ಭಾರತ-ಶ್ರೀಲಂಕಾ ಮೊದಲ ಟ್ವೆಂಟಿ-20 ಪಂದ್ಯ ಮಳೆಗಾಹುತಿ

Update: 2020-01-06 05:48 GMT

ಗುವಾಹಟಿ, ಜ.5: ಭಾರತ-ಶ್ರೀಲಂಕಾದ ನಡುವೆ ಇಲ್ಲಿ ರವಿವಾರ ನಡೆಯಬೇಕಾಗಿದ್ದ ಮೊದಲ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯ ಒಂದೂ ಎಸೆತ ಕಾಣದೆ ಮಳೆಗಾಹುತಿಯಾಗಿದೆ.

ಟಾಸ್ ಪ್ರಕ್ರಿಯೆ ನಡೆದ ಬೆನ್ನಿಗೆ ಸುರಿದ ಮಳೆಯಿಂದಾಗಿ ಮೈದಾನ ಒದ್ದೆಯಾಗಿದ್ದು, ಹೀಗಾಗಿ ಪಂದ್ಯವನ್ನು ರದ್ದುಪಡಿಸಲಾಗಿದೆ. ಅಂಪೈರ್‌ಗಳು ಹಲವು ಬಾರಿ ಪಿಚ್‌ನ್ನು ಪರೀಕ್ಷಿಸಿದರು. ಒದ್ದೆಯಾಗಿದ್ದ ಪಿಚ್‌ನಿಂದಾಗಿ ಪಂದ್ಯ ನಡೆಸಲು ಸಾಧ್ಯವಾಗದಿದ್ದಾಗ ನೆರೆದಿದ್ದ ಸಾವಿರಾರು ಕ್ರಿಕೆಟ್ ಅಭಿಮಾನಿಗಳು ನಿರಾಶೆಗೊಂಡರು. ಮೈದಾನದ ಸಿಬ್ಬಂದಿ ಒದ್ದೆಯಾದ ಪಿಚ್‌ನ್ನು ಒಣಗಿಸಲು ಯಂತ್ರವನ್ನು ಬಳಸಿದರು. ಆದರೆ, ಇದರಿಂದ ಉಪಯೋಗವಾಗಲಿಲ್ಲ. ಸರಣಿಯ ಎರಡನೇ ಪಂದ್ಯ ಮಂಗಳವಾರ ಇಂದೋರ್‌ನಲ್ಲಿ ನಡೆಯಲಿದೆ. ಕೊನೆಯ ಪಂದ್ಯ ಜ.10ಕ್ಕ ಪುಣೆಯಲ್ಲಿ ನಿಗದಿಯಾಗಿದೆ.

ಟಾಸ್ ಜಯಿಸಿದ ಭಾರತದ ನಾಯಕ ವಿರಾಟ್ ಕೊಹ್ಲಿ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಭಾರತ ತಂಡದ ಆಡುವ 11ರ ಬಳಗಕ್ಕೆ ಪ್ರಮುಖ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಸುಮಾರು 4 ತಿಂಗಳುಗಳ ಬಳಿಕ ವಾಪಸಾಗಿದ್ದಾರೆ. ಮನೀಷ್ ಪಾಂಡೆ, ಸಂಜು ಸ್ಯಾಮ್ಸನ್, ಯಜುವೇಂದ್ರ ಚಹಾಲ್ ಹಾಗೂ ರವೀಂದ್ರ ಜಡೇಜ ಇಂದಿನ ಪಂದ್ಯದಲ್ಲಿ ಆಡುವ ಬಳಗವನ್ನು ಸೇರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News