×
Ad

‘ಜನರನ್ನು ಕೈಬೀಸಿ ಕರೆದ ವರ್ಣರಂಜಿತ ಕಲಾಕೃತಿಗಳು’

Update: 2020-01-05 18:08 IST

ಬೆಂಗಳೂರು, ಜ.5: ಗ್ರಾಮೀಣ ಜನರ ಬದುಕಿನ ಜೀವನಶೈಲಿಯನ್ನು ಬಿಂಬಿಸುವ ವರ್ಣರಂಜಿತ ಕಲಾಕೃತಿಗಳು, ಸಹಜತೆಯೇ ಮೈವೆತ್ತಂಥ ಕೃತಿಗಳು. ಕಣ್ತುಂಬಿಕೊಂಡಷ್ಟೂ ಬಣ್ಣಗಳು. ಹೆಜ್ಜೆಹಾಕಿದಷ್ಟೂ ಹೊಸತನದ ನೋಟ. ಅಲ್ಲಿದ್ದ ಕಲಾ ಸೊಬಗನ್ನು ಕಣ್ತುಂಬಿಕೊಂಡು ಬೆರಗಾಗಿ ನಿಂತಲ್ಲೇ ನಿಂತ ಜನರು. ಇಲ್ಲಿನ ಇಂಪಾದ ಸಂಗೀತ. ಕುರ್ಚಿಯ ಮೇಲೆ ಕೂತು ಕತ್ತು ಎತ್ತಿ ರಾಣಿಯಂತೆ ಪೋಸು ಕೊಡುತ್ತಿದ್ದ ಪೋರ, ಪೋರಿಯರು, ಸುಂದರನಾರಿಯರು. ಎಂಥವರನ್ನೂ ಕೈಬೀಸಿ ಕರೆಯುತ್ತಿದ್ದ ಕಲಾಕೃತಿಗಳು...

ಆಹಾ...ನಗರದ ಚಿತ್ರಕಲಾ ಪರಿಷತ್ತು ಆವರಣ, ಕುಮಾರಕೃಪಾ ರಸ್ತೆ, ಕ್ರೆಸೆಂಟ್ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ನಡೆದ ಚಿತ್ರಸಂತೆಯಲ್ಲಿ ಮಾಗಿಯ ಚಳಿಯನ್ನು ಬೆಳ್ಳನೆ ಕ್ಯಾನ್ವಾಸ್‌ನಲ್ಲಿ ಬಣ್ಣ ಬಣ್ಣದಲ್ಲಿ ಬಿಡಿಸಿಟ್ಟ ಕೃತಿಗಳು ಕಲಾಸಕ್ತರಲ್ಲಿ ಬೆಚ್ಚನೆಯ ಭಾವ ಮೂಡಿಸಿದವು. ನಿಸರ್ಗದ ಚಿತ್ತಾಕರ್ಷಕ ಚಿತ್ತಾರಗಳು, ಭಾವತೀವ್ರತೆಯ ಬಿಂಬಗಳು, ಭಕ್ತಿ ಭಾವ ಮೂಡಿಸುವ ದೇವರ ಚಿತ್ರಗಳು, ಪ್ರಾಣಿಗಳು, ಪಕ್ಷಿಗಳು, ಬಿದಿರಿನ ಚಿತ್ತಾರಗಳು , ಕರಕುಶಲ ವಸ್ತುಗಳು ಹೀಗೆ ನಾನಾ ಬಗೆಯ ಅಲಂಕಾರಿಕ ಸರಕುಗಳು ಬೀದಿಯುದ್ದಕ್ಕೂ ಜನರನ್ನು ಸೆಳೆಯುತ್ತಿವೆ.

