ್ವೆ ರಾಜ ಎರಡನೇ ಬಾಜಿರಾಯನಿಗೆ ಈ ವಿಷಯ ತಿಳಿಸಬಯಸಿದರು.

ಮಹಾರ್ ಹಿನ್ನೆಲೆಯ ಪ್ರಮುಖ ಸೇನಾಪತಿ ಸಿದನಾಕನ ಜೊತೆಗೆ ಇನ್ನೂ ಕೆಲವರು ಬಾಜಿರಾಯನನ್ನು ಭೇಟಿಯಾಗಲು ಬಂದರು. ಬಂದವರು ತಮ್ಮ ಸಮುದಾಯದ ಮೇಲೆ ಹೇರಲಾಗಿರುವ ಅಸ್ಪಶ್ಯತಾ ಆಚರಣೆ ಹಾಗೂ ಸೈನಿಕರಾಗಿರುವ ತಮ್ಮನ್ನು ಜಾತಿ ಕಾರಣದಿಂದ ದಮನಿಸುತ್ತಿರುವುದನ್ನು ತಡೆಗಟ್ಟಬೇಕೆಂದು ಸಹ ಬಾಜಿರಾಯನಿಗೆ ಹೇಳಲು ನಿರ್ಧರಿಸಿದ್ದರು. ಆದರೆ ಅರಮನೆ ತಲುಪಿದ ಅಸ್ಪಶ್ಯ ಸೈನಿಕರನ್ನು ನೋಡಿದೊಡನೆ ಬಾಜಿರಾಯನ ರಕ್ತ ಕುದಿಯತೊಡಗಿ ಮುಖ ವಿಕಾರಗೊಂಡಿತು. ಕೋಪಗೊಂಡ ಆತ ಬ್ರಿಟಿಷರು ತನ್ನ ಪ್ರಾಂತ್ಯದ ಮೇಲೆ ಆಕ್ರಮಣ ಮಾಡಬಹುದೆಂಬ ವಿಷಯಕ್ಕಿಂತ ಅಸ್ಪಶ್ಯರು ಸಮಾನತೆ ಕೇಳುವುದನ್ನು ಸಹಿಸದಾದ.

 ಹಿಂದೂಧರ್ಮದ ಶಾಸ್ತ್ರ ಗ್ರಂಥಗಳೇನು ಹೇಳುತ್ತವೆ ಅದರ ಆಚರಣೆಯೇ ತನಗೆ ಮುಖ್ಯ. ಶಾಸ್ತ್ರಧಾರಿತ ಸಾಂಪ್ರದಾಯಗಳನ್ನು ಮೀರಿದವರಿಗೆ ಕಠಿಣ ಶಿಕ್ಷೆ ನೀಡಲಾಗುವುದೆಂದು ಕೂಗಾಡಿದ. ಮುಂದೆ ಮಾತಾಡಲುಸಹ ಅವಕಾಶ ಕೊಡದೆ ಅಸ್ಪಶ್ಯ ಸೈನಿಕರನ್ನು ತನ್ನ ಅರಮನೆ ಸೈನಿಕರಿಂದ ಹೊರದಬ್ಬಿದ. ಬಾಜಿರಾಯನ ವರ್ತನೆ ಹಾಗೂ ಮಾತು ಇವರನ್ನು ಘಾಸಿಗೊಳಿಸಿತು. ಮನಸ್ಸಿನಲಿ ಬಂಡಾಯ ಚಿಗುರೊಡೆಯಿತು.

