ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ: ಜ.10ರಂದು ಅಹೋರಾತ್ರಿ ಉಪವಾಸ ಸತ್ಯಾಗ್ರಹ

Update: 2020-01-06 18:25 GMT

ಬೆಂಗಳೂರು, ಜ.6: ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘವು ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಫ್ರೀಡಂ ಪಾರ್ಕ್‌ನಲ್ಲಿ ಜ.10ರಂದು ಬೆಳಗ್ಗೆ 11 ಗಂಟೆಯಿಂದ ಅಹೋರಾತ್ರಿ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದೆ ಎಂದು ಸಂಘದ ರಾಜ್ಯಾಧ್ಯಕ್ಷ ತಿಳಿಸಿದ್ದಾರೆ.

ಸೋಮವಾರ ಪ್ರೆಸ್‌ಕ್ಲಬ್‌ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏಪ್ರಿಲ್ 2016ರ ಮೊದಲು ನೇಮಕಗೊಂಡ ಅನುದಾನಕ್ಕೊಳಪಟ್ಟಿರುವ ಮತ್ತು ಏಪ್ರಿಲ್ 2016ರ ನಂತರ ನೇಮಕ ಹೊಂದಿ ವೇತನ ಪಡೆಯುತ್ತಿರುವ ಯಾವೊಬ್ಬ ನೌಕರರಿಗೂ ಹಳೆಯ ನಿಶ್ಚಿತ ಪಿಂಚಣಿಯಾಗಲಿ ಅಥವಾ ವಂತಿಕೆ ಆಧಾರಿತ ನೂತನ ಪಿಂಚಣಿ ಯೋಜನೆಯ ಸಾಲಭ್ಯವನ್ನಾಗಲಿ ರಾಜ್ಯ ಸರಕಾರ ನೀಡುತ್ತಿಲ್ಲ. ಆದ್ದರಿಂದ ಈ ಎರಡರಲ್ಲಿ ಒಂದನ್ನಾದರೂ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಜಾರಿಗೊಳಿಸುವಂತೆ ರಾಜ್ಯ ಸರಕಾರವನ್ನು ಆಗ್ರಹಿಸಲಾಗುವುದು ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಹೊರತುಪಡಿಸಿ ಇತರೇ ರಾಜ್ಯಗಳಲ್ಲಿ ಸರಕಾರಿ ಮತ್ತು ಅನುದಾನಿತ ನೌಕರರ ನಡುವೆ ಯಾವುದೇ ತಾರತಮ್ಯವಿಲ್ಲ. ಎಲ್ಲರಿಗೂ ಸಮಾನ ಪಿಂಚಣಿ ಸೌಲಭ್ಯ ನೀಡುವ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಆದರೆ, ಕರ್ನಾಟಕದಲ್ಲಿ ಮಾತ್ರ ಈ ರೀತಿಯಾಗಿ ಅನ್ಯಾಯವಾಗುತ್ತಿದೆ ಎಂದು ದೂರಿದರು.

ಈ ಅಹೋರಾತ್ರಿ ಉಪವಾಸ ಸತ್ಯಾಗ್ರಹದಲ್ಲಿ ವಿವಿಧ ಕಡೆಯಿಂದ 25 ಸಾವಿರಕ್ಕೂ ಹೆಚ್ಚು ಪಿಂಚಣಿ ವಂಚಿತ ನೌಕರರು ಆಗಮಿಸಲಿದ್ದಾರೆ. ಫ್ರೀಡಂ ಪಾರ್ಕ್‌ಗೆ ಒಂದು ಪ್ರತಿಭಟನಾ ರ್ಯಾಲಿ ಟೌನ್‌ಹಾಲ್ ಕಡೆಯಿಂದ ಬಂದರೆ ಇನ್ನೊಂದು ಪ್ರತಿಭಟನಾ ರ್ಯಾಲಿ ಮಲ್ಲೇಶ್ವರಂ ಮೂಲಕ ಫ್ರೀಡಂ ಪಾರ್ಕ್‌ಗೆ ಆಗಮಿಸಲಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News