ಕಲಾಕೃತಿಗಳ ಭಾವ-ಬಿಂಬಗಳೇ ಸಂವಾದ ನಡೆಸುತ್ತಿದ್ದವು. ಕಲೆ ವ್ಯಕ್ತಕ್ಕೆ ಆಕಾಶವೇ ಮಿತಿ. ಕಲಾವಿದ ಮತ್ತು ಕಲಾಕೃತಿಗಳಿಗೆ ಜಾತಿ-ಧರ್ಮ ಇಲ್ಲ. ವಯಸ್ಸು ಮತ್ತು ಅಂಗ ಊನತೆ ಅಡ್ಡಿ ಬರುವುದಿಲ್ಲ ಎಂಬ ಅಂಶಗಳನ್ನು ಬಿಂಬಿಸುತ್ತಿದ್ದವು. ಕಲಾವಿದರು ಕಲೆಯನ್ನು ಆವಾಹಿಸಿಕೊಂಡಿದ್ದರೆ, ಕಲಾಪ್ರೇಮಿಗಳು ಮತ್ತು ಕಲಾಪೋಷಕರು ಕಲೆಯನ್ನು ಮನಪೂರ್ತಿ ಆಸ್ವಾದಿಸಿದರು. ಕಲಾವಿದರಲ್ಲಿ ಸಾರ್ಥಕತೆಯ ಭಾವ ಇದ್ದರೆ, ಕಲಾಪ್ರೇಮಿಗಳ ಸಂತೋಷಕ್ಕೆ ಪಾರವೇ ಇರಲಿಲ್ಲ.

ಈ ಬಾರಿಯ ಚಿತ್ರಸಂತೆಯನ್ನು ರೈತರಿಗೆ ಅರ್ಪಿಸಿದ್ದರು. ಆದುದರಿಂದ ಇಡೀ ಸಂತೆಯೊಳಗೆ ರೈತರು, ಗ್ರಾಮೀಣ ಪ್ರದೇಶವೇ ಓಡಾಡುತ್ತಿತ್ತು. ಸಾವಿರಾರು ಮಂದಿ ಕಲಾವಿದರು, ಎರಡು ಸಾವಿರಕೂ ಅಧಿಕ ಮಳಿಗೆಗಳಲ್ಲಿ ನಿಂತು ತಮ್ಮ ನೆಚ್ಚಿನ ಕಲೆಯನ್ನು ಪ್ರದರ್ಶಿಸುತ್ತಾ, ಜನರಿಗೆ ಅವುಗಳ ಬಗ್ಗೆ ವಿವರಿಸುತ್ತಾ ಒಳಗೊಳಗೆ ಖುಷಿ ಪಡುತ್ತಿದ್ದ್ದು ಅವರ ಮುಖದಲ್ಲಿ ಕಾಣುತ್ತಿತ್ತು.

ತಮಿಳುನಾಡಿನ ಮಧುರೈ ಬಳಿಯ ಅಳಗಿರಿ ದೇಗುಲದ ಚಿತ್ರವೊಂದು ದೊಡ್ಡ ಚೌಕಟ್ಟಿನೊಂದಿಗೆ ಜನರನ್ನು ಆಕರ್ಷಿಸುತ್ತಿತ್ತು. ಆ ದೇಗುಲದ ಪ್ರವೇಶದ್ವಾರ, ದ್ವಾರದ ಬಳಿ ಪೂಜಾ ಸಾಮಗ್ರಿ ಅಂಗಡಿಗಳು, ಹಿಂದೆ ಸೊಗಸಾಗಿ ಕಾಣುತ್ತಿದ್ದ ಕಾನನದ ಹಸಿರು ಸೊಬಗು... ಆ ಇಡೀ ಚಿತ್ರವೂ ಒಂದರೆ ಕ್ಷಣ ಅಳಗಿರಿ ದೇಗುಲಕ್ಕೆ ಕರೆದೊಯ್ದ ಭಾವ ಮೂಡಿಸುತ್ತದೆ.

