ಪಿತ್ತಕೋಶವನ್ನು ಕಾಡುವ ರೋಗಗಳ ಬಗ್ಗೆ ತಿಳಿದುಕೊಳ್ಳಿ

Update: 2020-01-05 15:08 GMT

ಪಿತ್ತಕೋಶವು ನಮ್ಮ ಜೀರ್ಣಾಂಗ ವ್ಯವಸ್ಥೆಯ ಪ್ರಮುಖ ಭಾಗವಾಗಿದ್ದು, ಯಕೃತ್ತು ಮತ್ತು ಸಣ್ಣಕರುಳಿನ ನಡುವೆ ಸಂಪರ್ಕ ಸೇತುವಿನಂತೆ ಕಾರ್ಯ ನಿರ್ವಹಿಸುತ್ತದೆ. ಯಕೃತ್ತಿನ ಅಡಿಯಲ್ಲಿರುವ ಸಣ್ಣ ಪೇರಳೆ ಹಣ್ಣಿನ ಗಾತ್ರದ ಪಿತ್ತಕೋಶವು ಪುಟ್ಟ ಚೀಲವಾಗಿದ್ದು,ಯಕೃತ್ತು ಉತ್ಪಾದಿಸುವ ಪಿತ್ತರಸವನ್ನು ಸಂಗ್ರಹಿಸುತ್ತದೆ. ನಮ್ಮ ಉತ್ತಮ ಆರೋಗ್ಯಕ್ಕಾಗಿ ಆರೋಗ್ಯಕರ ಪಿತ್ತಕೋಶವು ಮುಖ್ಯವಾಗಿದೆ. ಪಿತ್ತಕೋಶವನ್ನು ಕಾಡುವ ರೋಗಗಳ ಕುರಿತು ಮಾಹಿತಿಯಿಲ್ಲಿದೆ.

► ಪಿತ್ತಗಲ್ಲುಗಳು

ಹಲವೊಮ್ಮೆ ತಪ್ಪು ಹೊಂದಾಣಿಕೆ ಅಥವಾ ಇನ್ನಿತರ ಕಾರಣಗಳಿಂದಾಗಿ ವಿವಿಧ ಗಾತ್ರಗಳ ಸಣ್ಣ ಹರಳುಗಳು ಪಿತ್ತಕೋಶದಲ್ಲಿ ರೂಪುಗೊಳ್ಳುತ್ತವೆ ಮತ್ತು ಇವು ಪಿತ್ತಗಲ್ಲುಗಳನ್ನುಂಟು ಮಾಡುತ್ತವೆ. ಕೆಲವೊಮ್ಮೆ ಪಿತ್ತಗಲ್ಲುಗಳು ತುಂಬ ತೊಂದರೆಯನ್ನು ನೀಡುತ್ತವೆ. ಸಾಮಾನ್ಯವಾಗಿ ಅಸಹನೀಯ ಹೊಟ್ಟೆ ಮತ್ತು ಬೆನ್ನು ನೋವು, ವಾಕರಿಕೆ ಅಥವಾ ಊತ ಕಾಣಿಸಿಕೊಳ್ಳುತ್ತವೆ. ಕೆಲವೊಮ್ಮೆ ಪಿತ್ತಗಲ್ಲುಗಳನ್ನು ಔಷಧಿಗಳ ಮೂಲಕ ನಿವಾರಿಸಲಾಗುತ್ತದೆ,ಇಲ್ಲದಿದ್ದರೆ ಶಸ್ತ್ರಚಿಕಿತ್ಸೆ ಅಗತ್ಯವಾಗುತ್ತದೆ.