ಮರೆಯಬಾರದ ಶಿವಾಜಿ

 ಪೇಶ್ವೆಗಳಿಗಿಂತ ಹಿಂದೆ ಆಳ್ವಿಕೆ ಮಾಡಿದ ಶಿವಾಜಿ ಎಂದೂ ಜಾತಿವಾದಿಯಾಗಿರಲಿಲ್ಲ. ತನ್ನ ಸೈನ್ಯದಲ್ಲಿ ಮಹಾರ್, ಮಾಂಗ್ ಅಸ್ಪಶ್ಯ ಸಮುದಾಯಗಳಿಗೆ ಅವಕಾಶ ನೀಡಿದ. ಜೊತೆಗೆ ಕುಣಬಿಗಳು, ಕುರುಬ, ಕೋಳಿ, ಭಂಡಾರಿ, ಪ್ರಭು, ರಾಮೋಶಿ, ನಾವಲಿಗೆ ಮುಂತಾದ ಸಮುದಾಯದವರಿಗೆ ಅಲ್ಲದೆ ಮುಸಲ್ಮಾನರಿಗೂ ಅವಕಾಶವನ್ನು ನೀಡಿದ್ದ ಹಿಂದೂ ಶಾಸ್ತ್ರಗ್ರಂಥಗಳ ಪ್ರಕಾರ ಶೂದ್ರ ಹಾಗೂ ಅತಿಶೂದ್ರರು ಅಸ್ತ್ರಗಳನ್ನು ಹಿಡಿಯುವುದು ನಿಶಿದ್ಧ. ಆದರೆ ಇಂಥ ನಂಬಿಕೆಗಳನ್ನು ಶಿವಾಜಿ ಮುರಿದು ಹಾಕಿದ್ದ.

ಮುಂದೆ ಶಿವಾಜಿಯ ವಂಶಸ್ಥರನ್ನು ಸದೆಬಡಿದು ಸಂಸ್ಥಾನವನ್ನು ತಮ್ಮ ಕೈವಶ ಮಾಡಿಕೊಂಡವರು ಪೇಶ್ವೆಗಳು. ಈ ಪೇಶ್ವೆಗಳು ಆಡಳಿತಕ್ಕೆ ಬಂದಕೂಡಲೆ ಜಾತಿಹಿಂದುತ್ವದ ವಿಕಾರಗಳು ಅನಾವರಣಗೊಳ್ಳತೊಡಗಿದವು. ಶಿವಾಜಿ ಆಳ್ವಿಕೆ ಕಾಲದಲ್ಲಿ ಸೈನ್ಯಕ್ಕೆ ಸೇರಲ್ಪಟ್ಟಿದ್ದ ಅಸ್ಪಶ್ಯರು ಪೇಶ್ವೆಗಳ ಆಳ್ವಿಕೆಯಲ್ಲು ಮುಂದುವರೆದಿದ್ದರು. ಆದರೆ ಇವರನ್ನು ಅತ್ಯಂತ ಹೀನಾಯವಾಗಿ ಕಾಣಲಾಗುತ್ತಿತ್ತು. ಅಪಮಾನಕ್ಕೆ ತುತ್ತಾದರೂ ಇಂದಲ್ಲ ನಾಳೆ ಸರಿಯಾಗುತ್ತದೆಂಬ ಭರವಸೆ ಹಾಗೂ ಬದುಕಿಗೆ ಆಸರೆಯಾಗಿರುವ ಕೆಲಸ ಕಳೆದುಕೊಳ್ಳುವೆನೆಂಬ ಆತಂಕದಲ್ಲಿ ಅಸ್ಪಶ್ಯ ಸೈನಿಕರು ಜೀವಿಸುತ್ತಿದ್ದರು. ಶಿವಾಜಿಯ ಕಾಲದಲ್ಲಿ ಕೊಂಚ ಸಮಾನತೆಯನ್ನು ಅನುಭವಿಸಿದ್ದ ಇವರಿಗೆ ತಮ್ಮನ್ನು ಕಡೆಗಣಿಸಿ ಅಪಮಾನಿಸಿದಪೇಶ್ವೆ ಎರಡನೇ ಬಾಜಿರಾಯ ದೊಡ್ಡ ಶತ್ರುವಾಗಿ ಕಾಣಿಸಿದ.