ಕಲಾವಿದ ಗೋಕುಲಮ್ ವಿಜಯ್ ಚಿತ್ರಿಸಿದ ಆ ಕಲಾಕೃತಿಯ ಬೆಲೆ ಬರೋಬ್ಬರಿ 12 ಲಕ್ಷ ರೂ. ಒಮ್ಮೆ ದೇವಸ್ಥಾನ್ಕಕೆ ಹೋಗಿದ್ದೆ. ದೇವರ ದರ್ಶನ ಮಾಡಿಕೊಂಡು ಹೊರಬಂದು ನಿಂತಿದ್ದೆ. ಹೊರಾಂಗಣ ನೋಟ ಮನದಲ್ಲಿ ಹಾಗೆಯೇ ಅಚ್ಚಳಿಯದ ಸ್ಥಾನ ಗಿಟ್ಟಿಸಿತ್ತು. ಸತತ ಒಂದು ವರ್ಷದ ಪರಿಶ್ರಮದಲ್ಲಿ ಅಂದು ಕಂಡ ಚಿತ್ರವನ್ನು ಬಣ್ಣದ ಚಿತ್ರಿಸಿದೆ ಎಂದು ವಿವರಿಸಿದರು.

ಇಷ್ಟದ ಕಲಾಕೃತಿಗಳನ್ನು ಕೈಯಲ್ಲಿ ಹಿಡಿದು ಅದರ ಬಗ್ಗೆ ಕಲಾವಿದನಿಂದ ಕೇಳಿ ತಿಳಿದುಕೊಳ್ಳುತ್ತಿದ್ದ ಕೆಲವರು ಬೆಲೆ ಕೇಳಿ ದಂಗಾಗುತ್ತಿದ್ದರೆ, ಇನ್ನು ಕೆಲವರು ಕಲೆಗೆ ಮನಸೋತು ಸಾವಿರಾರು ರೂಪಾಯಿ ನೀಡಿ ಖರೀದಿಸುತ್ತಿದ್ದರು. ಪುಟಾಣಿ ಮಕ್ಕಳಿಂದ ಹಿಡಿದು ಎಲ್ಲ ವಯೋಮಾನದವರು ಚಿಂತ್ರಸಂತೆಯು ನಮ್ಮದೇ ಎನ್ನುವಂತೆ ಸುತ್ತಾಡುತ್ತಿದ್ದರು. ಇಡೀ ಚಿತ್ರಸಂತೆ ಸುತ್ತಾಡಿ ದಣಿದ ಮೇಲೆ ಹೊಟ್ಟೆಯೂ ತಾಳ ಹಾಕದೆ ಇರುತ್ತದೆಯೇ. ಅದಕ್ಕಾಗಿ ಪರಿಷತ್ತಿನ ಆವರಣದಲ್ಲಿ ವಿವಿಧ ಖಾದ್ಯಗಳು ಕಾದಿದ್ದವು. ಪಕ್ಕದಲ್ಲೇ ರಾಜಸ್ಥಾನದ ವಿವಿಧ ಬಗೆಯ ಹಪ್ಪಳ ಹಸಿವು ತಣಿಸುತ್ತವೆ.

ದಿವ್ಯಾಂಗ ಮತ್ತು ಹಿರಿಯ ಕಲಾವಿದರಿಗೆ ಆದ್ಯತೆ: ದಿವ್ಯಾಂಗ ಮತ್ತು ಹಿರಿಯ ಕಲಾವಿದರಿಗೆ ಪರಿಷತ್ತಿನ ಆವರಣದಲ್ಲಿಯೇ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಅವರಿಗೆ ಸಹಾಯ ಮಾಡಲು, ಮಾಹಿತಿ ನೀಡಲು ಸ್ವಯಂಸೇವಕ ಸಮೂಹ ಹಾಗೂ ಇನ್ನಿತರ ಅಗತ್ಯ ಸೌಲಭ್ಯಗಳ್ನು ಮಾಡಲಾಗಿದ್ದು ವಿಶೇಷವಾಗಿತ್ತು.

