ಕಿವೀಸ್ ವಿರುದ್ಧ ಕ್ಲೀನ್‌ಸ್ವೀಪ್ ಸಾಧಿಸಿದ ಆಸ್ಟ್ರೇಲಿಯ

Update: 2020-01-07 04:49 GMT

ಸಿಡ್ನಿ, ಜ.6: ಸ್ಪಿನ್ನರ್ ನಥಾನ್ ಲಿಯೊನ್ ಐದು ವಿಕೆಟ್ ಗೊಂಚಲು(5-50)ನೆರವಿನಿಂದ ಆಸ್ಟ್ರೇಲಿಯ ತಂಡ ನ್ಯೂಝಿಲ್ಯಾಂಡ್ ವಿರುದ್ಧ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವನ್ನು 279 ರನ್‌ಗಳ ಅಂತರದಿಂದ ಗೆದ್ದುಕೊಂಡಿತು. ಸರಣಿಯುದ್ದಕ್ಕೂ ಸಂಪೂರ್ಣ ಪ್ರಾಬಲ್ಯ ಸಾಧಿಸಿದ ಆಸ್ಟ್ರೇಲಿಯ 3 ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ಗೆದ್ದುಕೊಂಡು ಕ್ಲೀನ್‌ಸ್ವೀಪ್ ಸಾಧಿಸಿತು.

ನಾಲ್ಕನೇ ದಿನವಾದ ಸೋಮವಾರ ಆಸ್ಟ್ರೇಲಿಯ ತನ್ನ ಎರಡನೇ ಇನಿಂಗ್ಸ್‌ನಲ್ಲಿ 2 ವಿಕೆಟ್ ನಷ್ಟಕ್ಕೆ 217 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿತು. ಕಿವೀಸ್ ಪಡೆಗೆ ಗೆಲ್ಲಲು 416 ರನ್ ಕಠಿಣ ಗುರಿ ನೀಡಿತು.

  ಗೆಲ್ಲಲು ಕಠಿಣ ಗುರಿ ಪಡೆದ ಕಿವೀಸ್‌ನ್ನು 47.5 ಓವರ್‌ಗಳಲ್ಲಿ 136 ರನ್‌ಗೆ ನಿಯಂತ್ರಿಸಿದ ಆತಿಥೇಯರು ಭರ್ಜರಿ ಜಯ ದಾಖಲಿಸಿದರು. ಲಿಯೊನ್(5-50) ಹಾಗೂ ಸ್ಟಾರ್ಕ್(3-25)ಕಿವೀಸ್‌ನ್ನು ಕಡಿಮೆ ಮೊತ್ತಕ್ಕೆ ಕಡಿವಾಣ ಹಾಕಿದರು.

1985-86ರ ಬಳಿಕ ಮೊದಲ ಬಾರಿ ಕಾಂಗರೂ ನಾಡಿನಲ್ಲಿ ಟೆಸ್ಟ್ ಸರಣಿ ಗೆಲುವಿನ ವಿಶ್ವಾಸದೊಂದಿಗೆ ಆಸ್ಟ್ರೇಲಿಯಕ್ಕೆ ಬಂದಿತ್ತು. ಆಟಗಾರರ ಗಾಯಾಳು ಸಮಸ್ಯೆ ಹಾಗೂ ಅನಾರೋಗ್ಯದ ಕಾರಣದಿಂದ ಸರಣಿಯಲ್ಲಿ ಹೀನಾಯವಾಗಿ ಸೋತು ತವರಿಗೆ ವಾಪಸಾಗುತ್ತಿದೆ.

ನಾಯಕ ಕೇನ್ ವಿಲಿಯಮ್ಸನ್ ಹಾಗೂ ಬ್ಯಾಟ್ಸ್‌ಮನ್ ಹೆನ್ರಿ ನಿಕೊಲ್ಸ್ ವೈರಲ್ ಜ್ವರದಿಂದಾಗಿ ಕೊನೆಯ ಪಂದ್ಯವನ್ನು ಆಡಿರಲಿಲ್ಲ. ಆಸ್ಟ್ರೇಲಿಯದ ಬಿರುಗಾಳಿ ವೇಗದ ಬೌಲಿಂಗ್ ಹಾಗೂ ಲಿಯೊನ್ ಅವರ ಸ್ಪಿನ್ ಮೋಡಿಗೆ ನ್ಯೂಝಿಲ್ಯಾಂಡ್ ನಿರುತ್ತರವಾಯಿತು.

