ಏಸು ಪ್ರತಿಮೆ ನಿರ್ಮಾಣಕ್ಕೆ ಕ್ರೈಸ್ತ ನಿಯೋಗದಿಂದ ಮುಖ್ಯಮಂತ್ರಿ ಬಿಎಸ್‌ವೈಗೆ ಮನವಿ

Update: 2020-01-05 17:57 GMT

ಬೆಂಗಳೂರು, ಜ.5: ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮದ ಕಪಾಲಿ ಬೆಟ್ಟದಲ್ಲಿ ಏಸು ಕ್ರಿಸ್ತನ ಪ್ರತಿಮೆಯನ್ನು ನಿರ್ಮಾಣ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಕ್ರೈಸ್ತ ಧರ್ಮೀಯರ ನಿಯೋಗ ರವಿವಾರ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ಕಪಾಲಿ ಬೆಟ್ಟದಲ್ಲಿ ಏಸು ಕ್ರಿಸ್ತನ ಪ್ರತಿಮೆ ನಿರ್ಮಾಣ ಮಾಡಲು ಜಾಗ ನೀಡಲಾಗಿದೆ ಎಂದು ಹೇಳುತ್ತಿದ್ದಂತೆಯೇ ಸಿಎಂ ಬಿಎಸ್‌ವೈ ಸೇರಿ ಹಲವು ಬಿಜೆಪಿ ಸಚಿವರು ಹಾಗೂ ಮುಖಂಡರುಗಳು ವಿರೋಧ ವ್ಯಕ್ತಪಡಿಸಿದ್ದರು.

ಇದರ ಬೆನ್ನಲ್ಲೇ ಕ್ರೈಸ್ತ ಧರ್ಮೀಯರ ನಿಯೋಗ ಸಿಎಂ ಬಿಎಸ್‌ವೈ ಅವರನ್ನು ಭೇಟಿ ಮಾಡಿ, ಏಸು ಕ್ರಿಸ್ತನ ಪ್ರತಿಮೆಯನ್ನು ನಿರ್ಮಾಣ ಮಾಡಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.

ಯಡಿಯೂರಪ್ಪ ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕ್ರೈಸ್ತ ಮುಖಂಡ ಪೀಟರ್ ಮಚಾದೋ ಅವರು, ಕಪಾಲಿ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ವಿಚಾರದಲ್ಲಿ ರಾಜಕೀಯ ಮಾಡೋದು ಬೇಡ. ಸುಮಾರು ವರ್ಷಗಳಿಂದಲೂ ಕ್ರೈಸ್ತ ಸಮುದಾಯದವರು ಈ ಜಾಗದಲ್ಲಿ ಯೇಸುವನ್ನು ಪೂಜಿಸುತ್ತಿದ್ದೇವೆ. ಇದೇ ಜಾಗದಲ್ಲಿ ಇದೀಗ ಏಸು ಪ್ರತಿಮೆ ನಿರ್ಮಾಣವಾಗುತ್ತಿದೆ. ಇದಕ್ಕೆ ವಿರೋಧ ಬೇಡ ಎಂದು ಸಿಎಂ ಯಡಿಯೂರಪ್ಪ ಅವರ ಬಳಿ ಮನವಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಕಪಾಲಿ ಬೆಟ್ಟದಲ್ಲಿ ಹಿಂದು ದೇವತೆಗಳನ್ನು ಪೂಜೆ ಮಾಡುತ್ತಾ ಇದ್ದರು ಎನ್ನುವ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ನಾವು ಯಾರನ್ನು ಮತಾಂತರ ಮಾಡುತ್ತಿಲ್ಲ. ಮತಾಂತರ ಮಾಡೋದು ಅಷ್ಟು ಸುಲಭದ ಕೆಲಸವೂ ಅಲ್ಲ. ನಾವು ಒಂದುವರೆ ಲಕ್ಷ ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಿದ್ದೇವೆ, ಈ ಪೈಕಿ ಒಬ್ಬರನ್ನಾದರೂ ಮತಾಂತರ ಮಾಡಿದ್ದನ್ನು ತೋರಿಸಲಿ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News