► ಕೊಲೆಸಿಸ್ಟೈಟಿಸ್

ಕೊಲೆಸಿಸ್ಟೈಟಿಸ್ ಪಿತ್ತಕೋಶದ ಉರಿಯೂತ ಮತ್ತು ಕೆರಳುವಿಕೆಯಾಗಿದೆ. ಅದು ಪಿತ್ತಕೋಶದ ಸೋಂಕು ಸಹ ಆಗಿದ್ದು,ಹೆಚ್ಚಿನ ಸಂದರ್ಭಗಳಲ್ಲಿ ಪಿತ್ತಕೋಶದಲ್ಲಿನ ಪಿತ್ತಗಲ್ಲುಗಳು ಈ ಸೋಂಕನ್ನುಂಟು ಮಾಡುತ್ತವೆ. ಕೊಲೆಸಿಸ್ಟೈಟಿಸ್ ತೀವ್ರ ನೋವು ಮತ್ತು ಜ್ವರವನ್ನುಂಟು ಮಾಡುತ್ತದೆ. ಸೋಂಕು ದೀರ್ಘಕಾಲಿಕವಾಗಿದ್ದರೆ ಶಸ್ತ್ರಚಿಕಿತ್ಸೆ ನಡೆಸಬೇಕಾಗುತ್ತದೆ.

► ಪಿತ್ತಕೋಶ ಕ್ಯಾನ್ಸರ್

ಕೆಲವು ಪ್ರಕರಣಗಳಲ್ಲಿ ಪಿತ್ತಕೋಶವು ಕ್ಯಾನ್ಸರಿಗೂ ಗುರಿಯಾಗುತ್ತದೆ. ಬೆನ್ನು ಮತ್ತು ಕೆಳಹೊಟ್ಟೆಯಲ್ಲಿ ಅಸಹನೀಯ ನೋವು ಸೇರಿದಂತೆ ಪಿತ್ತಕೋಶ ಕ್ಯಾನ್ಸರಿನ ಲಕ್ಷಣಗಳು ಪಿತ್ತಗಲ್ಲುಗಳ ಲಕ್ಷಣಗಳಂತೆಯೇ ಇರುತ್ತವೆ. ಈ ಲಕ್ಷಣಗಳು ತಡವಾಗಿ ಗಮನಕ್ಕೆ ಬಂದರೆ ಚಿಕಿತ್ಸೆಯು ಸ್ವಲ್ಪ ಕಷ್ಟವಾಗಬಹುದು.

► ಗಾಲ್‌ಸ್ಟೋನ್ ಪ್ಯಾಂಕ್ರಿಯಾಟೈಟಿಸ್

ಇದು ಮೇದೋಜ್ಜೀರಕ ಗ್ರಂಥಿಯಲ್ಲಿ ಉರಿಯೂತವನ್ನುಂಟು ಮಾಡುವ ಕಾಯಿಲೆಯಾಗಿದೆ. ಜೀರ್ಣ ಕಿಣ್ವಗಳು ಸಣ್ಣ ಕರುಳಿನಲ್ಲಿ ಬಿಡುಗಡೆಗೊಳ್ಳುವ ಮೊದಲೇ ಕ್ರಿಯಾಶೀಲಗೊಂಡರೆ ಮೇದೋಜ್ಜೀರಕ ಗ್ರಂಥಿಗೆ ಹಾನಿಯನ್ನುಂಟು ಮಾಡಲು ಆರಂಭಿಸುತ್ತವೆ. ಗಾಲ್‌ ಸ್ಟೋನ್ ಪ್ಯಾಂಕ್ರಿಯಾಟೈಟಿಸ್ ನಾಳಗಳಿಗೆ ತಡೆಯನ್ನುಂಟು ಮಾಡುತ್ತದೆ ಮತ್ತು ಮೇದೋಜ್ಜೀರಕ ಗ್ರಂಥಿಯನ್ನು ಒಣಗಿಸುತ್ತದೆ. ಇದು ಗಂಭೀರ ಸ್ಥಿತಿಯಾದ ಮೇದೋಜ್ಜೀರಕ ಗ್ರಂಥಿಯ ಉರಿಯೂತಕ್ಕೆ ಕಾರಣವಾಗುತ್ತದೆ.

ಇವುಗಳಿಂದ ದೂರವಿರಿ

ನಿಮ್ಮ ಶರೀರದ ಒಟ್ಟಾರೆ ಆರೋಗ್ಯವು ನಿಮ್ಮ ಆಹಾರಕ್ರಮವನ್ನು ಅವಲಂಬಿಸಿರುತ್ತದೆ. ಕೆಲವೇ ಜನರು ಆರೋಗ್ಯದ ಬಗ್ಗೆ ಕಾಳಜಿಯೊಂದಿಗೆ ಸೂಕ್ತ ಆಹಾರಕ್ರಮವನ್ನು ಅನುಸರಿಸುತ್ತಾರೆ. ನೀವು ಪಿತ್ತಕೋಶ ಸಮಸ್ಯೆಯಿಂದ ಬಳಲುತ್ತಿದ್ದರೆ ಅಥವಾ ಪಿತ್ತಕೋಶವು ಆರೋಗ್ಯಯುತವಾಗಿರಬೇಕು ಎಂದು ಬಯಸುತ್ತಿದ್ದರೆ ಕೆಲವು ಆಹಾರಗಳಿಂದ ನೀವು ದೂರವಿರಬೇಕಾಗುತ್ತದೆ.