4ನೇ ದಿನವಾದ ಸೋಮವಾರ ಲಿಯೊನ್‌ಗೆ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್(3-25) ಕಿವೀಸ್ ಬಾಲಂಗೋಚಿಗಳನ್ನು ಬೇಗನೆ ಔಟ್ ಮಾಡಿ ಸಾಥ್ ನೀಡಿದರು. ಮೊದಲ ಇನಿಂಗ್ಸ್ ನಲ್ಲಿ ಐದು ವಿಕೆಟ್(5-68)ಪಡೆದಿದ್ದ ಲಿಯೊನ್ ಪಂದ್ಯದಲ್ಲಿ ಒಟ್ಟು 10 ವಿಕೆಟ್‌ಗಳ ಗೊಂಚಲನ್ನು ಪಡೆದು ಮಿಂಚಿದರು.

ರನ್ ಚೇಸಿಂಗ್‌ನ ವೇಳೆ ಕಿವೀಸ್ 22 ರನ್‌ಗೆ 4 ವಿಕೆಟ್‌ಗಳನ್ನು ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು. ಕಾಲಿನ್ ಡಿ ಗ್ರಾಂಡ್‌ಹೋಮ್(52)ಅರ್ಧಶತಕ ಗಳಿಸಿ ತಂಡವನ್ನು ಆಧರಿಸಲು ಯತ್ನಿಸಿದರು. ಆದರೆ, ಅವರಿಗೆ ಉಳಿದ ಆಟಗಾರರಿಂದ ಬೆಂಬಲ ಸಿಗಲಿಲ್ಲ. ಡೇವಿಡ್ ವಾರ್ನರ್ ಹಾಗೂ ಮಾರ್ನಸ್ ಲ್ಯಾಬುಶೆನ್ ಉತ್ತಮ ಬ್ಯಾಟಿಂಗ್ ಮುಂದುವರಿಸಿದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯ ತಂಡ ಪಾಕಿಸ್ತಾನ ಹಾಗೂ ನ್ಯೂಝಿಲ್ಯಾಂಡ್ ವಿರುದ್ಧ ಸ್ವದೇಶದಲ್ಲಿ ಐದು ಟೆಸ್ಟ್ ಪಂದ್ಯಗಳಲ್ಲಿ ಜಯ ದಾಖಲಿಸಿದೆ.

ವಾರ್ನರ್ ತನ್ನ ತವರು ಮೈದಾನದಲ್ಲಿ 24ನೇ ಟೆಸ್ಟ್ ಶತಕ(ಔಟಾಗದೆ 111, 159 ಎಸೆತ, 9 ಬೌಂಡರಿ)ಗಳಿಸಿದರು. ಆರಂಭಿಕ ಆಟಗಾರ ವಾರ್ನರ್ ಪಾಕಿಸ್ತಾನ ವಿರುದ್ಧ ಸ್ವದೇಶದಲ್ಲಿ ನಡೆದ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ 154 ಹಾಗೂ ಔಟಾಗದೆ 335 ರನ್ ಗಳಿಸಿದ್ದರು. ಆದರೆ, ನ್ಯೂಝಿಲ್ಯಾಂಡ್ ವಿರುದ್ಧ ಸರಣಿಯಲ್ಲಿ ಐದು ಇನಿಂಗ್ಸ್‌ಗಳಲ್ಲಿ ರನ್ ಬರ ಎದುರಿಸಿದ್ದರು.