 ಯುದ್ಧಕ್ಕೆ ಸನ್ನದ್ಧ

ಮಹಾರ್ ಸೈನಿಕರು ಬ್ರಿಟಿಷರ ಆಕ್ರಮಣದ ಬಗೆಗೆ ತಿಳಿಸಿದ್ದ ಸುದ್ದಿಯ ಹಿನ್ನೆಲೆಯಲ್ಲಿ ಪೇಶ್ವೆ ತಾನೆ ಮುಂದಾಗಿ ಬ್ರಿಟಿಷರ ಮೇಲೆ ಆಕ್ರಮಣ ನಡೆಸಲು ನಿರ್ಧರಿಸಿದ. ಅದರಲ್ಲೂ ರಾತ್ರಿ ಹೊತ್ತು ಹಠಾತ್ ದಾಳಿ ನಡೆಸಲು ತೀರ್ಮಾನಿಸಿದ. ಇದಕ್ಕಾಗಿ ಇಪ್ಪತ್ತು ಸಾವಿರ ಕುದುರೆ ಸವಾರರು, ಎಂಟು ಸಾವಿರ ಕಾಲುದಳ, ಇವರಲ್ಲಿ ಕೆಲವರು ಬಂದೂಕುಧಾರಿಗಳು ಹೀಗೆ ಒಟ್ಟು 25,000 ಸೈನಿಕರನ್ನು ಸಜ್ಜುಗೊಳಿಸಿದ. ಹಿಂದೆ ತನ್ನ ತಪ್ಪಿನಿಂದಲೇ ಪುಣೆಯನ್ನು ಕಳೆದುಕೊಂಡಿದ್ದ ಪೇಶ್ವೆ ಬಾಜಿರಾಯ ಈ ಯುದ್ಧದಲ್ಲಿ ಅದನ್ನೂ ತನ್ನ ಕೈವಶ ಮಾಡಿಕೊಳ್ಳುವ ಕನಸು ಕಂಡ.

 ಅಪಮಾನಕ್ಕೆ ಪ್ರತೀಕಾರ

ಪೇಶ್ವೆ ಸೈನಿಕರು ಭೀಮಾ ನದಿದಡದಲ್ಲಿ ಯುದ್ಧಕ್ಕೆ ಸಜ್ಜಾಗಿರುವ ವಿಷಯ ಬ್ರಿಟಿಷರಿಗೆ ತಿಳಿಯಿತು. ಬ್ರಿಟಿಷ್ ಸೈನ್ಯ ನೋಡಿಕೊಳ್ಳುತ್ತಿದ್ದ ಲೆಫ್ಟಿನೆಂಟ್ ಕರ್ನಲ್ ಫಿಲ್ಸ್ ಮನ್ ಗಾಬರಿ ಬಿದ್ದು ಇದಕ್ಕಾಗಿ ತಂತ್ರ ರೂಪಿಸಿದ. ಪೇಶ್ವೆಗಳ ಅಪಮಾನದಿಂದ ರೋಸಿಹೋಗಿದ್ದ ಮಹಾರ್ ಸೈನ್ಯದ ನಾಯಕ ಸಿದನಾಕನನ್ನು ಸಂಪರ್ಕಿಸಿದ. ಸಿದನಾಕನು ತನ್ನ ಆತ್ಮೀಯ ಸಂಗಡಿಗರಾದ ರತನಾಕ, ಜತನಾಕ, ಭೀಕನಾಕರ ಜೊತೆ ಮಾತಾಡಿದ. ಅಸ್ಪಶ್ಯತೆ ಮತ್ತು ಜಾತಿ ಪದ್ಧತಿಯ ಆಚರಣೆಗೆ ಯಾವ ಕಿಮ್ಮತ್ತನ್ನು ಕೊಡದ ಬ್ರಿಟಿಷರ ನಡವಳಿಕೆ ಹಾಗೂ ಹೆಜ್ಜೆಹೆಜ್ಜೆಗೂ ಜಾತಿ ಕಾರಣಕ್ಕಾಗಿ ತಮ್ಮನ್ನು ನಾಯಿಬೆಕ್ಕುಗಳಿಗಿಂತಲೂ ಕಡೆಯಾಗಿ ಕಾಣುವ ಜಾತಿ ಹಿಂದೂ ಪೇಶ್ವೆಗಳ ನಡವಳಿಕೆ; ಈ ಎರಡರ ಬಗೆಗೂ ಪರಸ್ಪರ ಚರ್ಚಿಸಿದ ಇವರಿಗೆ ಬ್ರಿಟಿಷರ ನಡವಳಿಕೆಯೇ ತಕ್ಷಣಕ್ಕೆ ಇಷ್ಟವಾಯಿತು.

