×
Ad

ಸಿಎಎ-ಎನ್‌ಆರ್‌ಸಿ ವಿರೋಧಿಸಿ ಬೀದಿಗಿಳಿದ ‘ಬುರ್ಖಾ ಔರ್ ಬಿಂದಿ’

Update: 2020-01-05 20:24 IST

ಬೆಂಗಳೂರು,ಜ.5: ಪೌರತ್ವ ತಿದ್ದುಪಡಿ ಕಾಯ್ದೆ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ವಿರೋಧಿಸಿ ನಗರದ ಪುರಭವನದ ಎದುರು ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ವಿನೂತನವಾಗಿ ಬೃಹತ್ ಪ್ರತಿಭಟನೆ ನಡೆಸಿದರು.

ರವಿವಾರ ಪ್ರಗತಿಪರ ಸಂಘಟನೆಗಳ ಸಹಯೋಗದೊಂದಿಗೆ ನಡೆದ ಬುರ್ಖಾ ಮತ್ತು ಬಿಂದಿ ಪ್ರತಿಭಟನೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದು, ಒಕ್ಕೊರಲಿನಿಂದ ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ಪ್ರಕ್ರಿಯೆಯನ್ನು ವಿರೋಧಿಸಿದರು. ಇಂತಹ ಸಂವಿಧಾನ ವಿರೋಧಿ ಕಾಯಿದೆಗಳಿಂದ ಜನರು ತೊಂದರೆಗೆ ಸಿಲುಕುತ್ತಾರೆ. ಹೀಗಾಗಿ, ಈ ಕೂಡಲೇ ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ಜಾರಿಯಿಂದ ಹಿಂದೆ ಸರಿಯಬೇಕೆಂದು ಒತ್ತಾಯಿಸಿದರು.

ಪೌರತ್ವ ವಿರುದ್ಧ ಪ್ರತಿಭಟನೆ ಮಾಡುತ್ತಿರುವುದು ಕೇವಲ ಮುಸ್ಲಿಮರು ಮಾತ್ರವಲ್ಲ. ನಮಗೆ ಧರ್ಮ ಮುಖ್ಯವಲ್ಲ. ಭಾರತದ ಪೌರತ್ವ ಮುಖ್ಯ ಎನ್ನುವ ಉದ್ದೇಶದಿಂದ ಹಿಂದೂ ಮಹಿಳೆಯರು ‘ಬುರ್ಖಾ’ ಧರಿಸಿದರೆ, ಮುಸ್ಲಿಮ್ ಮಹಿಳೆಯರು ‘ಬಿಂದಿ’ ಹಾಕಿಕೊಂಡಿದ್ದರು. ಧರ್ಮದ ಹೆಸರಿನಲ್ಲಿ ಪೌರತ್ವವನ್ನು ನಿಷೇಧ ಮಾಡಲು ಕೇಂದ್ರ ಸರಕಾರ ಹೊರಟಿದೆ ಎಂದು ಕಿಡಿಕಾರಿದರು.

ಹೈಕೋರ್ಟಿನ ವಕೀಲ ಕ್ಲಿಪ್ಟನ್ ರೋಜಾರಿಯೊ ಮಾತನಾಡಿ, ಕೇಂದ್ರ ಸರಕಾರ ಜಾರಿ ಮಾಡಿದ ಪೌರತ್ವ ತಿದ್ದುಪಡಿ ಕಾಯ್ದೆ ನೋಡಿದರೆ ಭಾರತದಲ್ಲಿ ಜಾತ್ಯತೀತ ವೌಲ್ಯಗಳನ್ನು ಬುಡಮೇಲು ಮಾಡುವ ಹುನ್ನಾರ ನಡೆಯುತ್ತಿರುವುದು ಸ್ಪಷ್ಟ. ಮಂಗಳೂರಿನಲ್ಲಿ 150 ಜನರಿದ್ದ ತಂಡವೊಂದು ಸಿಎಎ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾಗ ಪೊಲೀಸರು ಏಕಾಏಕಿ ಗುಂಡಿನ ದಾಳಿ ನಡೆಸಿ, ಇಬ್ಬರನ್ನು ಹತ್ಯೆ ಮಾಡಿದ್ದಾರೆ ಎಂದು ದೂರಿದರು.

ಪ್ರತಿಭಟನೆಯಲ್ಲಿ ಲೈಂಗಿಕ ಅಲ್ಪಸಂಖ್ಯಾತರು, ಗಾಯಕಿ ಎಂ.ಡಿ.ಪಲ್ಲವಿ ಸೇರಿ ಪ್ರಗತಿ ಪರ ಚಿಂತಕರು, ಸಮಾನ ಮಾನಸ್ಕರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News