ಸೋಮವಾರ ಆಸ್ಟ್ರೇಲಿಯ ವಿಕೆಟ್ ನಷ್ಟವಿಲ್ಲದೆ 40 ರನ್‌ನಿಂದ 2ನೇ ಇನಿಂಗ್ಸ್ ಮುಂದುವರಿಸಿತು. 23 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ವಾರ್ನರ್ 147 ಎಸೆತಗಳಲ್ಲಿ ಮೂರಂಕೆಯನ್ನು ದಾಟಿದರು. ಜೋ ಬರ್ನ್ಸ್ 40 ರನ್ ಗಳಿಸಿ ಔಟಾದಾಗ ವಾರ್ನರ್‌ರೊಂದಿಗೆ ಕೈಜೋಡಿಸಿದ ಲ್ಯಾಬುಶೆನ್ ಈ ವರ್ಷ ಆಸ್ಟ್ರೇಲಿಯದಲ್ಲಿ ನಡೆದ 5 ಟೆಸ್ಟ್ ಪಂದ್ಯದಲ್ಲಿ ಏಳನೇ ಬಾರಿ ಅರ್ಧಶತಕ ಗಳಿಸಿದರು.

ಮೊದಲ ಇನಿಂಗ್ಸ್‌ನಲ್ಲಿ ಚೊಚ್ಚಲ ದ್ವಿಶತಕ ಸಿಡಿಸಿ ಆಸ್ಟ್ರೇಲಿಯ 454 ರನ್ ಗಳಿಸಲು ನೆರವಾಗಿದ್ದ ಲ್ಯಾಬುಶೆನ್ ಇಂದು 59 ರನ್(74 ಎಸೆತ, 3 ಬೌಂಡರಿ) ಗಳಿಸಿ ಔಟಾದ ಬೆನ್ನಿಗೆ ನಾಯಕ ಟಿಮ್ ಪೈನ್ ಆಸ್ಟ್ರೇಲಿಯದ 2ನೇ ಇನಿಂಗ್ಸ್ ಡಿಕ್ಲೇರ್ ಮಾಡಿದರು.

ವಾರ್ನರ್ ಸ್ವದೇಶದಲ್ಲಿ ನಡೆದ 5 ಟೆಸ್ಟ್ ಪಂದ್ಯಗಳಲ್ಲಿ 131ರ ಸರಾಸರಿಯಲ್ಲಿ ಒಟ್ಟು 786 ರನ್ ಗಳಿಸಿದರೆ, ಲ್ಯಾಬುಶೆನ್ 112ರ ಸರಾಸರಿಯಲ್ಲಿ 896 ರನ್ ಗಳಿಸಿದರು.

ಸರಣಿಯುದ್ದಕ್ಕೂ ಸ್ಥಿರ ಪ್ರದರ್ಶನ ನೀಡಿ ಗಮನ ಸೆಳೆದಿದ್ದ ಲ್ಯಾಬುಶೆನ್ ಪಂದ್ಯಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಎರಡೂ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.

ಸಂಕ್ಷಿಪ್ತ ಸ್ಕೋರ್

ಆಸ್ಟ್ರೇಲಿಯ ಮೊದಲ ಇನಿಂಗ್ಸ್: 454/10

 ನ್ಯೂಝಿಲ್ಯಾಂಡ್ ಮೊದಲ ಇನಿಂಗ್ಸ್: 256/10

 ಆಸ್ಟ್ರೇಲಿಯ ಎರಡನೇ ಇನಿಂಗ್ಸ್: 52 ಓವರ್‌ಗಳಲ್ಲಿ 217/2 ಡಿಕ್ಲೇರ್

(ವಾರ್ನರ್ ಔಟಾಗದೆ 111, ಲ್ಯಾಬುಶೆನ್ 59, ಬರ್ನ್ಸ್ 40,ಅಸ್ಟ್ಲೆ 1-41, ಹೆನ್ರಿ 1-54)

 ನ್ಯೂಝಿಲ್ಯಾಂಡ್ ಎರಡನೇ ಇನಿಂಗ್ಸ್: 47.5 ಓವರ್‌ಗಳಲ್ಲಿ 136/10

(ಗ್ರಾಂಡ್‌ಹೋಮ್ 52, ಟೇಲರ್ 22, ಲಿಯೊನ್ 5-50, ಸ್ಟಾರ್ಕ್ 3-25)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News