ರೈತರು ಕೃಷಿಯಲ್ಲಿ ಬಳಸುವ ವಸ್ತುಗಳು, ಸಾಂಪ್ರದಾಯಿಕ ಉಡುಗೆ, ತೊಡುಗೆಗಳೂ ಸೇರಿದಂತೆ ಕೃಷಿ ಹಾಗೂ ರೈತರ ಬದುಕನ್ನು ಅನಾವರಣಗೊಳಿಸುವ ಪರಿಕರಗಳ ಪ್ರದರ್ಶನವನ್ನು ಪರಿಷತ್ತಿನ ಗಾಂಧಿ ಕುಟೀರದಲ್ಲಿ ಏರ್ಪಡಿಸಲಾಗಿತ್ತು. ಅಲ್ಲದೆ, ಪರಿಷತ್ತಿನ ಮುಖ್ಯ ವೇದಿಕೆಯಲ್ಲಿ ಎತ್ತಿನಗಾಡಿ ಹಾಗೂ ನೇಗಿಲ ದೊಡ್ಡ ಪ್ರತಿಕೃತಿಗಳನ್ನು ನಿರ್ಮಿಸಲಾಗಿತ್ತು. ಕೃಷಿ ದೊಡ್ಡ ಕಲೆಯಾಗಿದ್ದು, ರೈತರ ಸವಾಲುಗಳ ಬಗ್ಗೆ ಕಲಾವಿದರು ಸಹ ಸ್ಪಂದಿಸಬೇಕು ಎಂಬ ಹಿನ್ನೆಲೆಯಲ್ಲಿ ನೇಗಿಲ ಕುಲದೊಳಗಡಗಿದೆ ಕರ್ಮ, ನೇಗಿಲ ಮೇಲೆಯೇ ನಿಂತಿದೆ ಧರ್ಮ’ ಎಂಬ ರಾಷ್ಟ್ರಕವಿ ಕುವೆಂಪು ಅವರ ರೈತ ಗೀತೆಯ ಸಾಲುಗಳನ್ನು ಪರಿಷತ್‌ನ ಮುಖ್ಯದ್ವಾರದಲ್ಲಿ ಅಳವಡಿಸಲಾಗಿತ್ತು.

ಚಿತ್ರಸಂತೆಯಲ್ಲಿ ಕನಿಷ್ಠ 100 ರೂ.ಗಳಿಂದ ಸುಮಾರು 23 ಲಕ್ಷ ರೂ.ಗಳವರೆಗೆ ಕಲಾಕೃತಿಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕಿಡಲಾಗಿತ್ತು. ಸಂತೆಯಲ್ಲಿ ಗ್ರಾಹಕರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಕೆನರಾ ಬ್ಯಾಂಕ್‌ನಿಂದ ಮೊಬೈಲ್ ಎಟಿಎಂಗಳ ವ್ಯವಸ್ಥೆ ಮಾಡಲಾಗಿತ್ತು.

ಕರ್ನಾಟಕ ಕಲಾ ಪರಂಪರೆಯ ಜತೆಗೆ ಬೇರೆ ರಾಜ್ಯಗಳ ಕಲೆ ಮತ್ತು ಸಂಸ್ಕೃತಿಯ ಪ್ರದರ್ಶನದ ಮೂಲಕ ಭಾವೈಕ್ಯತೆ ಸಂಕೇತ ಮತ್ತು ರಾಷ್ಟ್ರೀಯ ಹಬ್ಬದ ವಾತಾವರಣ ನಿರ್ಮಾಣ ಮಾಡಿಕೊಟ್ಟ ಚಿತ್ರಸಂತೆಯಲ್ಲಿ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಒರಿಸ್ಸಾ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ಸೇರಿ ವಿವಿಧ ರಾಜ್ಯಗಳ 1,500ಕ್ಕೂ ಅಧಿಕ ಕಲಾವಿದರು ಭಾಗವಹಿಸಿದ್ದರು.

ಇದು ನನ್ನ ಮೊದಲ ಅನುಭವ. ಚಿತ್ರಸಂತೆಯ ಬಗ್ಗೆ ನನ್ನಲ್ಲಿ ಒಂದು ಕಲ್ಪನೆ ಇತ್ತು. ಇವತ್ತು ನೋಡಿದಾಗ ಕಲ್ಪನೆಗೆ ಮೀರಿದ ಅನುಭವವಾಗಿದೆ. ತುಂಬಾ ಸಂತಸವಾಯಿತು, ಇಲ್ಲಿಗೆ ಭೇಟಿ ನೀಡಿದ್ದರಿಂದ.
- ಆಶಾ, ವಿದ್ಯಾರ್ಥಿನಿ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News