ಜಾತಿ ಹೊಂಡದಲಿ ಬಿದ್ದು ಜೀವನಪರ್ಯಂತ ಸತ್ತಂತೆ ಬದುಕುವುದಕ್ಕಿಂತ, ಜಾತಿವಾದಿಗಳ ವಿರುದ್ಧ ಬ್ರಿಟಿಷರ ಬೆಂಬಲದಿಂದ ಹೋರಾಡುವುದೇ ಲೇಸೆಂದು ನಿರ್ಧರಿಸಿದರು. ತಾವು ಬ್ರಿಟಿಷರ ಪರವಾಗಿ ಹೋರಾಡುತ್ತಿದ್ದೇವೆ ಎನ್ನುವುದಕ್ಕಿಂತ ತಮ್ಮನ್ನು ಮನುಷ್ಯರನ್ನಾಗಿ ಕಾಣದ, ಮುಖ್ಯವಾಗಿ ಹಿಂದುತ್ವದ ಪಿತ್ತ ನೆತ್ತಿಗೇರಿಸಿಕೊಂಡ ಧೂರ್ತರ ವಿರುದ್ಧದ ಹೋರಾಟವಿದು ಎಂಬ ಭಾವನೆ ಇವರಲ್ಲಿ ಮಡುಗಟ್ಟಿತ್ತು. ಜಾತಿವಾದಿಗಳನ್ನು ಕೊನೆಗಾಣಿಸಲು ಇದೇ ತಕ್ಕ ಸಮಯ ಎಂಬ ಸ್ಪಷ್ಟ ನಿಲುವಿನ ಜಿದ್ದು ಎಲ್ಲರ ಎದೆಯೊಳಗೆ ತುಂಬಿಕೊಂಡಿತ್ತು.

ಲೆಫ್ಟಿನೆಂಟ್ ಕರ್ನಲ್ ಫಿಲ್ಸ್‌ಮನ್ ಮಾರ್ಗದರ್ಶನದಲ್ಲಿ ಕ್ಯಾಪ್ಟನ್ ಎಫ್. ಎಫ್. ಸ್ಟಂಟನ್ ಹಾಗೂ ಮಹಾರ್ ಸೈನ್ಯದ ಮುಖಂಡ ಸಿದನಾಕನ ನೇತೃತ್ವದಲ್ಲಿ 500 ಮಹಾರ್ ಸೈನಿಕರು ಯುದ್ಧಕ್ಕೆ ಸಿದ್ಧರಾದರು. ಜೊತೆಗೆ 250 ಕುದುರೆಯಾಳುಗಳು, 24 ಯುರೋಪಿಯನ್ನರು 1817, ಡಿಸೆಂಬರ್ 31ರ ರಾತ್ರೋ ರಾತ್ರಿ ಶಿರೂರಿನಿಂದ ಹೊರಟು27 ಮೈಲಿ ನಡೆದು ಭೀಮಾ ನದಿಯ ದಡದ ಕೊರೆಗಾಂವ್ ತಲುಪಿದರು. ಜನವರಿ 1ರ ಬೆಳಿಗ್ಗೆ 9 ಗಂಟೆಗೆ ಯುದ್ಧ ಶುರುವಾಯಿತು. 500 ಜನರಿದ್ದ ಮಹಾರ್ ಸೈನಿಕರು, 25,000 ಪೇಶ್ವೆ ಸೈನಿಕರ ವಿರುದ್ಧ ತಮ್ಮ ಪ್ರಾಣವನ್ನು ಪಣವಿಟ್ಟು ಸ್ವಾಭಿಮಾನ ಹಾಗೂ ಕಿಚ್ಚಿನಿಂದ ಸತತ 12 ಗಂಟೆಗಳ ಕಾಲ ಹೋರಾಡಿ ಪೇಶ್ವೆಗಳೆಂಬ ಜಾತಿವಾದಿ ಹಿಂದೂಗಳ ವಿರುದ್ಧ ಶೌರ್ಯದಿಂದ ಗೆಲುವು ಸಾಧಿಸಿದರು. ಪೇಶ್ವೆಗಳ ಸೈನ್ಯ ಪಲಾಯನ ಮಾಡಿತು. ಈ ಯುದ್ಧದಲ್ಲಿ 22 ಮಹಾರ್ ಸೈನಿಕರು ಹುತಾತ್ಮರಾದರು. ಸುಮಾರು 205 ಯೋಧರು ಗಾಯಾಳುವಾದರು. ಜೊತೆಗೆ 16 ಮರಾಠರು, 8 ರಜಪೂತರು, ಮೂವರು ಬ್ರಿಟಿಷ್ ಅಧಿಕಾರಿಗಳು,ಇಬ್ಬರು ಮುಸಲ್ಮಾನರು ಮತ್ತು ಒಬ್ಬ ಕ್ರಿಶ್ಚಿಯನ್ ಸೈನಿಕರು ಹತರಾದರು. ಈ ಯುದ್ಧ ಸ್ವದೇಶಿ ಗುಲಾಮಗಿರಿ ವಿರುದ್ಧ ನಡೆಸಿದ ಸ್ವಾಭಿಮಾನಿ ಯುದ್ಧವಾಗಿತ್ತು. ಜಾತೀಯತೆ ವಿರುದ್ಧಸಾಧಿಸಿದ ದಿಗ್ವಿಜಯವಾಗಿತ್ತು. ಅಪಾರ ಸೈನಿಕರಿಂದ ಕೂಡಿದ ಪೇಶ್ವೆಗಳನ್ನು ಅತ್ಯಂತ ಕಡಿಮೆ ಸಂಖ್ಯೆಯ ಮಹಾರ್ ಸೈನಿಕರು ಸೋಲಿಸಿದ್ದು ಬ್ರಿಟಿಷರಿಗೆ ಅಚ್ಚರಿ ಮೂಡಿಸಿತು.

