ವಿದ್ಯಾಸಂಸ್ಥೆಗಳ ಮೇಲೆ ಪ್ರಭುತ್ವ ಎಸಗುತ್ತಿರುವ ಆಕ್ರಮಣ ವಿಷಾದನೀಯ: ಸಾಹಿತಿ ರಹಮತ್ ತರೀಕೆರೆ
ಬೆಂಗಳೂರು, ಜ.6: ಈಗ ನಾವೆಲ್ಲ ವಿವಾದದ ಕಾಲದಲ್ಲಿದ್ದೇವೆ. ಇಂತಹ ಸಂದರ್ಭದಲ್ಲಿ ಭಾರತಕ್ಕೆ ವಾಗ್ವಾದದ ಪರಂಪರೆ ಅಗತ್ಯವಿದೆ ಎಂದು ಸಾಹಿತಿ ರಹಮತ್ ತರೀಕೆರೆ ಅಭಿಪ್ರಾಯಪಟ್ಟರು.
ಸೋಮವಾರ ಕಸಾಪದ ಶ್ರೀ ಕೃಷ್ಣರಾಜ ಷರಿಷನ್ಮಂದಿರದಲ್ಲಿ ಅಭಿನವ 25ರ ಸಂಭ್ರಮ ಅಂಗವಾಗಿ ಹಮ್ಮಿಕೊಂಡಿದ್ದ ಬೆಳ್ಳಿ ಬೆಡಗು ಮಾಲಿಕೆಯ ಮೂರನೆಯ ಕಂತಿನ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಒಂದು ಭಿನ್ನಮತವನ್ನು ಸ್ವೀಕರಿಸದೇ ಇರುವವರೊಂದಿಗೆ ನಾವು ಬದುಕುತ್ತಿದ್ದೇವೆ. ನಮ್ಮ ಮಾತನ್ನು ಇನ್ನೊಂದು ಗುಂಪು, ಇನ್ನೊಂದು ಗುಂಪಿನ ಮಾತನ್ನು ನಾವು ಕೇಳದೇ ಇರುವದರಿಂದ ಸಮಾಜ ಹದಗೆಡುತ್ತಿದೆ. ಬಸವಣ್ಣನವರ ಪರಿಕಲ್ಪನೆಯ ಸಮಾಜ ನಿರ್ಮಾಣವಾಗಲು ಭಾರತಕ್ಕೆ ಸಂವಾದ ಹಾಗೂ ವಾಗ್ವಾದ ಸಂಸ್ಕೃತಿಯ ಅಗತ್ಯವಿದೆ. ಭಾರತದಲ್ಲಿ ಸಂವಿಧಾನ ಸರಿಯಾಗಿ ಪಾಲನೆ ಆಗುತ್ತಿಲ್ಲ. ಇಡೀ ಪ್ರಭುತ್ವ ವಿದ್ಯಾಸಂಸ್ಥೆಗಳ ಮೇಲೆ ಮಾಡುತ್ತಿರುವ ಆಕ್ರಮಣ ವಿಷಾದನೀಯ. ಭಾರತ ಬುದ್ಧಿವಿರೋಧಿ ಸಮಾಜವಾಗಿ ಬೆಳೆಯುತ್ತಿದೆ. ಉದಾಹರಣೆಗೆ ಸಾಹಿತಿ ಎಂ.ಎಂ ಕಲಬುರ್ಗಿಯಂತವರ ಬಗ್ಗೆ ಅರಿವಿಲ್ಲದೇ ಇರುವವರು ಅವರ ಸಾವನ್ನು ಸಂಭ್ರಮಿಸುತ್ತಾರೆ. ಇಂತಹ ಕಾಲದಲ್ಲಿ ನಾವಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಇಂದು ಭೀತಿ ಇಲ್ಲದೇ ಇರುವ ಸಮಾಜದ ನಿರ್ಮಾಣ ಅಗತ್ಯವಿದೆ. ತಮ್ಮ ತಮ್ಮ ಅಭಿಪ್ರಾಯಗಳನ್ನು ಯಾವುದೇ ಭೀತಿ ಇಲ್ಲದೇ ಹಂಚಿಕೊಳ್ಳುವ ವಾತಾವರಣ ಸೃಷ್ಟಿಯಾಗಬೇಕು. ಇದರಿಂದ ಭಾರತ ಭೌತಿಕವಾಗಿ ಬೆಳೆಯಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಸಾಹಿತಿ ರಹಮತ್ ತರೀಕೆರೆ ಅವರ ನ್ಯಾಯನಿಷ್ಠುರಿಗಳ ಜತೆಯಲ್ಲಿ ಹದಿನೈದು ಮಾತುಕತೆಗಳು, ಸಾಹಿತಿ ಶ್ರೀಧರ್ ಬಳಗಾರ ಅವರ ಮೃಗಶಿರ ಕಾದಂಬರಿ, ಹಿರಿಯ ಸಂಶೋಧಕ ಎಚ್.ಎಸ್.ಗೋಪಾಲರಾವ್ ಅವರ ಶಾಸನ ಅಧ್ಯಯನ ಕೆಲ ಹೆಜ್ಜೆಗುರುತುಗಳು, ಹಿರಿಯ ಬರಹಗಾರ ಆಹಿತಾನಲ ಅವರ ಕಾಲ ಉರುಳಿ ಉಳಿದುದು ನೆನಪಷ್ಟೆ! ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದ ಪ.ಸ ಕುಮಾರ್, ಸಾಹಿತಿ ಶ್ರೀಧರ್ ಬಳಗಾರ, ಹಿರಿಯ ಸಂಧೋಧಕ ಎಚ್.ಎಸ್. ಗೋಪಾಲರಾವ್, ಹಿರಿಯ ಬರಹಗಾರ ಆಹಿತಾನಲ, ಬೆಳ್ಳಿ ಬೆಡಗು ಮಾಲಿಕೆಯ ಪ್ರಧಾನ ಸಂಪಾದಕ ನರಹಳ್ಳಿ ಬಾಲಸುಬ್ರಮಣ್ಯ, ಸಂಪಾದಕರಾದ ಪಿ. ಚಂದ್ರಿಕಾ, ವಿಕ್ರಮ ವಿಸಾಜಿ ಉಪಸ್ಥಿತರಿದ್ದರು.