ಬೇಕರಿ ಉತ್ಪನ್ನಗಳು: ಕುಕೀಸ್, ಮಫಿನ್‌ ನಂತಹ ಬೇಕರಿ ಉತ್ಪನ್ನಗಳು ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬನ್ನು ಒಳಗೊಂಡಿರುತ್ತವೆ. ಪಿತ್ತಕೋಶದಲ್ಲಿ ಕೊಬ್ಬನ್ನು ಸರಿಯಾಗಿ ಸಂಸ್ಕರಿಸಲು ಸಾಧ್ಯವಾಗಿದಿದ್ದಾಗ ಅದು ನೋವಿಗೆ ಕಾರಣವಾಗುತ್ತದೆ. ನೀವು ಪಿತ್ತಗಲ್ಲುಗಳಿಂದ ಬಳಲುತ್ತಿದ್ದರೆ ಕಡಿಮೆ ಕೊಬ್ಬನ್ನು ಒಳಗೊಂಡಿರುವ ಆಹಾರವನ್ನು ಸೇವಿಸಿ. ಆದರೆ ಪಿತ್ತಕೋಶ ಸಮಸ್ಯೆಯಿಲ್ಲದವರು ಇದನ್ನು ಕಟ್ಟುನಿಟ್ಟಾಗಿ ಪಾಲಿಸುವ ಅಗತ್ಯವಿಲ್ಲ.

ಕಾಫಿ: ಪಿತ್ತಕೋಶದ ಸಂಕುಚನಗಳಿಗೆ ಕಾಫಿಯು ಪ್ರಮುಖ ಕಾರಣವಾಗಿದೆ. ಹೀಗಾಗಿ ಪಿತ್ತಗಲ್ಲುಗಳನ್ನು ಹೊಂದಿರುವವರು ಕಾಫಿ ಸೇವನೆಯನ್ನು ನಿವಾರಿಸಬೇಕು.

ಹೆಚ್ಚು ಕೊಬ್ಬಿನ ಡೇರಿ ಉತ್ಪನ್ನಗಳು: ಪಿತ್ತ ಸಮಸ್ಯೆ ಇರುವವರಲ್ಲಿ ಹೆಚ್ಚು ಕೊಬ್ಬಿರುವ ಡೇರಿ ಉತ್ಪನ್ನಗಳು ಅಜೀರ್ಣವನ್ನುಂಟು ಮಾಡುವ ಮೂಲಕ ಸಮಸ್ಯೆಯನ್ನು ಹೆಚ್ಚಿಸುತ್ತವೆ. ಇಂತಹ ಉತ್ಪನ್ನಗಳ ಸೇವನೆಯು ತೀವ್ರ ಹೊಟ್ಟೆ ನೋವು ಅಥವಾ ವಾಂತಿಗೆ ಕಾರಣವಾಗುತ್ತದೆ.

ಸಿಹಿಖಾದ್ಯ: ಸಿಹಿಖಾದ್ಯಗಳು ಅಥವಾ ಅಧಿಕ ಸಕ್ಕರೆಯಿರುವ ಆಹಾರಗಳು ಕೊಲೆಸ್ಟ್ರಾಲ್ ದಪ್ಪಗೊಳ್ಳಲು ಕಾರಣವಾಗುತ್ತವೆ ಮತ್ತು ಇದು ಹೃದ್ರೋಗಳಿಗೆ ಕಾರಣವಾಗುವ ಜೊತೆಗೆ ಪಿತ್ತಗಲ್ಲುಗಳ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಹೀಗಾಗಿ ಸಿಹಿ ಸೇವನೆಗೆ ಮಿತಿಯಿರಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News