 ಈ ವಿಜಯದ ಸಂಕೇತವಾಗಿ 1821ರ ಮಾರ್ಚ್ 26ರಂದು ಕೋರೆಗಾಂವ್‌ನಲ್ಲಿ ಸ್ಮಾರಕ ಸ್ಥಾಪಿಸಲು ಅಡಿಗಲ್ಲು ಹಾಕಲಾಯಿತು. ಸ್ಥಂಭವೊಂದನ್ನು ಸ್ಥಾಪಿಸಿ ಅದರಲ್ಲಿ ಭೀಮಾ ಕೋರೆಗಾಂವ್ ಯುದ್ಧದ ವಿವರ ಹಾಗೂ ಹೋರಾಡಿ ಹುತಾತ್ಮರಾದವರ ಹೆಸರುಗಳನ್ನು ಕೆತ್ತಲಾಯಿತು. ಇದನ್ನು ಮಹಾರ್ ಸ್ತಂಭ, ವಿಜಯ ಸ್ತಂಭ, ಸ್ಮರಣ ಸ್ತಂಭ ಎನ್ನುವ ಹೆಸರುಗಳಿಂದ ಕರೆಯಲಾಗುತ್ತಿದೆ.

  

ಇದರ ಪರಿಣಾಮವಾಗಿ; ಬ್ರಿಟಿಷರು ಪ್ರಾಮಾಣಿಕತೆ ಹಾಗೂ ಬದ್ಧತೆಯಿಂದ ಹೋರಾಟ ಮಾಡುವ ಸೈನಿಕರನ್ನು ಒಳಗೊಂಡ ಮಹಾರ್ ರೆಜಿಮೆಂಟ್ ಸ್ಥಾಪಿಸಿದರು. ಇದರಿಂದ ಜಾತಿಕಾರಣಕ್ಕಾಗಿ ದಮನಿಸಲ್ಪಟ್ಟ ಅಸ್ಪಶ್ಯರಿಗೆ ಉದ್ಯೋಗದ ಅವಕಾಶಗಳು ದೊರೆತವು. ಸ್ವತಃ ಅಂಬೇಡ್ಕರ್ ಅವರ ತಂದೆ ಹಾಗೂ ತಾಯಿಯ ಸಂಬಂಧಿಗಳು ಮಹಾರ್ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸಿದವರಾಗಿದ್ದರು. ಜೊತೆಗೆ ಅಂದು ಸೇನೆಗೆ ಸೇರಿದವರಿಗೆ ಉಚಿತ ಶಿಕ್ಷಣ, ವಸತಿ ಸೌಲಭ್ಯಗಳನ್ನು ನೀಡಲಾಗುತ್ತಿತ್ತು. ಇದರ ಜೊತೆಗೆ ಅಸ್ಪಶ್ಯರಿಗೂ ಬ್ರಿಟಿಷರು ಹತ್ತಿಯ ಕಾರ್ಖಾನೆ, ರೈಲ್ವೆ ಟ್ರಾಕ್ ನಿರ್ಮಾಣ, ಕಟ್ಟಡ ನಿರ್ಮಾಣ, ಬಟ್ಟೆಗಿರಣಿ, ಮನೆಗೆಲಸ ಮುಂತಾದ ಉದ್ಯೋಗಗಳ ಅವಕಾಶ ನೀಡಿದರು. ಇದರಿಂದ ಅಸ್ಪಶ್ಯರು ಜಾತಿಕೇಂದ್ರಿತ ಪಾರಂಪರಿಕ ವೃತ್ತಿಯಿಂದ ಬಿಡುಗಡೆ ಪಡೆಯಲು ಸಾಧ್ಯವಾಯಿತು. ಕೀಳು ವೃತ್ತಿಗಳನ್ನೆ ಮಾಡಬೇಕೆಂಬ ನಿಯಮದಿಂದ ಅಸ್ಪಶ್ಯರು ಒಂದಿಷ್ಟು ವಿಮೋಚನೆ ಪಡೆದರು. ಇದರಿಂದ ಒಂದಿಷ್ಟು ಆರ್ಥಿಕ ಭದ್ರತೆ ಹಾಗೂ ಸ್ವಾವಲಂಬನೆ ಇವರಿಗೆ ಸಾಧ್ಯವಾಯಿತು. ಮುಂದೆ 1893ರ ವೇಳೆಗೆ ಬ್ರಿಟಿಷ್ ಸರಕಾರವು ಮಹಾರ್ ರೆಜಿಮೆಂಟನ್ನು ನಿಷೇಧಿಸುವ ಹಾಗೂ ಸೈನ್ಯಕ್ಕೆ ಅಸ್ಪಶ್ಯರನ್ನು