ಪೌರತ್ವ ಕಾಯ್ದೆಯ ಮೂಲಕ ಹಿಂದೂ ರಾಷ್ಟ್ರಕ್ಕಾಗಿ ಪ್ರಥಮ ಹೆಜ್ಜೆ ಇಟ್ಟ ಬಿಜೆಪಿ: ಅಲೋಕ್ ಪ್ರಸನ್ನ ಕುಮಾರ್
ಬೆಂಗಳೂರು, ಜ.5: ಪೌರತ್ವ(ತಿದ್ದುಪಡಿ)ಕಾಯ್ದೆಯನ್ನು ತರುವ ಮೂಲಕ ಬಿಜೆಪಿಯು ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ಪ್ರಥಮ ಹೆಜ್ಜೆಯಿಟ್ಟಿದೆ ಎಂದು ಕಾನೂನು ತಜ್ಞ ಅಲೋಕ್ ಪ್ರಸನ್ನ ಕುಮಾರ್ ಹೇಳಿದ್ದಾರೆ.
ರವಿವಾರ ನಗರದ ಜೈಭೀಮ್ ಭವನದಲ್ಲಿ ಆಯೋಜಿಸಿದ್ದ ಕೇಂದ್ರ ಸಂಸತ್ತು ಪೌರತ್ವ(ತಿದ್ದುಪಡಿ) ಕಾಯ್ದೆ ಅನುಮೋದಿಸಿ 4 ವಾರಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ಅದರ ಸಾಧಕ-ಬಾಧಕಗಳು, ಅದರಿಂದಾಗುವ ಅನಾಹುತಗಳ ಕುರಿತು ಆಯೋಜಿಸಿದ್ದ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೇಂದ್ರ ಸರಕಾರವು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಪೌರತ್ವ ಕಾಯ್ದೆಯನ್ನು ಅನುಮೋದಿಸಿದ್ದಾರೆ. ಈ ಮೂಲಕ ಭಾರತವನ್ನು ಒಂದು ಧರ್ಮಕ್ಕೆ ಸೀಮಿತಗೊಳಿಸಲು ಮುಂದಾಗಿದ್ದಾರೆ. ಪ್ರಜಾಪ್ರಭುತ್ವವುಳ್ಳ ನಮ್ಮ ದೇಶದಲ್ಲಿ ಬಹುತ್ವವನ್ನು ಒಪ್ಪಿಕೊಂಡಿದ್ದೇವೆ. ಇಲ್ಲಿ, ಏಕಧರ್ಮ ಪ್ರತಿಪಾದನೆ ನಡೆಯಲ್ಲ ಎಂದರು.
ಅಸ್ಸಾಂನಲ್ಲಿ 2009ರಲ್ಲಿಯೇ ಎನ್‌ಆರ್‌ಸಿಯನ್ನು ಜಾರಿಗೆ ಮುಂದಾಗಿದ್ದರು. ಆದರೆ, 2014 ರಲ್ಲಿ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಅದು ಮತ್ತಷ್ಟು ವೇಗ ಪಡೆದುಕೊಂಡಿತು. ಇದೀಗ ಅಲ್ಲಿನ 3.3 ಕೋಟಿ ಜನರು ದಾಖಲೆಗಳನ್ನು ನೀಡಿದ್ದು, ಅದರಲ್ಲಿ 20 ಲಕ್ಷ ಜನರನ್ನು ಅಕ್ರಮ ನುಸುಳುಕೋರರು ಎಂದಿದ್ದಾರೆ ಎಂದು ತಿಳಿಸಿದರು.
