ರಾಜಕಾರಣಿಗಳ ತಪ್ಪು ಕೆಲಸಗಳಿಗೆ ಪಂಕ್ಚರ್ ಹಾಕಬೇಕು: ಸಾಹಿತಿ ಕುಂ.ವೀರಭದ್ರಪ್ಪ
ಬಳ್ಳಾರಿ, ಜ. 5: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ, ಗಲಭೆಯಿಂದ ಸಾವು-ನೋವು ಸಂಭವಿಸಿದರೂ ಗಂಡುಗಲಿ ಶಾ, ಕಾಯ್ದೆ ಹಿಂಪಡೆಯುವುದಿಲ್ಲ ಎಂದು ಹೇಳುತ್ತಾರೆ. ಅವರನ್ನು ನೋಡಿದರೆ ಭಯವಾಗುತ್ತದೆ’ ಎಂದು ಲೇಖಕ ಕುಂ.ವೀರಭದ್ರಪ್ಪ ಆತಂಕ ಹೊರಹಾಕಿದ್ದಾರೆ.
ರವಿವಾರ ಕೊಟ್ಟೂರಿನಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ಏರ್ಪಡಿಸಿದ್ದ ಪ್ರತಿಭಟನೆ ವೇಳೆ ಮಾತನಾಡಿದ ಅವರು, ಸಂಸದ ಅನಂತ್ ಕುಮಾರ್ ಅವರ ಸಾಲಿಗೆ ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ ಸೇರಿದ್ದಾರೆ. ಪಂಕ್ಚರ್ ಹಾಕುವ ಅನಕ್ಷರಸ್ಥರಿಂದ ದೇಶಕ್ಕೆ ಆತಂಕ ಎಂದು ಒಬ್ಬ ಸಂಸದ ಹೇಳುತ್ತಾನೆ. ಇಂತಹ ರಾಜಕಾರಣಿಗಳ ತಪ್ಪು ಕೆಲಸಗಳಿಗೆ ಪಂಕ್ಚರ್ ಹಾಕುವುದೇ ನಮ್ಮ ಕೆಲಸ ಎಂದು ಕಿಡಿಕಾರಿದರು.
ರೆಡ್ಡಿ ಸಹೋದರರ ಅಸ್ಮಿತೆ ಕಡಿಮೆ ಆಗಲಿ: ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆಯಾದರೆ ಮಾತ್ರ ಬಳ್ಳಾರಿ ರೆಡ್ಡಿ ಸಹೋದರರ ಅಸ್ಮಿತೆ ಕಡಿಮೆಯಾಗಲಿದೆ. ರಾಜ್ಯದಲ್ಲಿ ಹಿಂದೂ-ಮುಸ್ಲಿಮರು ಪರಸ್ಪರ ಸಹೋದರರಂತೆ ಜೀವನ ನಡೆಸುತ್ತಿದ್ದಾರೆ. ಆದರೆ, ಶಾಸಕ ಸೋಮಶೇಖರ ರೆಡ್ಡಿ ಹೇಳಿಕೆ ಪ್ರಚೋದನಕಾರಿ ಎಂದರು.
ಬಳ್ಳಾರಿ ರಿಪಬ್ಲಿಕ್ ಮಾಡಿಕೊಂಡಿರುವ ರೆಡ್ಡಿ ಸಹೋದದರ ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ. ಇವರಿಗೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಜನತೆ ತಕ್ಕ ಪಾಠ ಕಲಿಸಬೇಕು ಎಂದು ಕುಂ.ವೀರಭದ್ರಪ್ಪ ಇದೇ ವೇಳೆ ಮನವಿ ಮಾಡಿದರು.
ರೆಡ್ಡಿ ವಿರುದ್ಧ ಮತ್ತೊಂದು ದೂರು: ಪ್ರಚೋದನಕಾರಿ ಹೇಳಿಕೆ ನೀಡಿದ ಬಳ್ಳಾರಿ ನಗರ ಕ್ಷೇತ್ರದ ಶಾಸಕ ಜಿ.ಸೋಮಶೇಖರ ರೆಡ್ಡಿ ವಿರುದ್ಧ ಗಂಗಾವತಿ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ. ಸಂವಿಧಾನ ಉಳಿಸಿ ಆಂದೋಲನ ಸಂಚಾಲಕ ಭಾರದ್ವಾಜ್ ದೂರು ನೀಡಿದ್ದು, ರೆಡ್ಡಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.