ನೇಮಕ ಮಾಡಿಕೊಳ್ಳುವುದನ್ನು ನಿಲ್ಲಿಸುವ ಆದೇಶವನ್ನು ಹೊರಡಿಸಿತು. ಇದರ ವಿರುದ್ಧ ಅಂಬೇಡ್ಕರರ ತಂದೆ ರಾಮ್‌ಜಿ ಸಕ್ಪಾಲರು ಅಂದಿನ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಸಮಾಜ ಸುಧಾರಕ ಎಂ.ಜಿ. ರಾನಡೆ ಅವರ ಜೊತೆಗೂಡಿ ಬ್ರಿಟಿಷರಿಗೆ ಬೇಡಿಕೆ ಸಲ್ಲಿಸಿದ್ದರು. ಅಂಬೇಡ್ಕರರೆ ತಿಳಿಸುವಂತೆ ಸ್ವದೇಶಿ ಹಿಂದೂಗಳು ಜಾತಿಪದ್ಧತಿ ನಂಬಿ ನಮ್ಮದೇ ನೆಲದ ಕೆಲವು ಸಮುದಾಯವನ್ನು ಕೀಳೆಂದು, ಅಸ್ಪಶ್ಯರೆಂದು ಪರಿಗಣಿಸಿ ಅವರಿಗೆ ಯಾವೊಂದು ಅವಕಾಶವನ್ನು ನೀಡದೆ ನಿಕೃಷ್ಟವಾಗಿ ಕಾಣುತ್ತಿದ್ದ ಕಾರಣ ನೊಂದವರು ಬ್ರಿಟಿಷರ ಆಶ್ರಯ ಪಡೆಯುವುದು ಅಂದು ಅನಿವಾರ್ಯವಾಗಿತ್ತು. ಬ್ರಿಟಿಷರು ತಮ್ಮ ಅನುಕೂಲಕ್ಕಾಗಿ ತಮ್ಮನ್ನು ಆಶ್ರಯಿಸಿದವರನ್ನು ಬಳಸಿಕೊಂಡರು. ಎಂಬುದಾಗಿ ವ್ಯಾಖ್ಯಾನಿಸಿದ್ದಾರೆ. ಮುಖ್ಯವಾಗಿ ಸ್ವಾತಂತ್ರ ಭಾರತ ಹಾಗೂ ಪ್ರಜಾಸತ್ತೆಯ ಬಗೆಗೆ ಅಂಬೇಡ್ಕರ್ ವಿಶ್ವಾಸ ಇಟ್ಟವರು. ತಮ್ಮ ಬದುಕಿನುದ್ದಕ್ಕೂ ಇದರ ಅನುಷ್ಠಾನಕ್ಕಾಗಿ ಜಾತಿವಾದಿ ಹಿಂದೂಗಳ ವಿರುದ್ಧ ಜೊತೆಜೊತೆಗೆ ಬ್ರಿಟಿಷರ ವಿರುದ್ಧ ಅಹಿಂಸಾತ್ಮಕ ಸಮರ ಸಾರಿದರು. ಇಂದು ಕೋರೆಗಾಂವ್ ವಿಜಯೋತ್ಸವ ನೆನೆವಾಗ; 1818, ಜನವರಿ 1ರಂದು ಬ್ರಿಟಿಷರ ಪರವಾಗಿ ಮಹಾರ್ ಸೈನಿಕರು ಹೋರಾಟ ಮಾಡಿ ಗೆದ್ದರಾದರೂ, ನಿಜವಾಗಿ ಜಾತಿವಾದಿ ಹಿಂದೂಗಳ ವಿರುದ್ಧ ಗೆದ್ದ ವಿಜಯೋತ್ಸವವಾಗಿದೆ. ಆದರೆ ದಲಿತರಿಗೆ ಇದು ತಾತ್ಕಾಲಿಕ ವಿಜಯೋತ್ಸವ. ಇಂದಿನ ಪ್ರಜಾತಂತ್ರ ವ್ಯವಸ್ಥೆಯಲ್ಲೂ ನವ ಅಸ್ಪಶ್ಯತೆ ಹಾಗೂ ನವಜಾತೀವಾದ ಎಲ್ಲ ಕ್ಷೇತ್ರಗಳನ್ನು ವ್ಯಾಪಿಸಿ ಅಸಮಾನತೆ ಸಾರುತ್ತಿರುವಾಗ, ಅಸಮಾನತೆ ಕೊನೆಗಾಣಿಸುವವರೆಗೂ ಈ ಸಾತ್ವಿಕ ಯುದ್ಧ ನಿರಂತರವಾದುದು.