ಅಸ್ಸಾಂನಲ್ಲಿ ನಡೆದ ಎನ್‌ಆರ್‌ಸಿಯಿಂದ ಹೊರಗುಳಿದವರಲ್ಲಿ ಶೇ.30 ರಷ್ಟು ಮಹಿಳೆಯರು, ಶೇ.40 ರಷ್ಟು ಬೆಂಗಾಳಿ, ಹಿಂದೂಗಳಿದ್ದಾರೆ. ಅಲ್ಲದೆ, ಬಹುತೇಕ ಬುಡಕಟ್ಟು ಜನರಿಗೂ ತೊಂದರೆಯಾಗಿದೆ. ಅತಿ ಸಣ್ಣ ರಾಜ್ಯದಲ್ಲಿಯೇ ಇಷ್ಟು ಪ್ರಮಾಣದಲ್ಲಿ ಹಾನಿಯನ್ನುಂಟು ಮಾಡಿರುವುದು, ಇಡೀ ದೇಶಕ್ಕೆ ಅನ್ವಯಿಸಲು ಮುಂದಾಗಿದ್ದಾರೆ. ಇದು ಸಂವಿಧಾನ ವಿರೋಧಿ ಕೆಲಸ ಎಂದು ನುಡಿದರು.
ಸಂವಿಧಾನದ ಅಡಿಯಲ್ಲಿ ನಮ್ಮ ದೇಶವು ಒಂದು ಧರ್ಮದ ಆಧಾರದಲ್ಲಿ ನೋಡಲು ಸಾಧ್ಯವಿಲ್ಲ. ಇಲ್ಲಿ ವಿಭಿನ್ನವಾದ ಸಂಸ್ಕೃತಿ, ಧರ್ಮ, ಜಾತಿಗಳಿದ್ದು, ಬಹುತ್ವವನ್ನು ಒಪ್ಪಿಕೊಂಡಿದ್ದೇವೆ. ನಮ್ಮ ಸಂವಿಧಾನ ಇಲ್ಲಿ ಜನಿಸಿದ ಎಲ್ಲರೂ ಸಮಾನರು ಎಂದು ಹೇಳಿದೆ. ಹೀಗಾಗಿ, ಅದನ್ನು ಮೀರಿ ಕೇಂದ್ರ ಸರಕಾರ ಎನ್‌ಆರ್‌ಸಿ, ಸಿಎಎ ಜಾರಿಗೆ ಮುಂದಾಗಿದೆ ಎಂದು ಆಕ್ಷೇಪಿಸಿದರು.
ದೇಶದ ಬಹುತೇಕರು ಎನ್‌ಆರ್‌ಸಿ ಅಡಿಯಲ್ಲಿ ದಾಖಲೆಗಳನ್ನು ಸಾಭೀತುಪಡಿಸುವ ಸ್ಥಿತಿಯಲ್ಲಿಲ್ಲ. ಅಗತ್ಯ ದಾಖಲೆಗಳಿಗಾಗಿ ಜನರು ಮತ್ತೊಂದು ಬಾರಿ ಅಧಿಕಾರಗಳ ಎದುರು ಸಾಲುಕಟ್ಟಬೇಕಿದೆ. ಅಲ್ಲದೆ, ದಾಖಲೆ ನೀಡದೇ ಹೊರಗುಳಿದವರು ನ್ಯಾಯಕ್ಕಾಗಿ, ನ್ಯಾಯಾಲಗಳ ಮೊರೆ ಹೋಗಬೇಕಿದೆ. ಅದಕ್ಕಾಗಿ, ಹತ್ತಾರು ವರ್ಷಗಳ ಕಾಲ ಅಲೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಹೇಳಿದರು.
ಪ್ರಜಾಪ್ರಭುತ್ವ ದೇಶದಲ್ಲಿ ಸಂವಿಧಾನವೇ ಅಂತಿಮ. ಇಲ್ಲಿನ ಸರಕಾರ, ಸಂಸತ್ತು, ನ್ಯಾಯಾಲಯಗಳು ಎಲ್ಲವೂ ಅದರ ಅಡಿಯಲ್ಲಿಯೇ ಇವೆ. ಹೀಗಾಗಿ, ಸಿಎಎ ಕುರಿತು ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿದೆ. ನ್ಯಾಯಾಲಯವು ಸಂವಿಧಾನವನ್ನು ಮೀರಿ ತೀರ್ಪು ನೀಡಲು ಸಾಧ್ಯವಿಲ್ಲ. ಆದರೆ, ಏನು ತೀರ್ಪು ನೀಡಲಿದೆ ಎಂಬುದು ನೋಡಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.