ವರ್ತಮಾನದಲ್ಲಿ ಕೋರೆಗಾಂವ್ ವಿಜಯೋತ್ಸವ ನೆನೆವಾಗ; ಈಗ ನಮ್ಮ ಶತ್ರು ಯಾರು? ಎಂದು ಗುರುತಿಸಿಕೊಳ್ಳಬೇಕಿದೆ. ಬ್ರಿಟಿಷರನ್ನು ಹೊರಗಟ್ಟಿ ಸ್ವದೇಶಿ ಆಳ್ವಿಕೆಗಾಗಿ ನಮ್ಮದೇಯಾದ ಸಂವಿಧಾನ ಅಳವಡಿಸಿಕೊಂಡಿದ್ದರೂ ಅದನ್ನು ಅನುಷ್ಠಾನಗೊಳಿಸಲು ಸಾಧ್ಯವಾಗುತ್ತಿಲ್ಲ. ಅಸಮಾನ ಶಿಕ್ಷಣ, ಪಂಕ್ತಿಭೇದ, ತಾರತಮ್ಯ ಬಿತ್ತುವ ಪಠ್ಯಗಳು, ಖಾಸಗೀಕರಣದ ಹುನ್ನಾರ, ಅವೈಜ್ಞಾನಿಕ-ಅವೈಚಾರಿಕ ಚಿಂತನೆಗಳ ಹೆಚ್ಚಳ, ಜಾತಿ ಪ್ರಾಬಲ್ಯ, ಅಸ್ಪಶ್ಯತಾ ಆಚರಣೆ, ಮಹಿಳಾ ಶೋಷಣೆ, ಕೋಮುದಳ್ಳುರಿ, ಅಸಮಾನತೆ ಸಾರುವ ಧರ್ಮಗ್ರಂಥಗಳ ಸಮರ್ಥನೆ, ಕೊಲೆಗಡುಕರನ್ನು ನಾಯಕರೆಂದು ಬಿಂಬಿಸಿ ವಿಜೃಂಭಿಸುವುದು, ಸಮಾನತೆಗಾಗಿ ಜೀವತೇದವರನ್ನು ಹಿಂಸೆ ಮತ್ತು ಅಸಮಾನತೆ ಪ್ರತಿಪಾದಿಸಲು ಬಳಸುವುದು ಇನ್ನು ಮುಂತಾದುವು ಶತೃವಾಗಿ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಬೆಳೆಯುತ್ತಿವೆ.

ಇವುಗಳ ವಿರುದ್ಧ ಈಗ ಅಹಿಂಸಾತ್ಮಕವಾದ ಯುದ್ಧ ಆರಂಭಗೊಳ್ಳಬೇಕಿದೆ. ಮೈತ್ರಿ-ಕಾರುಣ್ಯದ ಹೊಸಹತಾರಗಳನ್ನು ಬಳಸಿ ಭಾರತದ ಪ್ರಜಾತಂತ್ರ ಹಾಗೂ ಸಂವಿಧಾನವನ್ನು ಉಳಿಸಬೇಕಿದೆ. ಪರಸ್ಪರ ಪ್ರೀತಿ ಗೌರವದಿಂದ, ಘನತೆಯಿಂದ, ಸಹಬಾಳ್ವೆಯೊಂದಿಗೆ ಸಾಮೂಹಿಕವಾಗಿ ಪ್ರಗತಿ ಹೊಂದುವ ಹಂಬಲದಿಂದ ಸಮಾನತೆಯ ವಿರೋಧಿಗಳೊಂದಿಗೆ ಯುದ್ಧ ಮಾಡಬೇಕಿದೆ. ಇಂಥ ಯುದ್ಧಕ್ಕೆ ದಲಿತ ಸಂಘಟನೆಗಳೂ ಒಳಗೊಂಡಂತೆ ಎಲ್ಲ ಪ್ರಗತಿಪರ ಸಂಘಟನೆಗಳು, ಚಿಂತಕರು, ಶಿಕ್ಷಣ ತಜ್ಞರು, ವಿಚಾರವಾದಿಗಳು, ಸಾಹಿತಿಗಳು ಒಂದಾಗಿ ಹೋರಾಡಬೇಕಾದ ತುರ್ತಿದೆ. ಇಲ್ಲದಿದ್ದರೆ ಪ್ರಜಾತಂತ್ರವನ್ನು, ಸಮಾನತೆ ಹಾಗೂ ಮಾನವೀಯತೆಯನ್ನು ಗೌರವಿಸುವವರಿಗೆ ಉಳಿಯುವುದು ದೈನ್ಯತೆ ಹಾಗೂ ನಿಟ್ಟುಸಿರು ಮಾತ್ರ.

Writer - ಡಾ.ಎಸ್. ನರೇಂದ್ರ ಕುಮಾರ್

contributor

Editor - ಡಾ.ಎಸ್. ನರೇಂದ್ರ ಕುಮಾರ್

contributor

Similar News